#MeToo ಅಭಿಯಾನ: ರಘು ದೀಕ್ಷಿತ್‌ ವಿರುದ್ಧದ ಆರೋಪ ಪರ ನಿಂತ ಪತ್ನಿ ಮಯೂರಿ

ಚೆನ್ನೈ: ಬಾಲಿವುಡ್‌ನಲ್ಲಿ ಹೊತ್ತಿಕೊಂಡ #ಮೀ ಟೂ ಅಭಿಯಾನದ ಕಿಡಿಯಿಂದಾಗಿ ಪ್ರಖ್ಯಾತ ಗಾಯಕ, ಸಂಗೀತ ನಿರ್ದೇಶಕ, ಕನ್ನಡಿಗ ರಘು ದೀಕ್ಷಿತ್ ವಿರುದ್ಧ ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದ ಪರ ರಘು ದೀಕ್ಷಿತ್‌ ಅವರ ಪತ್ನಿ ಮಯೂರಿ ಬ್ಯಾಟಿಂಗ್‌ ಮಾಡಿದ್ದಾರೆ.

ಸಹ ಗಾಯಕರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಯೂರಿ ಉಪಾಧ್ಯಾಯ ಟ್ವೀಟ್​ ಮಾಡಿದ್ದು, #MeToo ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಾತ್ಮಕವಾಗಿ ಶಿಕ್ಷೆ ಆಗಬೇಕು. ಆಗ ಇತರೆ ಪುರುಷರು ಕಿರುಕುಳ ನೀಡುವ ಧೈರ್ಯ ಮಾಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಮಯೂರಿ ಅವರು, ಇಲ್ಲಿ ನನ್ನ ಮದುವೆ ಮತ್ತು ಡಿವೋರ್ಸ್​ ವಿಚಾರ ಅಪ್ರಸ್ತುತ. ನಾನು ಪತ್ನಿಯಾಗುವುದಕ್ಕಿಂತ ಮುಂಚೆ ಮಹಿಳೆ. ಅವರು ಸೆಲೆಬ್ರಿಟಿ ಇರಲಿ ಅಥವಾ ಇಲ್ಲದಿರಲಿ ಪ್ರತಿಯೊಬ್ಬರಿಗೂ ಗೌರವ ಪ್ರಮುಖವಾಗುತ್ತದೆ. ಇದೆಷ್ಟು ಸರಿ ಎಂದು ನನಗೆ ತಿಳಿದಿಲ್ಲ. ಆದರೆ, ಒಬ್ಬ ಮಹಿಳೆ ಹೊರಬಂದು ಈ ರೀತಿ ಆರೋಪ ಮಾಡಲು ಧೈರ್ಯ ಬೇಕು ಎಂದು ಹೇಳಿದ್ದಾರೆ.

ಗಾಯಕಿ ಮತ್ತು ಚಿನ್ಮಯಿ ಶ್ರೀಪಾದ ಅವರು ತನ್ನ ಸಹ ಗಾಯಕರ ಸಂಭಾಷಣೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅವರು ಸಹಗಾಯಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಾಯಕ ರಘು ದೀಕ್ಷಿತ್‌ ಅವರು ಟ್ವಿಟರ್‌ ಮೂಲಕವೇ ಬಹಿರಂಗ ಕ್ಷಮೆಯಾಚಿಸಿದ್ದರು. ಚಿನ್ಮಯಿ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಘಟನೆ ನಿಜ. ಆದರೆ, ಅದು ಅವರು ಹೇಳಿದ ರೀತಿಯಲ್ಲಿರಲಿಲ್ಲ. ನನ್ನಿಂದ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು. (ಏಜೆನ್ಸೀಸ್)

***

Note from Kannada.Club : This story has been auto-generated from a syndicated feed from http://vijayavani.net/chinmayis-co-singers-accused-raghu-dixit-of-sexual-harassment-his-wife-mayuri-stands-with-victim/