ಸಂಪಾದಕ ನಕ್ಕೀರನ್ ಗೋಪಾಲರನ್ನು ತ ನಾ ಪೊಲೀಸರು ಬಂಧಿಸಿದ್ದೇಕೆ ?

ಬಂಧನ ದಿನವೇ ನ್ಯಾಯಾಲಯದ ಆದೇಶದಂತೆ ಬಿಡುಗಡೆಗೊಂಡ ಪತ್ರಕರ್ತ

`ನಕ್ಕೀರನ್’ ಸಂಪಾದಕ ಆರ್ ರಾಜಗೋಪಾಲ್ ಅವರ ಬಂಧನ ಮತ್ತೊಮ್ಮೆ ತಮಿಳುನಾಡಿನಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಎದುರಾಗಿರುವ ಅಪಾಯದತ್ತ ಬೊಟ್ಟು ಮಾಡಿದೆ. ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಕಾರ್ಯಾಲಯದಿಂದ ಬಂದ ದೂರಿನ ಆಧಾರದಲ್ಲಿ ಅವರನ್ನು ಮಂಗಳವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಪುಣೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೋಪಾಲ್ ಹೋಗುವವರಿದ್ದರು. ಅವರನ್ನು ಅಲ್ಲಿಂದ ಚಿಂತದ್ರಿಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಕೋರ್ಟಿಗೆ ಹಾಜರುಪಡಿಸದೆ ಸುಮಾರು ನಾಲ್ಕು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು.

ನಂತರ ಸಂಜೆ ಎಗ್ಮೋರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರನ್ನು ಹಾಜರುಪಡಿಸಲಾಯಿತಾದರೂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ನಿರಾಕರಿಸಿದ ನ್ಯಾಯಾಲಯ ಅವರ ಮೇಲೆ ಐಪಿಸಿ ಸೆಕ್ಷನ್ 124 ಅನ್ವಯ ಪ್ರಕರಣವೇಕೆ ದಾಖಲಿಸಲಾಯಿತೆಂದು ಪ್ರಶ್ನಿಸಿತು. ದೇಶದ ರಾಷ್ಟ್ರಪತಿ ಯಾ ರಾಜ್ಯದ ರಾಜ್ಯಪಾಲರಿಗೆ ತಮ್ಮ ಅಧಿಕಾರ ಚಲಾಯಿಸುವುದನ್ನು ತಡೆಯುವ ಉದ್ದೇಶದಿಂದ ಹಲ್ಲೆ ನಡೆಸುವವರ ಮೇಲೆ ವಿಧಿಸಲಾಗುವ ಸೆಕ್ಷನ್ ಇದಾಗಿದೆ. ಎಪ್ರಿಲ್ ತಿಂಗಳಲ್ಲಿ ವರದಿಯಾದ ಲೇಖನವೊಂದಕ್ಕೆ ಅಕ್ಟೋಬರ್ ತಿಂಗಳಲ್ಲಿ ಏಕೆ ಬಂಧನ ನಡೆಸಲಾಗಿದೆ ಎಂದೂ ನ್ಯಾಯಾಲಯ ಪ್ರಶ್ನಿಸಿತು.  ಕೋರ್ಟ್ ಆದೇಶದಂತೆ ನಂತರ ಪೊಲೀಸರು ಗೋಪಾಲ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.

“ನ್ಯಾಯಾಲಯ ತಲುಪುವ ತನಕ ತನ್ನ ವಿರುದ್ಧ ಯಾವ ಸೆಕ್ಷನ್ನಿನನ್ವಯ ಪ್ರಕರಣ ದಾಖಲಿಸಲಾಗಿದೆಯೆಂದು ತಿಳಿದಿರಲಿಲ್ಲ, ಕೇವಲ ಭೀತಿ ಹುಟ್ಟಿಸಲು ಹಾಗೂ ಕಿರುಕುಳ ನೀಡಲು ಹೀಗೆ ಮಾಡಲಾಗಿದೆ” ಎಂದು ರಾಜಗೋಪಾಲ್ ಹೇಳಿದ್ದರು.

ಏನಿದು ಸೆಕ್ಸ್ ಹಗರಣ ?

`ನಕ್ಕೀರನ್’ ಪತ್ರಿಕೆಯ ಎಪ್ರಿಲ್ 20-22ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ `ನಕ್ಕೀರನ್ ಬೆಲ್ಸ್ ದಿ ಕ್ಯಾಟ್-ಗವರ್ನರ್ ಟ್ರ್ಯಾಪ್ಡ್’ (ನಕ್ಕೀರನ್ ಬೆಕ್ಕಿಗೆ ಗಂಟೆ ಕಟ್ಟಿದೆ-ರಾಜ್ಯಪಾಲರು ಸಿಕ್ಕಿಬಿದ್ದಿದ್ದಾರೆ) ಎಂಬ ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿದಂತೆ ಈ ದೂರು ದಾಖಲಾಗಿತ್ತು.

ಈ ಲೇಖನ ರಾಜ್ಯಪಾಲ ಪುರೋಹಿತ್ ಕುಲಪತಿಗಳಾಗಿರುವ ಮಧುರೈ ಕಾಮರಾಜ್ ವಾರ್ಸಿಟಿಯಲ್ಲಿ ನಡೆದಿತ್ತೆನ್ನಲಾದ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ್ದಾಗಿತ್ತು. ಈ ಪ್ರಕರಣಕ್ಕೂ ರಾಜ್ಯಪಾಲರಿಗೂ ಈ ವರದಿ ನಂಟು ಕಲ್ಪಿಸಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ವಿರುಧನಗರ ಜಿಲ್ಲೆಯ ದೇವಾಂಗ ಕಾಲೇಜ್ ಆಫ್ ಆಟ್ರ್ಸ್ ಇಲ್ಲಿನ ಗಣಿತದ ಸಹಾಯಕ ಪ್ರೊಫೆಸರ್ ನಿರ್ಮಲಾ ದೇವಿ ತಮಗೆ ಪುರೋಹಿತ್ ಪರಿಚಯವಿದೆ ಎಂದು ಹೇಳುವ ಧ್ವನಿಮುದ್ರಿಕೆಯ ವಿವರವೂ ಲೇಖನದಲ್ಲಿತ್ತ್ತು. ಈ ಕಾಲೇಜು ಮಧುರೈ ಕಾಮರಾಜ್ ವಾರ್ಸಿಟಿಯ ಅಧೀನಕ್ಕೊಳಪಟ್ಟಿದೆ.

ಕಾಲೇಜು ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಆಕೆಯನ್ನು ಎಪ್ರಿಲ್ 24ರಂದು ಬಂಧಿಸಲಾಗಿತ್ತು. ಆಕೆಯ ಜತೆ ವಾರ್ಸಿಟಿಯ ಸಹಾಯಕ ಪ್ರೊಫೆಸರ್ ವಿ ಮುರುಗನ್ ಹಾಗೂ ಸಂಶೋಧನಾ ವಿದ್ಯಾರ್ಥಿ ಕರುಪ್ಪಸಾಮಿಯನ್ನೂ ಬಂಧಿಸಲಾಗಿತ್ತು. ಈ ನಕ್ಕೀರನ್ ವರದಿ ಟೀವಿ ವಾಹಿನಿಗಳಲ್ಲೂ ಸುದ್ದಿಯಾಗಿತ್ತು.

ತನಗೆ ನಿರ್ಮಲಾದೇವಿ ಪರಿಚಯವಿತ್ತು ಎಂಬುದನ್ನು ನಿರಾಕರಿಸಿದ ರಾಜ್ಯಪಾಲ ನಿವೃತ್ತ ಐಎಎಸ್ ಅಧಿಕಾರಿ ಎಸ್ ಸಂತಾನಂ ಮೂಲಕ ತನಿಖೆಗೆ ಎಪ್ರಿಲ್ 16ರಂದು ಆದೇಶಿಸಿದ್ದರು.

ಸೆಪ್ಟೆಂಬರ್ 26-28ರ ಸಂಚಿಕೆಯಲ್ಲಿ ನಕ್ಕೀರನ್ ಇನ್ನೊಂದು ಮುಖಪುಟ ಲೇಖನದಲ್ಲಿ ನಿರ್ಮಲಾದೇವಿ ತಾವು ರಾಜ್ಯಪಾಲರನ್ನು ನಾಲ್ಕು ಬಾರಿ ಭೇಟಿಯಾಗಿದ್ದರೂ ಕ್ರೈಂ ಬ್ರ್ಯಾಂಚ್ ಸಿಐಡಿ ಆಕೆಯ ಹೇಳಿಕೆ ದಾಖಲಿಸಿಕೊಂಡಿಲ್ಲ ಹಾಗೂ ರಾಜ್ಯಪಾಲರನ್ನು ಈ ಪ್ರಕರಣದ ಭಾಗವಾಗಿಸಿಲ್ಲ ಎಂದು ಹೇಳಿತ್ತು.

***

Note from Kannada.Club : This story has been auto-generated from a syndicated feed from http://karavaliale.net/why-did-na-na-police-arrest-nakkeeran-gopal/