ರಿಷಭ್ ಪಂತ್​ಗೆ ಅವಕಾಶ ನಿರೀಕ್ಷೆ

ಹೈದರಾಬಾದ್: ಟೆಸ್ಟ್ ಸರಣಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಗುರುವಾರ ಹೈದರಾಬಾದ್​ನಲ್ಲಿ ಆರಿಸಲಾಗುವುದು. ಮಾಜಿ ನಾಯಕ ಎಂಎಸ್ ಧೋನಿ ಕೆಟ್ಟ ಬ್ಯಾಟಿಂಗ್ ಫಾಮ್ರ್ನಲ್ಲಿರುವ ಕಾರಣ, ರಿಷಭ್ ಪಂತ್ ಅವರನ್ನು ಮೀಸಲು ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಅ. 21ರಿಂದ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಮೊದಲ 3 ಪಂದ್ಯಗಳಿಗೆ ಮಾತ್ರವೇ ಅಥವಾ ಸಂಪೂರ್ಣ ಸರಣಿಗೆ ತಂಡದ ಆಯ್ಕೆ ನಡೆಯಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಚಿಂತನೆಯೂ ನಡೆದಿದ್ದು, ಸಂಪೂರ್ಣ ಅಲ್ಲದಿದ್ದರೂ, ಸರಣಿಯ ಕೆಲ ಪಂದ್ಯಗಳಿಂದ ಅವರು ಹೊರಗುಳಿಸುವ ಸಾಧ್ಯತೆ ಇದೆ. ಅವರ ಗೈರಿನಲ್ಲಿ ಮತ್ತೆ ರೋಹಿತ್ ಶರ್ಮ ತಂಡ ಮುನ್ನಡೆಸಬಹುದು.

ರಿಷಭ್​ಗೆ ಚಾನ್ಸ್?: ವಿಕೆಟ್ ಕೀಪರ್ ಆಗಿ ಧೋನಿ 37ನೇ ವಯಸ್ಸಿನಲ್ಲೂ ಚುರುಕುತನ ಉಳಿಸಿಕೊಂಡಿದ್ದಾರೆ. ಆದರೆ ಅವರ ಬ್ಯಾಟಿಂಗ್ ಫಾಮ್ರ್ ಹಿಂದಿನ ಚಾಮ್ರ್ ಉಳಿಸಿಕೊಂಡಿಲ್ಲ. ‘ಮುಂದಿನ ವರ್ಷದ ವಿಶ್ವಕಪ್ ತನಕ ಧೋನಿ ಆಡುವುದು ಖಚಿತ. ಆದರೆ ಇದೇ ಸಮಯದಲ್ಲಿ ಪಂತ್ ಅವರನ್ನು ಬೆಳೆಸುವುದರಲ್ಲಿ ತಪ್ಪಿಲ್ಲವಲ್ಲ. ಪಂತ್ ಪಂದ್ಯ ಮುಗಿಸಿಕೊಡುವ 6 ಅಥವಾ 7ನೇ ಕ್ರಮಾಂಕದ ಉಪಯುಕ್ತ ಬ್ಯಾಟ್ಸ್ ಮನ್ ಕೂಡ ಆಗಬಲ್ಲರು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ಓವಲ್ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ 21 ವರ್ಷದ ರಿಷಭ್, ರಾಜ್​ಕೋಟ್ ಟೆಸ್ಟ್​ನಲ್ಲಿ ವಿಂಡೀಸ್ ವಿರುದ್ಧ ಬಿರುಸಿನ 91 ರನ್ ಬಾರಿಸಿದ್ದರು. ಇದರಿಂದ ಅವರಿಗೆ ಏಕದಿನ ತಂಡದ ಬಾಗಿಲನ್ನೂ ತೆರೆಯಲು ಆಯ್ಕೆಗಾರರು ಉತ್ಸುಕರಾಗಿದ್ದಾರೆ.

ಮೀಸಲು ವಿಕೆಟ್ ಕೀಪರ್ ಆಗಿ ಬಳಕೆಯಾಗಬಲ್ಲ ದಿನೇಶ್ ಕಾರ್ತಿಕ್ ಏಷ್ಯಾಕಪ್​ಗೆ ತಂಡದಲ್ಲಿದ್ದರೂ ಸ್ಥಿರ ನಿರ್ವಹಣೆ ತೋರಿರಲಿಲ್ಲ ಮತ್ತು ತಂಡವನ್ನು ಗೆಲುವಿನ ದಡ ಸೇರಿಸಿಕೊಡಲು ಅಸಮರ್ಥರಾಗಿದ್ದರು. ಹೀಗಾಗಿ ಕಾರ್ತಿಕ್ ಜಾಗದಲ್ಲಿ ರಿಷಭ್, ವಿಶ್ವಕಪ್​ಗೆ ಮುನ್ನ ಒಂದಷ್ಟು ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. -ಪಿಟಿಐ

ಜಾಧವ್ ಅಲಭ್ಯ

ಏಷ್ಯಾಕಪ್ ವೇಳೆ ಗಾಯಗೊಂಡಿದ್ದ ಕೇದಾರ್ ಜಾಧವ್ ಪೂರ್ಣ ಗುಣಮುಖರಾಗದ ಕಾರಣ ಸರಣಿಗೆ ಅಲಭ್ಯರಾಗಿದ್ದಾರೆ. ಏಷ್ಯಾಕಪ್​ನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದ್ದ ಅಂಬಟಿ ರಾಯುಡು ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಕನ್ನಡಿಗ ಮನೀಷ್ ಪಾಂಡೆಗೆ ಸ್ಥಾನ ಕೈತಪು್ಪವ ಸಾಧ್ಯತೆ ಇದೆ. ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಅವಕಾಶ ಸಿಕ್ಕಾಗ ಅವರು ಅದನ್ನು ಬಳಸಿಕೊಂಡಿರಲಿಲ್ಲ. ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ವಿಶ್ರಾಂತಿಯ ನಂತರ ತಂಡಕ್ಕೆ ಮರಳುವ ನಿರೀಕ್ಷೆ ಇದೆ.

***

Note from Kannada.Club : This story has been auto-generated from a syndicated feed from http://vijayavani.net/india-vs-west-indies-rishabh-pant-the-darkhorse-as-selectors-pick-squad-for-wi%e2%80%89odis-on-thursday/