ಸರ್ಕಾರ ಬೀಳಿಸಲು ಕಿಂಗ್​ಪಿನ್​ಗಳಿಂದ ಬಿಜೆಪಿ ಹಣ ಸಂಗ್ರಹಿಸುತ್ತಿದೆ: ಸಿಎಂ ಎಚ್​ಡಿಕೆ

ಬೆಂಗಳೂರು: ಅಕ್ರಮ ಹಣದಿಂದ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ. ಲಾಟರಿ,ಇಸ್ಪೀಟ್ ದಂಧೆ ನಡೆಸುತ್ತಿದ್ದವರಿಂದ ಹಣವನ್ನು ಬಿಜೆಪಿ ಈ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿಗೆ ಹಣ ನೀಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಜೆಪಿ ಪಕ್ಷ ಕಿಂಗ್​ಪಿನ್​ಗಳ ಮೂಲಕ ಹಣ ಹೊಂದಿಸುವ ಕೆಲಸ ಮಾಡುತ್ತಿದೆ. ಬಿಬಿಎಂಪಿ ಕಡತಗಳನ್ನು ಸುಟ್ಟು ಹಾಕಿದ್ದ ವ್ಯಕ್ತಿಯೇ ಆ ಕಿಂಗ್​ಪಿನ್​. ಯಾರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಆದರೂ ನಾನು ಸುಮ್ಮನಿದ್ದೇನೆ ಎಂದು ಎಚ್​ಡಿಕೆ ತಿಳಿಸಿದರು.

ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ವ್ಯರ್ಥ ಕಸರತ್ತು ಬಿಜೆಪಿ ಮಾಡುತ್ತಿದೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಮಾಧ್ಯಮಗಳಲ್ಲಿ ಸರ್ಕಾರ ಪತನದ ಡೆಡ್​ಲೈನ್​ ದಿನಾಂಕ ಬರುತ್ತಿದೆ. ಅದು ದಿನೇ ದಿನೇ ಮುಂದೆ ಹೋಗಬಹುದು. ಮುಂದಿನ ಸೋಮವಾರ ನಾನು ಅಧಿಕಾರಿಗಳ ಸಭೆ ನಡೆಸಿ ಆಡಳಿತ ಚುರುಕು ಮಾಡುವ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

***

Note from Kannada.Club : This story has been auto-generated from a syndicated feed from http://vijayavani.net/congress-jds-coalition-government-hd-kumaraswamy-bjp-illegal-money-kingpin/