ಸಾಲಮನ್ನಾಕ್ಕೆ ಬಿಜೆಪಿಯವರು ನಯಾಪೈಸೆ ತರಲಿಲ್ಲ

ಬೆಂಗಳೂರು: ಸಾಲಮನ್ನಾ ವಿಚಾರವಾಗಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ದುಡ್ಡು ಕೊಡುತ್ತೇವೆಂದರೂ ಬ್ಯಾಂಕ್‌ಗಳು ಮಾಹಿತಿ ನೀಡುತ್ತಿಲ್ಲವೆಂದರೆ ಏನು ಮಾಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿ, ಬಿಜೆಪಿಯವರು ಸಾಲಮನ್ನಾ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಿಸಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕೇಂದ್ರದ ಅಧೀನದಲ್ಲಿವೆ. ಬಿಜೆಪಿ ರಾಜಕೀಯ ಮಾಡುವುದನ್ನು ಬಿಟ್ಟು, ಸಾಲಮನ್ನಾ ಕುರಿತು ಮಾಹಿತಿಯನ್ನಾದರೂ ನೀಡುವಂತೆ ಸೂಚಿಸಲಿ ಎಂದರು.

ನವಂಬರ್‌ನಿಂದ ಹಣ ಬಿಡುಗಡೆ:

ಬಿಜೆಪಿಯವರು ಕೇಂದ್ರ ಸರಕಾರದೊಂದಿಗೆ ಮಾತನಾಡಿ ಬ್ಯಾಂಕ್‌ಗಳಿಂದ ಮಾಹಿತಿ ತರಿಸಿಕೊಟ್ಟರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ. ನಾವು ಸಾಲಮನ್ನಾ ಮಾಡಲು ತಯಾರಿದ್ದೇವೆ. ರಿಸರ್ವ್ ಬ್ಯಾಂಕ್‌ನಿಂದ ನಿರ್ದೇಶನ ಮಾಡಿಸಿ ಮಾಹಿತಿ ಕೊಡಿಸಲಿ. ಬೇಗ ಸಾಲಮನ್ನಾ ಆಗುತ್ತದೆ. ನವೆಂಬರ್‌ನಿಂದ ಹಂತ ಹಂತವಾಗಿ ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ 6,500 ಕೋಟಿ ರು. ಬಿಡುಗಡೆ ಮಾಡಲು ಸಿದ್ಧರಿದ್ದೇವೆ ಎಂದು ವಿವರಿಸಿದರು.

ದುಡ್ಡು ನೀಡಲು ಬ್ಯಾಂಕ್‌ಗಳು ಮಾಹಿತಿ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಾಪ್ತಿಗೆ ಬರುತ್ತದೆ. ಡೇಟಾ ಬೇಸ್ ಕೊಡಿಸುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ. ಸರಕಾರದಲ್ಲಿ ದುಡ್ಡಿನ ಸಮಸ್ಯೆ ಇಲ್ಲ. ಸಾಲಮನ್ನಾ ಹಣ ನೀಡಲು ಸಿದ್ಧ ಎಂದರು.

ಬ್ಯಾಂಕ್‌ಗಳು ನೋಟಿಸ್ ನೀಡಿಲ್ಲ

ಬ್ಯಾಂಕ್‌ಗಳು ನೋಟಿಸ್ ನೀಡಿಲ್ಲ. ಬದಲಿಗೆ, ತಿಳಿವಳಿಕೆ ಪತ್ರ ನೀಡಿವೆ. ಒನ್ ಟೈಮ್ ಸೆಟ್‌ಲ್ಮೆಂಟ್‌ಗೆ ತಯಾರಾಗಿದ್ದೀರಾ, ಬಡ್ಡಿ ಕಡಿಮೆ ಮಾಡುತ್ತೇವೆ ಎಂದು ತಿಳಿವಳಿಕೆ ಪತ್ರ ನೀಡಿವೆ. ಈ ಮಾಹಿತಿ ಕೇಳಲು ಅಧಿಕಾರಿಗಳ ತಂಡವನ್ನು ಬಿಡಲಾಗಿದೆ. ನ.1ರಿಂದ ಹಣ ಬಿಡುಗಡೆ ಮಾಡಬೇಕಿದೆ. ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

The post ಸಾಲಮನ್ನಾಕ್ಕೆ ಬಿಜೆಪಿಯವರು ನಯಾಪೈಸೆ ತರಲಿಲ್ಲ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/bjp-did-not-give-napaisise-to-loan-waiver/