ಹಿಂದೂ -ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಕೂರಿಸುತ್ತಿರುವ ದೆಹಲಿ ಶಾಲೆ

ನವದೆಹಲಿ : ವಾಝಿರಾಬಾದಿನಲ್ಲಿರುವ ಖಾಸಗಿ ಶಾಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಕೂರಿಸಲಾಗಿದೆ ಎಂದು ಉತ್ತರ ದೆಹಲಿ ಮುನಿಸಿಪಲ್ ಕಾರ್ಪೊರೇಶನ್ ನಡೆಸುವ ಶಾಲೆಗಳ ಕೆಲ ಶಿಕ್ಷಕರು ಆರೋಪಿಸಿದ್ದಾರೆ.

ಶಾಲೆಯ ಉಸ್ತುವಾರಿ ಮುಖ್ಯ ಶಿಕ್ಷಕ ಸಿ ಬಿ ಸಿಂಗ್ ಸೆಹ್ರಾವತ್ ಈ ಆರೋಪವನ್ನು ನಿರಾಕರಿಸಿದ್ದರಾದರೂ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಗಮನಿಸಿ ಕೆಲ ಮಾರ್ಪಾಟುಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕ ಸೆಕ್ಷನ್ನುಗಳಲ್ಲಿ ಕೂರಿಸುವ ಪದ್ಧತಿ ಸೆಹ್ರಾವತ್ ಅವರು ಈ ವರ್ಷದ ಜುಲೈ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇಪ್ಪತ್ತು ದಿನಗಳ ಹಿಂದೆ ಕೆಲ ಶಿಕ್ಷಕರು ಎಂಸಿಡಿ ವಲಯ ಕಚೇರಿಗೆ ಹೋಗಿ ಈ ಬಗ್ಗೆ ದೂರಿ ಕೊಂಡಿದ್ದರೂ ಮುಖ್ಯೋಪಾಧ್ಯಾಯರಿಂದ ಕ್ರಮಕ್ಕೆ ಬೆದರಿ ಲಿಖಿತ ದೂರು ನೀಡಿಲ್ಲ. ತಮ್ಮ ತರಗತಿಗಳಲ್ಲಿ ಇನ್ನೊಂದು ಧರ್ಮದ ವಿದ್ಯಾರ್ಥಿಗಳಿಲ್ಲ, ತಮ್ಮ ಸ್ನೇಹಿತರನ್ನು ಇನ್ನೊಂದು ವಿಭಾಗಕ್ಕೆ ಹಾಕಲಾಗಿದೆ ಎಂದು ಕೆಲ ವಿದ್ಯಾರ್ಥಿಗಳೂ ತಮ್ಮ ಹೆತ್ತವರೊಡನೆ ಹೇಳಿಕೊಂಡಿದ್ದಾರೆನ್ನಲಾಗಿದೆ.

ಮುಖ್ಯೋಪಾಧ್ಯಾಯ ಸಸ್ಪೆಂಡ್

ವಿದ್ಯಾರ್ಥಿಗಳನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿ ಹಿಂದು, ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಕೂರಿಸಿ ತರಗತಿಗಳನ್ನು ನಡೆಸಿದ ಆರೋಪದ ಮೇಲೆ  ವಝೀರಾಬಾದ್ ಶಾಲೆಯ ಉಸ್ತುವಾರಿ ಮುಖ್ಯೋಪಾಧ್ಯಾಯ ಸಿ ಬಿ ಸಿಂಗ್ ಸೆಹ್ರಾವತ್ ಅವರನ್ನು  ಸೇವೆಯಿಂದ ವಜಾಗೊಳಿಸಲಾಗಿದೆ. ಮುಖ್ಯೋಪಾಧ್ಯಾಯರ ಈ ಕ್ರಮ ಊಹಿಸಲಸಾಧ್ಯ ಹಾಗೂ ಅಕ್ಷಮ್ಯ ಎಂದು  ಉತ್ತರ ದೆಹಲಿ ಮುನಿಸಿಪಲ್ ಆಯುಕ್ತ ಮಧುಪ್ ವ್ಯಾಸ್ ಹೇಳಿದ್ದಾರೆ

 

***

Note from Kannada.Club : This story has been auto-generated from a syndicated feed from http://karavaliale.net/delhi-school-which-holds-hindu-muslim-students-in-separate-disciplines/