ರೈತರ ಚಿನ್ನಾಭರಣ ಹರಾಜಿಗೆ ಖಂಡನೆ

ಮಂಡ್ಯ: ರೈತರು ಅಡವಿಟ್ಟ ಚಿನ್ನಾಭರಣಗಳ ಹರಾಜು ಖಂಡಿಸಿ ನಗರದ ಎಸ್‌ಬಿಐ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಮಂಗಳವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿವಿ ರಸ್ತೆಯಲ್ಲಿನ ಬ್ಯಾಂಕ್ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಬ್ಯಾಂಕ್ ನೀಡಿರುವ ಸಾಲ ವಸೂಲಾತಿ ನೋಟಿಸ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್ ಶಾಖೆಗಳಲ್ಲಿ ಅಡವಿಟ್ಟಿರುವ ಒಡವೆಗಳ ಹರಾಜು ಪ್ರಕ್ರಿಯೆಯನ್ನು ಪ್ರಾದೇಶಿಕ ಕಚೇರಿಯಲ್ಲಿ ನಡೆಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆಭರಣಗಳನ್ನು ಹರಾಜು ಮಾಡಬಾರದು, ಹರಾಜು ನೋಟಿಸ್ ಕಳುಹಿಸಬಾರದು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಮರು ಪಾವತಿ ಮಾಡುವಂತೆ ನೋಟಿಸ್ ನೀಡಬಾರದು. ಮುಂದಿನ ದಿನಗಳಲ್ಲಿ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಸುಧಾರಿಸಿದ ನಂತರ ಸಾಲ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಪ್ರತಿಭಾಟನಾಕಾರರನ್ನು ಭೇಟಿಯಾದ ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ರಮೇಶ್‌ಬಾಬು, ಆಭರಣ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಕನ್ನಲಿ ನವೀನ್, ಹಲ್ಲೇಗೆರೆ ಹರೀಶ್, ಎಂ.ಎಸ್.ವಿಜಯ್‌ಕುಮಾರ್, ಪಿ.ಕೆ.ನಾಗಣ್ಣ, ಹಳುವಾಡಿ ಶ್ರೀನಿವಾಸ್, ಲತಾ ಶಂಕರ್ ಮತ್ತು ಇತರರಿದ್ದರು.

***

Note from Kannada.Club : This story has been auto-generated from a syndicated feed from http://vijayavani.net/mandya-farmers-jewelry-auction/