ಲೋಕಸಭಾ ಉಪಚುನಾವಣೆ ಬೇಡ

ಶಿವಮೊಗ್ಗ: ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಯೋಗ ಹೊರಡಿಸಿರುವ ಅಧಿಸೂಚನೆ ತಡೆಹಿಡಿಯುವ ಮೂಲಕ ಅಲ್ಪಾವಧಿ ಚುನಾವಣೆಯಿಂದಾಗುವ ಅನಗತ್ಯ ಖರ್ಚು ತಡೆಗಟ್ಟಬೇಕೆಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್, ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶ, ಒಡಿಶಾ ಮುಂತಾದ ರಾಜ್ಯಗಳಲ್ಲಿ ಖಾಲಿ ಇರುವ 8 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೊಷಿಸದೆ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಆಯೋಗದ ನಡೆ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ಕೇವಲ ನಾಲ್ಕು ತಿಂಗಳ ಅವಧಿಗೆ ಚುನಾವಣೆ ನಡೆಸುವುದರಿಂದ ಹಣ ಪೋಲಾಗುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಕರ್ನಾಟಕದಲ್ಲಿ ಮತದಾರರ ಅಂತರಾಳ ಅರಿಯಲು ಉಪಚುನಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗ ಯಾರ ಅಭಿಪ್ರಾಯವನ್ನೂ ಕೇಳುವುದಿಲ್ಲ. ಒಂದು ರಾಜಕೀಯ ಪಕ್ಷವಾಗಿ ನಾವು ಚುನಾವಣೆ ಎದುರಿಸಲೇಬೇಕು. ಉಪಚುನಾವಣೆ ನಡೆಯದಂತೆ ರಾಜಕಾರಣ ನಡೆಸುವಷ್ಟು ನಮ್ಮ ದೇಶದ ರಾಜಕೀಯ ವ್ಯವಸ್ಥೆ ಪ್ರಬುದ್ಧವಾಗಿಲ್ಲ.

| ಆಯನೂರು ಮಂಜುನಾಥ್ ಬಿಜೆಪಿ ಸಹ ವಕ್ತಾರ

ನಿರ್ಧಾರ ಸಮರ್ಥಿಸಿಕೊಂಡ ಚುನಾವಣಾ ಆಯೋಗ

ನವದೆಹಲಿ: 16ನೇ ಲೋಕಸಭೆಯ ಅವಧಿ ಮುಂದಿನ ಜೂನ್ 3ರ ತನಕ ಇದೆ. ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ (ಎ) ಪ್ರಕಾರ 1 ವರ್ಷಕ್ಕಿಂತ ಹೆಚ್ಚು ಅವಧಿ ಇರುವ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ತೆರವಾದ ಸ್ಥಾನವನ್ನು 6 ತಿಂಗಳೊಳಗೆ ಭರ್ತಿ ಮಾಡೋದು ಕಡ್ಡಾಯ. ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಮೇ 18ರಂದು ಎರಡು, ಮೇ 21ಕ್ಕೆ ಮತ್ತೊಂದು ಲೋಕಸಭಾ ಕ್ಷೇತ್ರ ತೆರವಾಗಿತ್ತು. ಕಾನೂನಾತ್ಮಕವಾಗಿ ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಆಂಧ್ರಪ್ರದೇಶದಲ್ಲಿ ವೈಎಸ್​ಆರ್ ಕಾಂಗ್ರೆಸ್​ನ ಐವರು ಸಂಸದರು ರಾಜೀನಾಮೆ ನೀಡಿದ್ದರೂ ಅಲ್ಲೇಕೆ ಚುನಾವಣೆ ಘೊಷಿಸಿಲ್ಲ ಎಂಬುದನ್ನೂ ಸಮರ್ಥಿಸಿಕೊಂಡಿರುವ ಆಯೋಗ, ಈ ಕ್ಷೇತ್ರಗಳು ತೆರವಾಗಿದ್ದು ಜೂ.20ರಂದು. ಅಂದರೆ ಅವಧಿ 1 ವರ್ಷಕ್ಕಿಂತ ಕಡಿಮೆ ಇದ್ದಾಗ ಎಂದು ಹೇಳಿದೆ.

***

Note from Kannada.Club : This story has been auto-generated from a syndicated feed from http://vijayavani.net/lok-sabha-election-by-election-ayanuru-manjunatha-kimmane-ratnakara-shimoga/