ಶಕ್ತಿಸ್ವರೂಪಿಣಿಯನ್ನು ಆರಾಧಿಸುವ ಮಹಾಪರ್ವ

| ಡಾ. ಗಣಪತಿ ಹೆಗಡೆ

ಶರಣಾಗತದೀನಾರ್ತಪರಿತ್ರಾಣ ಪರಾಯಣೇ|

ಸರ್ವಸ್ಯಾರ್ತಿಹರೇದೇವಿ ನಾರಾಯಣಿ ನಮೋಸ್ತುತೇ||

ನಿನ್ನನ್ನೇ ನಂಬಿ ಶರಣಾಗಿ ಬಂದ ದೀನರನ್ನು, ದುಃಖಿಗಳನ್ನು ಕಾಪಾಡಿ ಅವರ ನೋವುಗಳನ್ನು ದೂರಮಾಡುವಲ್ಲಿ ನಿರತಳಾಗಿರುವ ದೇವಿ ನಾರಾಯಣಿಯೇ ನಿನಗೆ ನಮಸ್ಕಾರ.

ಮಳೆಗಾಲವು ಮುಗಿದು ಶರತ್ಕಾಲದ ಆರಂಭವಾಗುತ್ತಿದ್ದಂತೆಯೇ ಮಹಾಶಕ್ತಿಸ್ವರೂಪಿಣಿ ದೇವಿಯ ಆರಾಧನಾ ಮಹೋತ್ಸವ ನವರಾತ್ರಿ ಆರಂಭಗೊಳ್ಳುತ್ತದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದಾರಂಭಿಸಿ ನಿರಂತರ ಒಂಭತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ಶಕ್ತಿಸ್ವರೂಪಿಣಿ ದೇವಿಯ ಆರಾಧಕರಿಗೆ ಅತ್ಯಂತ ಮಹತ್ವಪೂರ್ಣವಾದ ಉತ್ಸವ.

ಮಹಾಕಾಳಿ, ಮಹಾಲಕ್ಷ್ಮಿ ಮಹಾಸರಸ್ವತಿಯರು ಈ ನವರಾತ್ರೋತ್ಸವದ ಆಚರಣೆಯ ಹಿಂದಿನ ಶಕ್ತಿದೇವತೆಯರು. ಈ ಸಂದರ್ಭದಲ್ಲಿ ವಿಶೇಷವಾಗಿ ಶಕ್ತಿಯ ಆರಾಧನೆಗೆ ಒತ್ತು ನೀಡಲಾಗಿದೆ. ನಮ್ಮಲ್ಲಿರುವ ಶಕ್ತಿ ಹಾಗೂ ಪರಾಶಕ್ತಿಗಳನ್ನು ಜೋಡಿಸುವ ಪ್ರಕ್ರಿಯೆ ಈ ಆಚರಣೆಗಳಲ್ಲಿ ಕಂಡು ಬರುತ್ತದೆ. ಶಕ್ತಿ ಎಲ್ಲ ಚೇತನಗಳಿಗೂ ಮೂಲವಸ್ತು. ನಾವು ಯಾವುದೇ ಕಾರ್ಯ ಮಾಡಬೇಕಾದರೂ ಅದಕ್ಕೆ ಮೂಲಭೂತವಾಗಿ ಶಕ್ತಿಯ ಅಗತ್ಯವಿದೆ. ಇಂತಹ ಶಕ್ತಿಯನ್ನು ಕೊಂಡಾಡುವ ಒಂಭತ್ತು ದಿನಗಳ ಉತ್ಸವವನ್ನೇ ನವರಾತ್ರೋತ್ಸವ ಎನ್ನುತ್ತಾರೆ. ಶಕ್ತಿಸ್ವರೂಪಿಣಿ ದೇವಿಯ ಪೂಜೆಯು ನಮಗೆ ಶಕ್ತಿಯ ಸಂಪಾದನೆಯನ್ನು ಮಾಡಿಕೊಡುತ್ತದೆ, ತನ್ಮೂಲಕ ನಮ್ಮಲ್ಲಿ ದುರ್ಗಣಗಳು, ದೋಷಗಳು ದೂರವಾಗಿ ಒಳ್ಳೆಯ ಸ್ವಭಾವಗುಣಗಳು ಬರುತ್ತವೆ. ಬಲ, ಸಂಪತ್ತು, ಜ್ಞಾನಗಳನ್ನು ಪಡೆಯಬಹುದು. ತನ್ಮೂಲಕ ದೈವ ಸಾಕ್ಷಾತ್ಕಾರ ಪಡೆಯಬಹುದು ಎಂಬುದನ್ನು ಹಲವಾರು ಕಥಾನಕಗಳ ಮೂಲಕ ನಿದರ್ಶನಗಳ ಸಹಿತ ತೋರಿಸಲಾಗಿದೆ.

ನವರಾತ್ರಿಯ ಈ ಉತ್ಸವವು ಹದಿನೆಂಟು ಪುರಾಣಗಳಲ್ಲಿ ಬಹು ಪ್ರಸಿದ್ಧವಾದ ‘ಮಾರ್ಕಂಡೇಯ ಪುರಾಣ’ದಲ್ಲಿಯ ‘ದೇವೀ ಮಹಾತ್ಮೆ’ಯ ಭಾಗವನ್ನೇ ಹೆಚ್ಚಾಗಿ ಅವಲಂಬಿಸಿದೆ. ಈ ಭಾಗದಲ್ಲಿ ಶಕ್ತಿಯ ಸ್ವರೂಪವನ್ನು ವಿವರಿಸಲಾಗಿದೆ. ಅದರಲ್ಲೂ ವಿಶೇಷವಾಗಿ 700 ಶ್ಲೋಕಗಳಿರುವ ದೇವೀಮಾಹಾತ್ಮ್ಯವನ್ನು ‘ಸಪ್ತಶತೀ’ ಅಥವಾ ‘ಚಂಡೀ’ ಎಂದೂ ಕರೆಯಲಾಗಿದೆ. ಒಂಭತ್ತು ದಿನಗಳಲ್ಲಿ ದೇವಿಯ ಒಂಭತ್ತು ರೂಪಗಳನ್ನು ವಿವರಿಸಿ ಆಯಾರೂಪಗಳಲ್ಲಿ ಅರ್ಚಿಸುವಂತೆ ನಿರ್ದೇಶಿಸಲಾಗಿದೆ. ‘ಸಪ್ತಶತೀ’ ಎಂದು ಪ್ರಸಿದ್ಧಿ ಪಡೆದಿರುವ ಈ ಭಾಗದಲ್ಲಿ ಮುಖ್ಯವಾಗಿ ಮೂರು ಕಥೆಗಳಿವೆ. ಈ ಮೂರು ಕಥೆಗಳಿಗೆ ಅನುಗುಣವಾಗಿ ‘ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ’ಯರು ದೇವತೆಗಳೆಂದು ಪರಿಭಾವಿಸಲಾಗಿದೆ. ಅದಕ್ಕನುಗುಣವಾಗಿ ನವರಾತ್ರಿಯ ಒಂಭತ್ತು ದಿನಗಳಲ್ಲಿ ಕ್ರಮವಾಗಿ ಮೂರು ಮೂರು ದಿನಗಳಲ್ಲಿ ಈ ಮೂವರು ದೇವಿಯರನ್ನು ಪೂಜಿಸುವ ಪರಿಪಾಠವೂ ಇದೆ. ಅಲ್ಲಿಗೆ ನವರಾತ್ರಿಯ ಉತ್ಸವವೆಂದರೆ ‘ಮಹಾಕಾಲಿ ಮಹಾಲಕ್ಷ್ಮಿ ಮಹಾಸರಸ್ವತಿ’ಯರ ಆರಾಧನೆಯೇ ಆಗಿದೆ. ಸಪ್ತಶತಿಯ ಕೊನೆಯ ಭಾಗದಲ್ಲಿರುವ ‘ವೈಕೃತಿಕರಹಸ್ಯಂ’ ಎಂಬ ಭಾಗದಲ್ಲಿ ತ್ರಿಶಕ್ತಿ ದೇವತೆಗಳ ಗುಣ, ರೂಪ, ಸ್ವಭಾವಗಳನ್ನು ವಿವರಿಸಿದ್ದಾರೆ. ಮೊದಲು ಮಹಾಕಾಳಿಯ ವರ್ಣನೆ. ತದನಂತರದಲ್ಲಿ ಮಹಾಲಕ್ಷ್ಮಿಯ ಸ್ಪುರದ್ರೂಪದ ವರ್ಣನೆ, ಕೊನೆಯಲ್ಲಿ ವಿದ್ಯಾದೇವತೆ ಸರಸ್ವತಿಯ ವರ್ಣನೆಯಿದೆ.

ನಮ್ಮೆಲ್ಲರ ಐಹಿಕ ಜೀವನದ ಪ್ರಗತಿಗೆ ಅತ್ಯವಶ್ಯಕವಾಗಿ ಬೇಕಾದ ಬಲ, ಸಂಪತ್ತು ವಿದ್ಯೆಗಳಿಗೆ ಅಧಿದೇವತೆಗಳು ಈ ಮೂವರು ಶಕ್ತಿಮಾತೆಯರು ಎಂಬ ಕಾರಣದಿಂದಲೇ ಈ ತ್ರಿಶಕ್ತಿ ದೇವತೆಗಳ ಆರಾಧನೆ ಬಹು ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಮೊದಲನೆಯದಾಗಿ ನಮಗೆ ದೈನಂದಿನ ಜೀವನ ನಿರ್ವಹಣೆಗಾಗಿ ಬಲಬೇಕು. ಅದು ಮಹಾಕಾಳಿಯ ಪೂಜೆಯಿಂದ ಸಿದ್ಧಿಸುತ್ತದೆ. ‘ಬಲಸ್ಯ ಪೃಥ್ವೀ’ ಎಂಬ ಮಾತಿನಂತೆ ಬಲವಿದ್ದವನಿಗೆ ಭೂಮಿ ಒಲಿಯುತ್ತದೆ. ಯಾವುದೇ ಕಾರ್ಯ ನಿರ್ವಹಣೆಗೆ ಮೊದಲು ಬಲ ಬೇಕು. ಅದು ದೇಹಬಲ, ಜನಬಲ, ಮನೋಬಲ, ಧನಬಲವಾಗಿರಬಹುದು, ಈ ಬಲ ಬೇಕಾದರೆ ಮಹಾಬಲನ ಅರ್ಧಾಂಗಿ ಪಾರ್ವತಿ ಅರ್ಥಾತ್ ಮಹಾಕಾಳಿಯನ್ನು ಆರಾಧಿಸಬೇಕು.

ಇನ್ನು ಜೀವನದಲ್ಲಿ ಸಂಪತ್ತಿನ ಸ್ಥಾನವೂ ಅಷ್ಟೇ ಮುಖ್ಯ. ಸಂಪತ್ತು ಎಂದರೆ ಕೇವಲ ಹಣವಲ್ಲ, ಅದು ಭೂಸಂಪತ್ತು, ಗೋಸಂಪತ್ತು, ಪಶು ಸಂಪತ್ತು, ಧನ-ಧಾನ್ಯಸಂಪತ್ತು, ಅನುಕೂಲಕರರಾದ ಪತ್ನಿ, ಪುತ್ರ, ಮಿತ್ರ, ಸೇವಕ ಗೃಹ, ಆಹಾರ ಇತ್ಯಾದಿಗಳೂ ಸಂಪತ್ತುಗಳೇ. ಇವುಗಳ ಸಂಪಾದನೆಯಾಗಬೇಕಾದರೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಬೇಕೇ ಬೇಕು. ಆದ್ದರಿಂದಲೇ ಶಕ್ತಿಸ್ವರೂಪಿಣಿಯನ್ನು ‘ಮಹಾಲಕ್ಷ್ಮಿ’ಯ ರೂಪದಲ್ಲಿ ಆರಾಧಿಸುತ್ತೇವೆ.

ಬಲ ಹಾಗೂ ಸಂಪತ್ತುಗಳನ್ನು ಸರಿಯಾದ ರೀತಿಗಳಲ್ಲಿ ಬಳಸಿಕೊಂಡು ಐಹಿಕ ಜಗತ್ತಿನಿಂದ ಪಾರಮಾರ್ಥಿಕ ಜಗತ್ತಿಗೆ ತೆರಳಲು ಬೇಕಾದ ಮೋಕ್ಷ ಮಾರ್ಗದ ಕಲ್ಪನೆ ಕೇವಲ ಜ್ಞಾನದಿಂದ ಮಾತ್ರವೇ ಸಾಧ್ಯ. ಅಂತಹ ಜ್ಞಾನವು ವಿದ್ಯೆಯನ್ನಾಧರಿಸಿದೆ. ಆ ಕಾರಣಕ್ಕಾಗಿಯೇ ನವರಾತ್ರಿಯ ಈ ಸಂದರ್ಭದಲ್ಲಿ ವಿದ್ಯಾಧಿದೇವತೆಯಾದ ಸರಸ್ವತಿಯ ಆರಾಧನೆಯೂ ಅಷ್ಟೇ ಮುಖ್ಯವಾಗಿದೆ. ಬಲ ಹಾಗೂ ಸಂಪತ್ತುಗಳು ವಿದ್ಯೆಯಿಂದಲೇ ಪರಿಪೂರ್ಣತೆಯನ್ನು ಪಡೆಯುತ್ತವೆ. ಆದ್ದರಿಂದ ವಿದ್ಯಾಪ್ರಾಪ್ತಿಗಾಗಿ ವಿದ್ಯಾಧಿದೇವತೆ ಸರಸ್ವತಿಯ ಆರಾಧನೆ ಮಾಡಬೇಕಾಗಿದೆ. ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ವಿವೇಕ ಪ್ರಾಪ್ತಿ. ಹೀಗೆ ಸತ್ಯಾಸತ್ಯಗಳನ್ನರಿತು ವಿವೇಕಶಾಲಿಯಾಗುವುದು ವಿದ್ಯೆಯಿಂದ ಮಾತ್ರವೇ ಸಾಧ್ಯ.

ಜ್ಞಾನದ ಮಹತ್ವವನ್ನರಿತು ತನ್ನ ಬಲ ಹಾಗೂ ಸಂಪತ್ತನ್ನು ಉಪಯೋಗಿಸಿದರೆ ಮಾತ್ರವೇ ಅದು ಮೋಕ್ಷ ಸಾಧನೆಗೆ ಪೂರಕವಾದೀತು. ಇದನ್ನು ವಿವೇಕ ಮಾತ್ರವೇ ನೀಡಲು ಸಾಧ್ಯ. ಕೇವಲ ಸಂಪತ್ತು ಮಾತ್ರವೇ ದೊರಕಿದರೆ ಅದರಿಂದ ಸಿಗಬಹುದಾದ ಸುಖಗಳನ್ನನುಭವಿಸುತ್ತ ಜ್ಞಾನ ಸಂಪಾದನೆಯನ್ನು ಮರೆತು ಬಿಡಬಹುದು.

ಐಹಿಕ ಜೀವನದ ಪರಿಪೂರ್ಣತೆ, ಸಾರ್ಥಕತೆ ಮತ್ತು ನಿಯಂತ್ರಣಕ್ಕಾಗಿ ವಿದ್ಯೆ ಹಾಗೂ ಜ್ಞಾನದ ಅವಶ್ಯಕತೆಯಿದೆ. ಈ ರೀತಿಯಾಗಿ ಜೀವನದಲ್ಲಿ ದೈನಂದಿನ ಉಪಯೋಗಕ್ಕಾಗಿ ಬೇಕಾದ ಬಲ ಸಂಪತ್ತು ಮತ್ತು ವಿದ್ಯೆಗಳ ಸಂಪಾದನೆಯಾಗಲಿ, ಜೀವನದ ಸದುಪಯೋಗವಾಗಲಿ ಮತ್ತು ಆಮುಷ್ಮಿಕವಾದ ಸುಖವೂ ಸಿಗಲಿ ಎಂದು ಮಹಾಕಾಳಿ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯರ ಆರಾಧನೆ ನಡೆಯುತ್ತದೆ.

ಶ್ರೀ ಶಕ್ತಿಯನ್ನು ಅನೇಕ ಕವಿಗಳು ತಮ್ಮ ಕಾವ್ಯಗಳಲ್ಲಿ ಹಾಡಿಕೊಂಡಾಡಿದ್ದಾರೆ. ವಿಶೇಷವಾಗಿ ಲೀಲಾಶುಕನ ‘ದುರ್ಗಾಸ್ತುತಿ’ಯಲ್ಲಿ್ಲ ದೇವಿಯನ್ನು ‘ನೀನು ಮೂರು ರೂಪಗಳಲ್ಲಿರುವ ಒಬ್ಬಳೇ ದೇವಿ’ ಎಂದು ವರ್ಣಿಸಿದ್ದಾರೆ.

ತ್ವಮಸಿಕಮಲಯೋನೇಃ ಆನನಾಂಭೋರುಹಶ್ರೀಃ |

ತ್ವಮಸಿದನುಜಶತ್ರೋಃ ತುಂಗವಕ್ಷಸ್ಥಲಶ್ರೀಃ|

ತ್ವಮಸಿ ಮದನಶತ್ರೋಃ ಶ್ಯಾಮವಾಮಾರ್ಧಲಕ್ಷ್ಮೀಃ|

ತ್ವಮಸಿ ನಿಗಮಮೂರ್ತೆಃ ಮಂಡಲಾಭೋಗಲಕ್ಷ್ಮೀಃ||

‘ಹೇ ದೇವಿ! ನೀನು ಬ್ರಹ್ಮನ ಮುಖಾರವಿಂದದ ಶೋಭೆ, ನೀನು ವಿಷ್ಣುವಿನ ವಿಶಾಲವಾದ ಹೃದಯಸ್ಥಲ ನಿವಾಸಿನಿ, ನೀನು ಮದನಶತ್ರುವಾದ ಶಿವನ ಪತ್ನಿ, ನೀನು ವೇದಮಾತೆಗೆ ಸಂಪತ್ತಿನ ಸ್ವರೂಪಿಯು ಹೌದು’ ಎಂಬುದಾಗಿ ಹೇಳಿದ್ದಾರೆ.

ಇನ್ನೊಂದೆಡೆ ಮೂರು ಶಕ್ತಿಗಳನ್ನು ಒಂದೇ ರೂಪದಲ್ಲಿ ತಂದಿರಿಸಿ ಅವಳನ್ನು ‘ನಾರಾಯಣೀ’ ಎಂಬುದಾಗಿ ಕರೆದಿದ್ದಾರೆ.

ಸೃಷ್ಟಿಸ್ಥಿತಿವಿನಾಶನಾಂ ಶಕ್ತಿಭೂತೇ ಸನಾತನಿ|

ಗುಣಾಶ್ರಯೇಗುಣಮಯೇ ನಾರಾಯಣಿ ನಮೋಸ್ತುತೇ||

‘ಈ ಜಗತ್ತಿನ ಸೃಷ್ಟಿ, ಸ್ಥಿತಿ ಹಾಗೂ ವಿನಾಶಗಳಿಗೆ ಶಕ್ತಿಸ್ವರೂಪಿಣಿಯೂ ಸನಾತನಿಯೂ ಆದ ಗುಣಮಯಿಯಾಗಿ, ಗುಣಗಳನ್ನೇ ಆಶ್ರಯಿಸಿರುವ ನಾರಾಯಣಿಯೇ ನಿನಗೆ ನಮಸ್ಕಾರ’.

ಹೀಗೆ ಸಕಲ ಕಾವ್ಯಗಳಲ್ಲೂ ವರ್ಣಿಸಲ್ಪಟ್ಟಿರುವ ಶಕ್ತಿಯು ಒಮ್ಮೆ ದುರ್ಗತಿನಾಶಿನಿ ದುರ್ಗೆಯಾಗಿ, ಮತ್ತೊಮ್ಮೆ ಕಾಶ್ಮೀರಪುರವಾಸಿನಿ ಶಾರದೆಯಾಗಿ, ಇನ್ನೊಮ್ಮೆ ಇಷ್ಟಾರ್ಥಸಿದ್ಧಿದಾತ್ರಿ ಲಕ್ಷ್ಮಿಯಾಗಿ ಅವತರಿಸುತ್ತಾಳೆ. ಹೀಗೆ ವಿವಿಧ ಅವತಾರವೆತ್ತಿ ಭಕ್ತರನ್ನು ಸಲಹುತ್ತಿರುವ ದೇವಿಯನ್ನು ಭಕ್ತಿ, ತನ್ಮಯಭಾವಗಳಿಂದ ಆರಾಧಿಸಬೇಕು, ಅವಳ ಮೊದಲ ಸ್ವರೂಪವಾದ ಮಹಾಕಾಳಿಯ ಆರಾಧನೆಯಿಂದ ಜೀವನದಲ್ಲಿ ಸರ್ವವಿಧವಾದ ಸುಖ ನೆಮ್ಮದಿಗಳನ್ನು ಪಡೆಯಬಹುದು. ಎರಡನೆಯ ಅವತಾರ ಮಹಾಲಕ್ಷ್ಮಿಯಿಂದ ಸಂಪತ್ತನ್ನು ಪಡೆಯಬಹುದು. ವಿಶೇಷವಾಗಿ ವಿದ್ಯಾರೂಪದಲ್ಲಿ ಪ್ರಪಂಚಾದ್ಯಂತ ನೆಲೆಸಿರುವ ಶಾರದಾದೇವಿ ಬೇರೆಲ್ಲ ಶಕ್ತಿಗಳಿಗಿಂತ ಹೆಚ್ಚಾಗಿ ಬುದ್ಧಿಶಕ್ತಿಯನ್ನು ದಯಪಾಲಿಸುವವಳು.

ಮೂಲಸ್ವರೂಪದಲ್ಲಿ ಭಗವತಿ ಒಬ್ಬಳೇ ಆದರೂ ಆರಾಧನೆಯಲ್ಲಿ ಮಾತ್ರ ಅವಳನ್ನು ನವಶಕ್ತಿಯನ್ನಾಗಿ ಗುರುತಿಸಿದ್ದಾರೆ. ನವರಾತ್ರಿಯ ಒಂದೊಂದು ದಿನಗಳಲ್ಲೂ ಒಂದೊಂದು ರೂಪದಲ್ಲಿ ಅವಳನ್ನು ಅಲಂಕರಿಸಬೇಕು, ಅರ್ಚಿಸಬೇಕು, ಆರಾಧಿಸಬೇಕು.

ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ|

ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಂ||

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯಿನೀ ತಥಾ|

ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಂ||

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ|

ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ||

ಮಾರ್ಕಾಂಡೇಯ ಪುರಾಣದಲ್ಲಿ ಬರುವ ಸಪ್ತಶತಿಯಲ್ಲಿ ಹೇಳಿರುವ ಪ್ರಕಾರ-ಒಂದಾನೊಂದು ಕಾಲದಲ್ಲಿ ರಾಕ್ಷಸರು ದೇವತೆಗಳನ್ನು ಅತ್ಯಂತಕ್ರೂರವಾಗಿ ಹಿಂಸಿಸುತ್ತಿದ್ದರು. ಅನನ್ಯಗತಿಕರಾದ ದೇವತೆಗಳು ಇದರಿಂದ ಪಾರಾಗಲು ಪರಾಶಕ್ತಿಯ ಅನುಗ್ರಹಪ್ರಾಪ್ತಿಗಾಗಿ ಅವಳ ಮೊರೆ ಹೋದರು. ಆಗ ಶಕ್ತಿಸ್ವರೂಪಿಣಿಯಾದ ಮಾತೆಯು ಮಾಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿಯರ ರೂಪದಲ್ಲಿ ಅವತರಿಸಿ ದಾನವರನ್ನು ಸಂಹರಿಸಿ ದೇವತೆಗಳನ್ನು ರಕ್ಷಿಸಿದಳು. ಕೊನೆಗೆ ಅವಳು, ‘ಯಾವುದೇ ಸಂಕಟ ಬಂದಾಗ ನನ್ನನ್ನು ಪೂಜಿಸಿ ಧ್ಯಾನಿಸಿದರೆ ಅಂತಹವರನ್ನು ನಾನು ಸಲಹುತ್ತೇನೆ’ ಎಂಬುದಾಗಿ ಅಭಯ ನೀಡುತ್ತಾಳೆ. ಹೀಗೆ ಕಥಾರೂಪದಿಂದಾರಂಭವಾಗುವ ‘ಸಪ್ತಶತಿ’ಯಲ್ಲಿ ಬಹುಮುಖ್ಯವಾಗಿ ವಿವರಿಸಲ್ಪಡುವ ವಿಚಾರಗಳೆಂದರೆ ಪ್ರತಿಯೊಬ್ಬರಿಗೂ ಮೋಕ್ಷ ಬಹಳ ಮುಖ್ಯ. ಅಂತಹ ಮೋಕ್ಷಮಾರ್ಗ ಸುಲಭವಾಗಬೇಕಾದರೆ ಅದಕ್ಕೆ ಅಡಚಣೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಷಡ್ವೈರಿಗಳು ಹಾಗೂ ಅಹಂಕಾರ, ಅಜ್ಞಾನ ಇವುಗಳನ್ನು ನಿವಾರಿಸಿಕೊಳ್ಳಬೇಕು. ಅವುಗಳ ನಿವಾರಣೆಯ ಉಪಾಯವೇನು? ಅಂದರೆ ದಿವ್ಯಮಾತೆಯಾದ ಶಕ್ತಿಯ ಅನುಗ್ರಹವಿರಬೇಕು. ಅವಳಲ್ಲಿ ನಾವು ಏಕಾಗ್ರಚಿತ್ತದಿಂದ ಆ ನಿವಾರಣೆಯ ಶಕ್ತಿಯನ್ನು ದಯಪಾಲಿಸೆಂದು ಬೇಡಿಕೊಳ್ಳಬೇಕು. ಸಪ್ತಶತಿಯಲ್ಲಿ ಇನ್ನೂ ಮುಖ್ಯವಾದ ಅಂಶವೆಂದರೆ ಮಹಾಶಕ್ತಿಯ ಸ್ವರೂಪಗಳಾದ ಮಹಾಕಾಳಿ, ಮಹಾಶಕ್ತಿ ಮತ್ತು ಮಹಾಸರಸ್ವತಿಯರವರ್ಣನೆ ಮತು ್ತ ಸತ್ವರಜಸ್ತಮೋಗುಣಗಳ ಸುಂದರವಾದ ನಿರೂಪಣೆಯಿದೆ.

ದೇವಿಯ ಆರಾಧನೆಯ ಸಮಯದಲ್ಲಿ ನಾನಾ ರೂಪಗಳು ನಮಗೆ ಗೋಚರವಾದರೂ ಕೊನೆಗೆ ದೇವಿಯೊಬ್ಬಳೆ ಎಂಬ ಕಲ್ಪನೆ ನಮ್ಮಲ್ಲಿರಬೇಕು. ಅವಳ ಧ್ಯಾನದಲ್ಲಿ ನಾವು ಆಳಕ್ಕಿಳಿದಂತೆ ಅವಳ ಅದ್ವಿತೀಯರೂಪ ಗೋಚರವಾಗಬೇಕು. ನಿರಾಕಾರ ಚಿನ್ಮಾತ್ರಸ್ವರೂಪದ ಅನುಭವವಾಗಬೇಕು. ಆಗ ಮಾತ್ರವೇ ನವರಾತ್ರಿಯ ಉತ್ಸವ ಸಾರ್ಥಕ ಆಚರಣೆಯಾಗುತ್ತದೆ. ಹೇಗೆ ಸಕ್ಕರೆಯಿಂದ ಮಾಡಿದ ನಾನಾ ಆಕಾರದ ತಿನಿಸುಗಳು ಬಾಯಿಗೆ ಇಡುವವರೆಗೂ ಭಿನ್ನವಾಗಿದ್ದು ಆಮೇಲೆ ಸಿಹಿ ಮಾತ್ರವೇ ಏಕರೂಪವಾಗಿ ಕಾಣುವುದೋ ಹಾಗೆ ಬಾಹ್ಯ ಆಚರಣೆಗಳಲ್ಲಿ ದೇವಿಯು ನಾನಾ ಸ್ವರೂಪಳು. ಉಪಾಸನೆಯ ಮೂಲಕ ಅವಳು ನಮ್ಮೊಳಗಿಳಿದಾಗ ಕೇವಲ ಶಕ್ತಿಸ್ವರೂಪಿಣಿಯಾಗಿ ನಮಗೆ ಕಾಣಸಿಗುತ್ತಾಳೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

***

Note from Kannada.Club : This story has been auto-generated from a syndicated feed from http://vijayavani.net/sakalika-column-by-dr-ganapathi-hegade/