23ಕ್ಕೆ ಜಿಪಂ ಸ್ಥಾಯಿ ಸಮಿತಿಗೆ ಚುನಾವಣೆ

ಬೆಳಗಾವಿ: ಜಿಪಂ ಎರಡನೇ ಅವಧಿಗೆ ಸ್ಥಾಯಿ ಸಮಿತಿ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆಗೆ ಜು.23 ರಂದು ಜಿಪಂ ಸಭಾಂಗಣದಲ್ಲಿ ಚುನಾವಣೆ ಜರುಗಲಿದೆ ಎಂದು ಸಿಇಒ ರಾಮಚಂದ್ರನ್ ಆರ್.ತಿಳಿಸಿದ್ದಾರೆ.

ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸಮಿತಿ ಸದಸ್ಯ ಸ್ಥಾನಗಳಿಗೆ ಹಾಗೂ ಸಮಿತಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಜರುಗಲಿದೆ.

ನಾಮಪತ್ರಗಳು ಕ್ರಮಬದ್ಧವಾಗಿರುವ ಮತ್ತು ತಮ್ಮ ಉಮೇದುವಾರಿಕೆಯನ್ನು ಹಿಂದೆ ತೆಗೆದುಕೊಳ್ಳದೆ ಆಯಾ ಸ್ಥಾಯಿ ಸಮಿತಿಗಳಿಗೆ ಚುನಾಯಿಸತಕ್ಕ ಸದಸ್ಯರ ಸಂಖ್ಯೆಗಳಿಗಿಂತ ಹೆಚ್ಚಿಗೆ ಇದ್ದರೆ ಗೊತ್ತುಪಡಿಸಿದ ಅಧಿಕಾರಿಯು ಚುನಾವಣೆಯನ್ನು ಗುಪ್ತ ಮತದಾನ ಪದ್ಧತಿಯಂತೆ ನಡೆಸುವುದು. ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಮುಗಿದ ಅರ್ಧ ಗಂಟೆ ನಂತರ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಜರುಗಿಸಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ: ಬೆಳಗ್ಗೆ 10.30 ರಿಂದ 11.30ರ ಅವಧಿಯಲ್ಲಿ ನಾಮಪತ್ರ ಸಲ್ಲಿಕೆ. ಬೆಳಗ್ಗೆ 11.30ರಿಂದ 12 ಗಂಟೆಯವರೆಗೆ ನಾಮಪತ್ರ ಪರಿಶೀಲನೆ. ಮಧ್ಯಾಹ್ನ 12 ರಿಂದ 12.30 ಗಂಟೆವರೆಗೆ ಉಮೇದುವಾರಿಕೆ ಹಿಂಪಡೆದುಕೊಳ್ಳಲು ಅವಕಾಶ. ಮಧ್ಯಾಹ್ನ 1.30 ಗಂಟೆಗೆ ಸದಸ್ಯರ ಹಾಜರಾತಿ.

***

Note from Kannada.Club : This story has been auto-generated from a syndicated feed from http://vijayavani.net/belgaum-23rd-jpp-standing-committee-elections/