ವಿಶ್ವ ವಿಜ್ಞಾನದ ಕಿಂಗ್

|ಟಿ.ಆರ್. ಅನಂತರಾಮು

ಕಾಲಾತೀತವಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಸಾರಿದ ಸ್ಟೀಫನ್ ಹಾಕಿಂಗ್ ಬದುಕೂ ಕೂಡ ಇದರ ಭಾಗವೇ ಆದದ್ದು ಸಹಜವೆನಿಸಿದರೂ ಇದು ಕೊಟ್ಟಿರುವ ಶಾಕ್ ಜಗತ್ತಿನಲ್ಲಿ ಇನ್ನೂ ಅನುರಣಿಸುತ್ತಿದೆ. ಈ ನಡುವೆಯೇ, ಹಾಕಿಂಗ್ ಬದುಕಿದ್ದ ಕಾಲದಲ್ಲೇ ನಾವೂ ಇದ್ದೇವಲ್ಲ ಎಂಬ ಒಂದು ಬಗೆಯ ಸಾಂತ್ವನವೂ ಕಂಡುಬರುತ್ತಿದೆ.

‘ವಿಶ್ವದ ಅಸ್ತಿತ್ವಕ್ಕೆ ಏನು ಕಾರಣವಿದೆ ಎಂಬುದನ್ನು ಪತ್ತೆಹಚ್ಚಿದರೆ ದೇವರ ಚಿತ್ತ ಹೇಗಿತ್ತು ಎಂಬುದನ್ನು ನಾವು ಪತ್ತೆ ಮಾಡಬಹುದು’- ಸ್ಟೀಫನ್ ಹಾಕಿಂಗ್ ವಿಶ್ವದ ಉಗಮ, ವಿಕಾಸವನ್ನು ಅರಿಯಲು ಬದುಕಿನುದ್ದಕ್ಕೂ ಮಾಡಿಕೊಂಡು ಬಂದ ಮೊತ್ತ ಈ ಮಾತುಗಳು. ‘ಕಾಲ ಕೆಳಗೆ ಏನಿದೆ ಎಂದು ತಲೆ ತಗ್ಗಿಸಿ ನೋಡುತ್ತ ಕೂಡಬೇಡಿ, ಪ್ರಕೃತಿಯ ಚಿತ್ತಾಪಹಾರಿ ಚಿತ್ರಗಳಾದ ತಾರೆಗಳ ಮಿನುಗನ್ನು ನೋಡಿ, ಬದುಕೇ ಸಾರ್ಥಕ ಎನಿಸುತ್ತದೆ, ಸೌಂದರ್ಯದ ಮೀಮಾಂಸೆ ಅಲ್ಲಿದೆ’ ಎನ್ನತ್ತ ಎಂಥ ಕಠಿಣ ಪರಿಸ್ಥಿತಿಯೇ ಎದುರಾಗಲಿ ನಾವು ಏನನ್ನು ಮಾಡಬಹುದು ಎನ್ನುವುದರ ಹುಡುಕಾಟ ನಡೆಸಿ ಎಂದು ಹುರಿದುಂಬಿಸುತ್ತ, ತನ್ನ ಬದುಕಿನ ನಿದರ್ಶನವನ್ನೇ ಹಾಕಿಂಗ್ ಕೊಡುತ್ತಿದ್ದರು. 21ನೆಯ ವಯಸ್ಸಿನಲ್ಲೇ ಮೋಟಾರ್​ನರ್ವ್ ಕಾಯಿಲೆಗೆ ಬಲಿಯಾಗಿ, ‘ಮುಂದಿನ ಪ್ರತಿದಿನವೂ ನನಗೆ ಬೋನಸ್’ ಎನ್ನುತ್ತಲೇ 76 ವರ್ಷ ಕಳೆದು ಬದುಕಿನ ಮುಕ್ಕಾಲು ಪಾಲು ಗಾಲಿಕುರ್ಚಿಯಲ್ಲೇ ಕೂತು

ವಿಶ್ವದ ವಿದ್ಯಮಾನಗಳನ್ನು ಶೋಧಿಸುತ್ತ, ವಿಜ್ಞಾನ ದಾರ್ಶನಿಕ ಎನಿಸಿಕೊಂಡವರು ಹಾಕಿಂಗ್. ಅವರ ಮನೆಯ ವಾತಾವರಣವೇ ಹಾಗೆ. ಅಪ್ಪ ಫ್ರಾಂಕ್ಆಕ್ಸ್​ಫರ್ಡಿನಲ್ಲಿ ದೊಡ್ಡ ಹೆಸರಿನ ವೈದ್ಯ, ಅಮ್ಮ ಅದೇ ವಿಶ್ವವಿದ್ಯಾಲಯದಲ್ಲಿ ಫಿಲಾಸಫಿ, ಪಾಲಿಟಿಕ್ಸ್, ಎಕನಾಮಿಕ್ಸ್ ಎಂಬ ಮೂರು ಮಹಾಜ್ಞಾನಗಳನ್ನು ಒಂದೇ ಬೊಗಸೆಯಲ್ಲಿ ಕುಡಿದವರು. ಸ್ಟೀಫನ್ ಹಾಕಿಂಗ್ ಹುಟ್ಟಿದ್ದು 1942ರ ಜನವರಿ 8ರಂದು, ಆಕ್ಸ್​ಫರ್ಡ್​ನಲ್ಲಿ. ಶಾಲೆಯಲ್ಲೂ ಬ್ರೈಟ್ ಹುಡುಗ ಎಂದೇನೂ ಬೆನ್ನು ತಟ್ಟಿಸಿಕೊಳ್ಳಲಿಲ್ಲ. ಕೊನೆಗೆ ಬಾಲಕಿಯರ ಶಾಲೆಯಲ್ಲಿ ಕಲಿಯಬೇಕಾದ ಸ್ಥಿತಿ. 1958ರ ಹೊತ್ತಿಗೆ ಹುಡುಗನ ಮನೋವಿಕಾಸವೂ ಬೇರೆಯ ಜಾಡಲ್ಲೇ ಸಾಗಿತ್ತು. ಗಡಿಯಾರದ ಭಾಗಗಳನ್ನು, ಟೆಲಿಫೋನ್ ಸ್ವಿಚ್ಚನ್ನು, ಇನ್ನಿತರ ಗುಜರಿ ಸಾಮಾನುಗಳನ್ನು ಬಳಸಿ ಕಂಪ್ಯೂಟರ್ ಮಾಡಿದ ಸಾಧನೆ. ಆಗಲೇ ಸಹಪಾಠಿಗಳು ಇವನನ್ನು ಐನ್​ಸ್ಟೈನ್ ಎನ್ನುತ್ತಿದ್ದರಂತೆ. ಆದರೆ ಆಕ್ಸ್​ಫರ್ಡ್​ನಲ್ಲಿ ಡಿಗ್ರಿ ಪದವಿಗೆ ಬರೆದದ್ದು ತಾನೇ ಆಯ್ದುಕೊಂಡ ಥಿಯರಾಟಿಕಲ್ ಫಿಸಿಕ್ಸ್ ಎಂಬ ಪ್ರಶ್ನೆಗೆ ಮಾತ್ರ. ‘ನೀವು ಮೊದಲ ದರ್ಜೆ ಕೊಟ್ಟರೆ ಮಾತ್ರ ನಾನು ಕೇಂಬ್ರಿಡ್ಜ್​ನಲ್ಲಿ ಕಾಸ್ಮಾಲಜಿ ಅಧ್ಯಯನ ಮಾಡುತ್ತೇನೆಂದು’ ಗೋಗರೆದು ಎಂಟ್ರಿ ಗಿಟ್ಟಿಸಿದ ಮನುಷ್ಯ. ಮುಂದೆ ವಿಶ್ವದ ಕುರಿತು ಈತನ ಶೋಧನೆಗಳು ವಿಜ್ಞಾನಿಗಳನ್ನು ವಿಸ್ಮಯಗೊಳಿಸಿತು. ನಿಜವಾಗಲೂ ಈತ ಇನ್ನೊಬ್ಬ ಐನ್​ಸ್ಟೈನ್ ಎಂದು ವಿಜ್ಞಾನಿಗಳೇ ಕೊಂಡಾಡಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಅವರಿಗಾಗಿಯೇ ವಿಶೇಷ ಹುದ್ದೆ ನೀಡಿತು.

ಕೇಂಬ್ರಿಡ್ಜ್​ನಲ್ಲಿ ಹಾಕಿಂಗ್​ದು ಕವಲೊಡೆದ ಬದುಕು. ಜೇನ್​ಳನ್ನು ಮದುವೆಯಾಗಬೇಕೆಂದು ತಯಾರಿಯಲ್ಲಿದ್ದಾಗಲೇ ‘ನೀವು ಹೆಚ್ಚೆಂದರೆ ಮೂರು ವರ್ಷ ಮಾತ್ರ ಬದುಕಬಹುದು. ಮೋಟಾರ್ ನ್ಯೂರಾನ್ ಕಾಯಿಲೆ ಇದೆ’ಎಂದು ವೈದ್ಯರು ಘೊಷಿಸಿದರು. ಈ ತರುಣ ಬೆಚ್ಚಲಿಲ್ಲ. ಜೇನ್​ಳನ್ನೇ ಮದುವೆಯಾದ. ಈ ದಾಂಪತ್ಯದಲ್ಲಿ ಮೂವರು ಮಕ್ಕಳು ಜನಿಸಿದರು. ಆ ಹೊತ್ತಿಗೆ ಧ್ವನಿ ಕ್ಷೀಣಿಸಿತ್ತು. ಗೊಗ್ಗರು ಧ್ವನಿಯಲ್ಲೇ ತುಂಬ ಕಾಲ ಕಳೆಯಲಾಗಲಿಲ್ಲ. ವಾಯ್್ಸ ಸಿಂಥಸೈಸರ್ ಬಳಸಿ ಧ್ವನಿ ವರ್ಧಿಸಿಕೊಳ್ಳಬೇಕಾದ ಅನಿವಾರ್ಯವಿತ್ತು. ಈ ಹೊತ್ತಿಗಾಗಲೇ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಂ’ ಎಂಬ ಕೃತಿ ಬರೆದು (1988) ಪ್ರಸಿದ್ಧರಾದರು. ತೀರ ಸರಳವಾಗಿ ಎಲ್ಲೂ ಮ್ಯಾಥ್ಸ್ ಈಕ್ವೇಷನ್ಸ್ ಬಳಸದೆ ಕಾಲದ ಚರಿತ್ರೆಯನ್ನು ಅಜ್ಜ ಮೊಮ್ಮಕ್ಕಳಿಗೆ ಹೇಳುವ ಧಾಟಿಯಲ್ಲಿ ಬರೆದರು. ಹತ್ತು ದಶಲಕ್ಷ ಪ್ರತಿಗಳು, 40 ಭಾಷೆಗಳಲ್ಲಿ ಪ್ರಕಟವಾಗಿ, ಮಾರಾಟವಾದವು. ಇಷ್ಟೊಂದು ಜನಪ್ರಿಯತೆ ಗಳಿಸಿದ ಮತ್ತೊಂದು ಕೃತಿ ಇಲ್ಲ ಎಂದು ವಿಶೇಷಣಕ್ಕೆ ಪಾತ್ರವಾಯಿತು. ಗಾಲಿ ಕುರ್ಚಿಯಲ್ಲೇ ಕೂತು ಯಾವ ಕ್ಯಾಲ್ಕು್ಯಲೇಟರ್ ಇಲ್ಲದೆ, ಕಂಪ್ಯೂಟರ್ ಇಲ್ಲದೆ ವಿಶ್ವದ ವಿದ್ಯಮಾನವನ್ನು ಲೆಕ್ಕಹಾಕುತ್ತ ಹೋದರು. ಕಪ್ಪುಕುಳಿಗಳ ಬಗೆಗಿನ ಸಂಶೋಧನೆ ಭಾರಿ ಹೆಸರು ತಂದಿತು. ಇಡೀ ವಿಶ್ವವನ್ನು ಬೇರೆಯ ಕಣ್ಣಲ್ಲಿ ನೋಡುವಂತೆ ಮಾಡಿತು. ಅಗಾಧ ದ್ರವ್ಯರಾಶಿಯ ಕಪ್ಪುಕುಳಿಗಳೂ ಎಲ್ಲವನ್ನೂ ನುಂಗುತ್ತವೆ, ಕೊನೆಗೆ ಬೆಳಕನ್ನೂ ಕೂಡ ಎಂಬ ತಿಳಿವಳಿಕೆ ಇದ್ದಾಗ, ಕಪ್ಪುಕುಳಿಗಳಿಂದ ವಿಕಿರಣ ರೂಪದಲ್ಲಿ ಶಕ್ತಿ ಸೋರಿಕೆಯಾಗುತ್ತವೆ ಎಂಬ ಹಾಕಿಂಗ್​ನ ಸಿದ್ಧಾಂತ ಜಗತ್ತನ್ನೇ ದಂಗುಬಡಿಸಿತು. ಅವರಿಗೆ ಮಿದುಳೇ ಪ್ರಯೋಗಾಲಯ.

ಸ್ಟೀಫನ್ ಹಾಕಿಂಗ್​ನ ಯಶಸ್ಸನ್ನು ಇನ್ನಷ್ಟು ಮೇಲಕ್ಕೆ ಏರಿಸಿದ್ದು ‘ದಿ ಥಿಯರಿ ಆಫ್ ಎವೆರಿಥಿಂಗ್’ ಎನ್ನುವ ಕೃತಿ. ವಿಶ್ವ ಎಡಬಿಡಂಗಿಯಾಗಿ, ಯದ್ವಾತದ್ವವಾಗಿ ವಿಕಾಸವಾಗಿಲ್ಲ, ಪ್ರತಿಯೊಂದು ಹಂತದಲ್ಲೂ ಸೂತ್ರವಿದೆ. ವಿಶ್ವ ಹೇಗೆ ಹುಟ್ಟಿತು, ಅದರ ಹಿಂದಿದ್ದ ಸ್ಥಿತಿ ಏನು? ಹೇಗೆ ವಿಕಾಸವಾಯಿತು? ಅದರ ಅಂತ್ಯ ಹೇಗಾಗುತ್ತದೆ? ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಿದರು. ಮೋಟಾರ್ ನರ್ವ್ ಕಾಯಿಲೆ ಬಂದಾಗ ಬದುಕು ನಿಸ್ಸಾರ ಎನ್ನುತ್ತಿದ್ದ ಹಾಕಿಂಗ್, ಗಾಲಿ ಕುರ್ಚಿಯಲ್ಲಿ ಕೂತು ಜಗತ್ತಿನ ಅನೇಕ ಕಡೆ ಉಪನ್ಯಾಸ ಕೊಡುತ್ತಿದ್ದರು. ಶೂನ್ಯ ಗುರುತ್ವದಲ್ಲಿ ತೇಲಬೇಕೆಂಬ ಆಸೆ ವ್ಯಕ್ತಪಡಿಸಿದಾಗ, ‘ಒಮಿಟ್ ಕಾಮೆಟ್’ ಎಂಬ ಹೆಸರಿನಲ್ಲಿ ಒಂದು ವಿಮಾನವನ್ನೇ ವಿಶೇಷವಾಗಿ ವಿನ್ಯಾಸಗೊಳಿಸಿ, 2007ರಲ್ಲಿ ಅಂತರಿಕ್ಷದಲ್ಲೂ ಪರಿಭ್ರಮಿಸಲು ಕೇಂಬ್ರಿಡ್ಜ್ ನೆರವಾಗಿತ್ತು.

ಸ್ಟೀಫನ್ ಹಾಕಿಂಗ್ ಬರೀ ಆಕಾಶವಾದಿಯಾಗಲಿಲ್ಲ. ಭೂಮಿಯ ಭವಿಷ್ಯದ ಬಗ್ಗೆ ಭಾರಿ ಆತಂಕಪಟ್ಟಿದ್ದರು. ‘ಜಾಗತಿಕ ಭೂತಾಪ ಹೆಚ್ಚುತ್ತ ಹೋಗುತ್ತದೆ, ಒಂದು ಹಂತದಲ್ಲಿ ಅಸಹನೀಯವಾಗುತ್ತದೆ. ಅದು ಆಗುವ ಮುನ್ನ ಮನುಕುಲ ಅನುಕೂಲಕರವಾದ ಇನ್ನೊಂದು ಗ್ರಹಕ್ಕೆ ವಲಸೆಹೋಗಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಡುತ್ತಲೇ ಹೋದರು. 2015ರಲ್ಲಿ ರಷ್ಯದ ಯೂರಿ ಮಿಲ್ಲರ್ ಎಂಬ ಖಗೋಳವಿಜ್ಞಾನಿಯ ಜೊತೆ ಸೇರಿ ಅನ್ಯಲೋಕದ ಜೀವಿಗಳ ಬಗ್ಗೆ ಸಂಶೋಧನೆ ಮಾಡಿದರು. ಭೂಮಿಯಲ್ಲಿ ಜೀವಕೋಟಿ ಇದೆ ಎಂಬ ಸಂಜ್ಞೆ ಎಂದಿಗೂ ಅನ್ಯಗ್ರಹ ವಾಸಿಗಳಿಗೆ ತಿಳಿಯಬಾರದು ಎಂಬ ಎಚ್ಚರಿಕೆಯನ್ನು ಪದೇ ಪದೇ ನೀಡುತ್ತಿದ್ದರು.

‘ನಾವು ದಿನವೂ ಬದುಕಿನಲ್ಲಿ ಸಾಗುವಾಗ ಜಗತ್ತಿನ ಬಗ್ಗೆ ಒಂದಿನಿತೂ ತಿಳಿಯದೆ ಸಾಗುತ್ತಿರುತ್ತೇವೆ’ -ಇದು ‘ಎ ಬ್ರೀಫ್ ಹಿಸ್ಟರಿ ಆಫ್ ಟೈಂ’ನ ಆರಂಭಿಕ ಸಾಲುಗಳು. ಹಾಕಿಂಗ್​ನ ಸಾವೂ ಕೂಡ ಹಾಗೆ. ಅವನ ಮಕ್ಕಳು ಘೊಷಿಸಿದ್ದು: ‘ಜಗತ್ತಿನ ಖ್ಯಾತವಿಜ್ಞಾನಿಯಾದ ನಮ್ಮ ತಂದೆ

ಯಾವುದೇ ನರಳಾಟವಿಲ್ಲದೆ ಇಂದು ಬುಧವಾರ ನಿಧನರಾದರು’ ಎಂದು. ವಿಶ್ವಜ್ಞಾನವೂ ನಿಗೂಢ, ಹಾಗೆಯೇ ಹಾಕಿಂಗ್​ನ ಸಾವೂ ಕೂಡ ನಿಗೂಢ. ಅವರು ಕೂತಿದ್ದ ಗಾಲಿ ಕುರ್ಚಿಯೂ ಈಗ ಖಾಲಿ, ನಮ್ಮ ಭಾವನೆಗಳು ‘ಶೂನ್ಯ ಗುರುತ್ವ’ದಲ್ಲಿ ಮಂಕಾಗಿವೆ.

(ಲೇಖಕರು ಭೂ ವಿಜ್ಞಾನಿ)

 

 

The post ವಿಶ್ವ ವಿಜ್ಞಾನದ ಕಿಂಗ್ appeared first on ವಿಜಯವಾಣಿ.

***

Note from Kannada.Club : This story has been auto-generated from a syndicated feed from http://vijayavani.net/tribute-to-stephen-hawking-tr-anantharamu/