ಹಳೇ ಮೈಸೂರಿಗೆ ಕಮಲ ಸ್ಕೆಚ್

ಬೆಂಗಳೂರು: ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಈ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಹಳೇ ಮೈಸೂರು ಭಾಗ ಪ್ರವೇಶಕ್ಕೆ ತಂತ್ರ ಹೆಣೆದಿದೆ. ಈ ಮೂಲಕ 2019ರ ಲೋಕಸಭೆ ಚುನಾಣೆಗೆ ಅಖಾಡ ಸಜ್ಜುಗೊಳಿಸುತ್ತಿದೆ.

ಮೈತ್ರಿ ಸರ್ಕಾರದ ಎರಡೂ ಪಕ್ಷಗಳ ನಡುವೆ ಇರುವ ವ್ಯತ್ಯಾಸವನ್ನೇ ಪ್ರಮುಖ ಅಸ್ತ್ರವಾಗಿಸಿಕೊಳ್ಳುವ ಸಲುವಾಗಿ ಬುಧವಾರ ಸರಣಿ ಸಭೆಗಳನ್ನು ನಡೆಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಡಾಲರ್ಸ್ ಕಾಲನಿ ನಿವಾಸದಲ್ಲಿ ರಾಮನಗರ ಚುನಾವಣೆ ಹಾಗೂ ಟಿಕೆಟ್ ಹಂಚಿಕೆ ಕುರಿತು ಸಭೆ ನಡೆಸಿದರು. ಅತ್ತ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆ ಉಸ್ತುವಾರಿ ಆರ್. ಅಶೋಕ್ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಪ್ರಮುಖರ, ಪದಾಧಿಕಾರಿಗಳ ಸಭೆ ನಡೆಸಲಾಯಿತು. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣಗೌಡ, ರಾಮನಗರಕ್ಕೆ ಜಿಲ್ಲಾಧ್ಯಕ್ಷ ರುದ್ರೇಶ್ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ಅಥವಾ ಶುಕ್ರವಾರ ಅಧಿಕೃತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಭಾವಿಗಳನ್ನೇ ನೀಡಿ: ಮಂಡ್ಯ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, 2019ರ ಚುನಾವಣೆಗೆ ಈಗಿನಿಂದಲೇ ತಯಾರಿ ಎಂದು ಭಾವಿಸಿದೆ. ಸದ್ಯ ಮಂಡ್ಯದ ಮಟ್ಟಿಗೆ ಪ್ರಭಾವಿ ಎನ್ನಬಹುದಾದ ನಾಲ್ವರ ಹೆಸರು ಬುಧವಾರದ ಸಭೆಯಲ್ಲಿ ಚರ್ಚೆಯಾಗಿದೆ. ಮಂಡ್ಯ ಉಸ್ತುವಾರಿಯಾಗಿದ್ದ ಆರ್.ಅಶೋಕ್, ಸಿ.ಪಿ. ಯೋಗೇಶ್ವರ್, ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹಾಗೂ ಮಂಡ್ಯ ಚುನಾವಣಾ ಉಸ್ತುವಾರಿಯಾಗಿದ್ದ ಅಶ್ವತ್ಥನಾರಾಯಣಗೌಡ ಹೆಸರು ಪ್ರಮುಖವಾಗಿದೆ. ಅಶೋಕ್ ಅವರನ್ನು ಬೆಂಗಳೂರಿನಿಂದ ಹೊರಕಳಿಸುವುದು ಬೇಡ. ತೇಜಸ್ವಿನಿ ಅವರು ಇತ್ತೀಚೆಗಷ್ಟೇ ಪರಿಷತ್​ಗೆ ಆಯ್ಕೆಯಾಗಿದ್ದು, ಇನ್ನೂ ಐದೂವರೆ ವರ್ಷ ಅವಧಿ ಇದೆ. ಯೋಗೇಶ್ವರ್ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಅಶ್ವತ್ಥ ನಾರಾಯಣಗೌಡ ಹೆಸರು ಸೂಕ್ತ. ಯಾರನ್ನೇ ಅಭ್ಯರ್ಥಿಯಾಗಿಸಿದರೂ ಒಟ್ಟಾಗಿ ಕೆಲಸ ಮಾಡುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಮಂಡ್ಯದಲ್ಲಿ ಗೆಲ್ಲುವ ಅಭ್ಯರ್ಥಿ ಸದ್ಯ ಕಣ್ಣಮುಂದಿಲ್ಲ ನಿಜ. ಆದರೂ ಸಮರ್ಥ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ. ಒಂದೆರಡು ದಿನದಲ್ಲಿ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಈಗ ಘೋಷಣೆಯಾಗುವ ಅಭ್ಯರ್ಥಿ ಗೆದ್ದರೂ, ಸೋತರೂ 2019ಕ್ಕೆ ಅವರನ್ನೇ ಮುಂದುವರಿಸಬೇಕು ಎಂಬ ನಿರ್ಧಾರದಲ್ಲಿ ಆಯ್ಕೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಚಂದ್ರಶೇಖರ್ ಸೆಳೆದ ಭಾಜಪ

ಅನೇಕ ದಿನಗಳಿಂದ ಕೇಳಿಬರುತ್ತಿದ್ದ ಸುದ್ದಿಗೆ ಪೂರಕವಾಗಿ ಕಾಂಗ್ರೆಸ್ ಶಾಸಕ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರು ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಸಿ.ಪಿ. ಯೋಗೇಶ್ವರ್ ಹಾಗೂ ರುದ್ರೇಶ್ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಯಾವುದೇ ಷರತ್ತು ಇಲ್ಲದೆ ಚಂದ್ರಶೇಖರ್ ಪಕ್ಷ ಸೇರಿದ್ದಾರೆ. ರಾಮನಗರದಲ್ಲಿ ಪಕ್ಷಕ್ಕೆ ಉತ್ತಮ ಅವಕಾಶ ಇದೆ. ಚಂದ್ರಶೇಖರ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಒಂದೆರಡು ದಿನದಲ್ಲಿ ಅಭ್ಯರ್ಥಿ ಘೊಷಣೆ ಮಾಡುತ್ತೇವೆ ಎಂದರು.

ಚಂದ್ರಶೇಖರ್ ಮಾತನಾಡಿ, ಬಿಜೆಪಿ ಸೇರ್ಪಡೆ ಹಿಂದೆ ಯಾರದೇ ಒತ್ತಡ ಇಲ್ಲ. ತಂದೆಯವರೂ ನನ್ನ ಸ್ವಂತ ನಿರ್ಧಾರಕ್ಕೆ ಅವಕಾಶ ನೀಡಿದ್ದರು. ಕಾಂಗ್ರೆಸ್​ನಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ ಬಲಪಡಿಸುವ ಕಾರ್ಯ ಮಾಡುತ್ತೇನೆ ಎಂದಿದ್ದಾರೆ. ಮೂಲಗಳ ಪ್ರಕಾರ, ತಮಗೆ ಟಿಕೆಟ್ ನೀಡಲೇಬೇಕು ಎಂದು ಚಂದ್ರಶೇಖರ್ ಒತ್ತಡ ಹೇರುತ್ತಿಲ್ಲವಾದರೂ, ಪಕ್ಷ ನಿರ್ಧರಿಸಿದಂತೆ ನಡೆಯುತ್ತದೆ ಎಂದಿದ್ದಾರೆ.

ತಂದೆ ಕಾಂಗ್ರೆಸ್-ಪುತ್ರ ಬಿಜೆಪಿ

ರಾಮನಗರ ವಿಧಾನಸಭೆ ಕ್ಷೇತ್ರದ ಮಟ್ಟಿಗೆ ಸಿ.ಎಂ.ಲಿಂಗಪ್ಪ ಅವರು ಕಾಂಗ್ರೆಸ್​ನ ಪ್ರಮುಖ ನಾಯಕ. ರಾಮನಗರ ವಿಧಾನಸಭೆಯಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದವರು. 1997ರಲ್ಲಿ ಅಂದಿನ ಸಿಎಂ ಆಗಿದ್ದ ದೇವೇಗೌಡರು ಪ್ರಧಾನಿಯಾದ ನಂತರ ಅವರಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿತ್ರನಟ ಅಂಬರೀಷ್​ರನ್ನು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಸಿ.ಎಂ.ಲಿಂಗಪ್ಪ ಸೋಲಿಸಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪರಾಭವಗೊಂಡಿದ್ದರು. ಲಿಂಗಪ್ಪ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ವಿರುದ್ಧವೇ ರಾಜ ಕಾರಣ ಮಾಡಿಕೊಂಡು ಬಂದವರು. ಸದ್ಯ ಪುತ್ರ ಬಿಜೆಪಿ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ.

***

Note from Kannada.Club : This story has been auto-generated from a syndicated feed from http://vijayavani.net/bjp-ramanagara-by-election-assembly-election-lok-sabha-election-bs-yeddyurappa-bsy/