ಶಾಶ್ವತ ಪರಿಹಾರ ಪಯತ್ನ

ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಗಳಿಂದ ವಿಷಪೂರಿತ ಅನಿಲ ತ್ಯಾಜ್ಯ ಹಳ್ಳದ ನೀರಿಗೆ ಹರಿಬಿಡುವುದರಿಂದ ಜಲಚರಗಳು ಅಸುನೀಗುತ್ತಿವೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ತಿಳಿಸಿದರು.

ಗಡವಂತಿ ಗ್ರಾಮದಲ್ಲಿ ರಾಸಾಯನಿಕ ಅನಿಲ ತ್ಯಾಜ್ಯದಿಂದಾಗಿ ಮೀನು ಹಾಗೂ ಇತರ ಜಲಚರಗಳು ಅಸುನೀಗಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ವೀಕ್ಷಿಸಿ ಮಾತನಾಡಿದ ಅವರು, ತನಿಖೆ ನಡೆಸಿ ತಪ್ಪಿತಸ್ಥ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಎರಡು ದಶಕದಿಂದ ಹೋರಾಟ ನಡೆಯುತ್ತಿದೆ. ಕಾಣದ ಕೈಗಳು ಕೆಲಸ ಮಾಡುತ್ತಿರುವುದರಿಂದ ಸರಿಯಾದ ಪರಿಹಾರ ಲಭಿಸುತ್ತಿಲ್ಲ. ಅಧಿಕಾರಿಗಳು ಬಂದು ಹೋಗಲು ಸೀಮಿತವಾಗಿದ್ದು, ಯಾವುದೇ ಕ್ರಮ ಜರುಗುತ್ತಿಲ್ಲ. ಇದರಿಂದ ಪ್ರಾಣಿ ಪಕ್ಷಿಗಳು ಸೇರಿ ಮನುಷ್ಯರ ಜೀವಕ್ಕೂ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಡಿಸಿ ಎದುರು ಅಳಲು ತೋಡಿಕೊಂಡರು.

ಗಡವಂತಿ, ಮಾಣಿಕನಗರ, ಧುಮ್ಮನಸೂರ, ಬಸಂತಪುರ ಮತ್ತಿತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಮತ್ತು ತೆರೆದ ಬಾವಿಗಳಲ್ಲಿ ವಿಷಪೂರಿತ ತೈಲ ಬರುತ್ತಿದ್ದು, ಕ್ರಮೇಣ ಹುಮನಾಬಾದ್ ಪಟ್ಟಣಕ್ಕೂ ವ್ಯಾಪಿಸುತ್ತಿದೆ. ಮುಂದೊಂದು ದಿನ ಸಾಕಷ್ಟು ಪ್ರಮಾಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಗ್ರಾಪಂ ಅಧ್ಯಕ್ಷ ಬಸವರಾಜ ಪಾಟೀಲ್, ತಹಸಿಲ್ದಾರ್ ಡಿ.ಎಂ.ಪಾಣಿ, ಪಿಡಿಒ ಭಾಗ್ಯಲಕ್ಷ್ಮೀ, ಪ್ರಮುಖರಾದ ಗಜೇಂದ್ರ ಕನಕಟಕರ್, ಮಲ್ಲಿಕಾರ್ಜುನ ಕುಂಬಾರ, ಓಂಕಾರ ತುಂಬಾ, ಸಂತೋಷ, ವೀರಪ್ಪ ಜನ್ನಾ, ಮಹಾರುದ್ರಪ್ಪ, ಆನಂದ, ಪ್ರೇಮಕುಮಾರ ಇತರರಿದ್ದರು

***

Note from Kannada.Club : This story has been auto-generated from a syndicated feed from http://vijayavani.net/bidar-gadavanti-village-dc-mahadev-visit/