ಸಚಿವ ಎನ್. ಮಹೇಶ್ ರಾಜೀನಾಮೆ; ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪತ್ರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.

ವಿಧಾನಸೌದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾಘಟಬಂಧನಕ್ಕೂ ನನ್ನ ರಾಜೀನಾಮೆಗೂ ಸಂಬಂಧವಿಲ್ಲ. ಪಕ್ಷ ಸಂಘಟನೆಗೆ ತೊಡಕಾಗಬಾರದು ಎಂದು ರಾಜೀನಾಮೆ ನೀಡಿದ್ದಾನೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ. ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಿದೆ. ಶಾಸಕನಾಗಿ ಮುಂದುವರಿಯುತ್ತೇನೆ ಎಂದು ರಾಜೀನಾಮೆ ನೀಡಿದ ಕಾರಣ ವಿವರಿಸಿದ್ದಾರೆ.

ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಸಚಿವ ಸ್ಥಾನ ವಹಿಸಿಕೊಂಡ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. 20 ವರ್ಷಗಳ ಸತತ ಪರಿಶ್ರಮದಿಂದ ಗೆದ್ದಿದ್ದೇನೆ. ಖಾತೆಯನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಹೇಳಿದರು.

ಜನರು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಕೆಲವರು ಗೆದ್ದು ಬೆಂಗಳೂರಿಗೆ ಹೋದರು ಅಲ್ಲೇ ಇದ್ದಾರೆ ಎನ್ನುತ್ತಿದ್ದಾರೆ. ನನ್ನ ಕ್ಷೇತ್ರದ ಕಡೆಯೂ ನಾನು ಗಮನ ಕೊಡಬೇಕಾಗಿದೆ. ನಾನು ನನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದೇನೆ. ಮಾಯಾವತಿ ಅವರು ರಾಜೀನಾಮೆ ನೀಡುವಂತೆ ಹೇಳಿಲ್ಲ. ಆದರೆ ನಾನೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜವಾಬ್ದಾರಿ ನಿಭಾಯಿಸುವುದರಲ್ಲಿ ವಿಫಲನಾಗಿದ್ದೇನೆ ಎಂಬುದು ಸುಳ್ಳು. ಕುಮಾರಸ್ವಾಮಿಗೆ ಧನ್ಯವಾದ ಹೇಳಿ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಬಿಎಸ್​ಪಿಯ ಏಕೈಕ ಶಾಸಕರಾಗಿ ಸಚಿವರೂ ಆಗಿದ್ದ ಎನ್​.ಮಹೇಶ್ ಕಾಂಗ್ರೆಸ್ ವಿರುದ್ಧದ ಟೀಕೆಯಿಂದ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್​ ನಾಯಕನ ಜತೆ ಮಾತಿನ ಚಕಮಕಿಗೂ ಗುರಿಯಾಗಿದ್ದರು. ಜೆಡಿಎಸ್ ಜತೆಗೆ ಚುನಾವಣಾ ಪೂರ್ವದ ಮೈತ್ರಿಯನ್ನು ಮಹೇಶ್ ರಾಜ್ಯಾಧ್ಯಕ್ಷರಾಗಿರುವ ಬಹುಜನ ಸಮಾಜ ಪಕ್ಷ ಮಾಡಿಕೊಂಡಿತ್ತು.

ಮಹೇಶ್​ ರಾಜೀನಾಮೆ ಆಪರೇಷನ್​ ಕಮಲಕ್ಕೆ ಮುನ್ನುಡಿಯೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಉದ್ಭವಿಸಿದೆ. ಒಂದೆರಡು ತಿಂಗಳಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಇಂತಹ ಅನುಮಾನಕ್ಕೆ ಕಾರಣವಾಗಿದೆ.

***

Note from Kannada.Club : This story has been auto-generated from a syndicated feed from http://vijayavani.net/bsp-nmahesh-minister-resignation-bengaluru/