ಸರಕಾರ ಉರುಳಿಸಲು ಹಣದ ಅಮೀಷವೊಡ್ಡಿರುವ ಕಿಂಗ್‌ಪಿನ್ ಯಾರೆಂದು ಗೊತ್ತು: ಸಿಎಂ

ಬೆಂಗಳೂರು: ಸರಕಾರ ಉರುಳಿಸಲು ಹಣದ ಆಮಿಷವೊಡ್ಡಿರುವುದು ಗೊತ್ತಿದೆ. ಶಾಸಕರಿಗೆ ನೀಡಿರುವ ಅಡ್ವಾನ್‌ಸ್ ಹಣವನ್ನು ಯಾವ ಮೂಲಗಳಿಂದ ಸಂಗ್ರಹಿಸಲಾಗುತ್ತಿದೆ, ಇದರ ಹಿಂದಿನ ಕಿಂಗ್‌ಪಿನ್ ಯಾರು ಎಲ್ಲವೂ ಗೊತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಬಿಜೆಪಿ ನಡೆಸಿರುವ ಅಪರೇಷನ್ ಕಮಲಕ್ಕೂ ನನಗೂ ಸಂಬಂಧವಿಲ್ಲ. ಇಷ್ಟೇಲ್ಲ ನಡೆಯುತ್ತಿದ್ದರೂ, ನಾನೇನು ಸುಮ್ಮನೆ ಕುಳುತ್ತಿಲ್ಲ. ಬಿಬಿಎಂಪಿ ಕಡತಗಳ ಕಚೇರಿಗೆ ಬೆಂಕಿ ಇಟ್ಟವರಿಂದಲ್ಲೇ ಮೈತ್ರಿ ಸರಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಕಲೇಶಪುರದ ಕಾಫಿ ಪ್ಲಾಂಟರ್ ರೆಸಾರ್ಟ್ ಮಾಡಲು ಹೋಗಿ ಹೆಂಡತಿ, ಜನ್ಮ ಕೊಟ್ಟ ಮಗುವಿಗೆ ಗುಂಡಿಟ್ಟು ಕೊಂದವರು ಅವರು. ಈಗ ಜೈಲಲ್ಲಿ ಇದ್ದಾರೆ. ಅದಕ್ಕೆ ಕಾರಣರಾದವರು ಯಾರು ಎಂದು ಗೊತ್ತು. ಆ ವ್ಯಕ್ತಿಯೇ ಈಗ ಸರಕಾರ ಉರುಳಿಸಲು ಮುಂದಾಗಿದ್ದಾರೆ ಗಂಭೀರವಾಗಿ ಆರೋಪಿಸಿದರು.

ಎಚ್ಚರಿಕೆ: ಸಮ್ಮಿಶ್ರ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ತಮ್ಮ ಕರ್ತವ್ಯ ಮಾಡಲು ಅಸಡ್ಡೆ ತೋರಿಸುತ್ತಿರುವ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಚಾಟಿ ಬೀಸಲು ನಿರ್ಧರಿಸಿದ್ದೇನೆ. ಸೋಮವಾರದಿಂದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಹಣ ಹಂಚಿಕೆ ಕುರಿತು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಿದ್ದೇನೆ. ಹಣ ಹಂಚಿಕೆಯಲ್ಲಿ ಭಾಗಿಯಾಗಿರುವ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಿದ್ಧತೆ ನಡೆಸಿದ್ದೇನೆ ಎಚ್ಚರಿಕೆ ನೀಡಿದರು.

ವ್ಯರ್ಥ ಕೆಲಸ: ಲಾಟರಿ ದಂಧೆ, ಇಸ್ಪಿಟ್ ದಂಧೆಯಿಂದ ಸಂಗ್ರಹಿಸುತ್ತಿರುವ ಕೋಟ್ಯಾಂತರ ರು. ಸರಕಾರ ಕೆಡವಲು ಬಳಸಲಾಗುತ್ತಿದೆ. ನಾನೇನು ಸುಮ್ಮನೆ ನಾನು ಆರಾಮಗಿದ್ದೇನೆ. ಅವರು ವ್ಯರ್ಥ ಕರ್ತವ್ಯ ಮಾಡುತ್ತಿದ್ದಾರೆ. ಸರಕಾರದ ಪತನಕ್ಕೆ ಸೋಮವಾರ ಗುಡುವು ನೀಡಿದ್ದಾರೆ, ಅದು ಗಣೇಶನ ಹಬ್ಬಕ್ಕೆ ಮುಂದೂಡಲಾಯಿತು. ಈಗ ಗಣೇಶ ಹಬ್ಬವೂ ಮುಗಿಯಿತು. ಮುಂದೆ ಅ.2ಕ್ಕೆ ನಿಗದಿ ಪಡಿಸಬಹುದು, ಆಗಲೂ ಆಗದಿದ್ದರೆ ದಸರಾಕ್ಕೆ ಮುಂದೂಡಬಹುದು. ಪಂಚಾಂಗ ಸರಿಯಾಗಿ ಬರದೇ ಇರುವುದರಿಂದ ಮುಂದುಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜಾರಕಿಹೊಳಿ ಜತೆ ನಿರಂತರ ಸಂಪರ್ಕ: ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಅಭಿವೃದ್ಧಿ ಮುಖ್ಯ. ಅಭಿವೃದ್ಧಿ ರಾಜ್ಯ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರಿಗೆ ಬೇಕಿಲ್ಲ. ಬಿಜೆಪಿಯವರು ರೆಸಾರ್ಟ್ ಆದರೂ ಮಾಡಲಿ ಗುಡಿಸಲಾದರೂ ಮಾಡಲಿ. ನಮ್ಮ ಸಚಿವರಲ್ಲಿ ಯಾವುದೇ ಬಂಡಾಯವಿಲ್ಲ. ಸಚಿವ ಜಾರಕಿಹೊಳಿ ನನ್ನ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರಕಾರದೊಂದಿಗೆ ಸ್ನೇಹಿತರಾಗಿದ್ದ ಕೆಲ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಈ ಕುರಿತು ಮಾಧ್ಯಮಗಳು ಬಹಿರಂಗ ಪಡಿಸಿರುವ ಪಟ್ಟಿಯೇ ಸುಳ್ಳು ಎಂದು ಸ್ಪಷ್ಟ ಪಡಿಸಿದರು.

The post ಸರಕಾರ ಉರುಳಿಸಲು ಹಣದ ಅಮೀಷವೊಡ್ಡಿರುವ ಕಿಂಗ್‌ಪಿನ್ ಯಾರೆಂದು ಗೊತ್ತು: ಸಿಎಂ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/i-know-who-is-govt-collapse-kingpin-cm/