ರಶ್ಮಿ ದುನಿಯಾದಲ್ಲಿ ಡಿಫರೆಂಟ್ ಸಿನಿಮಾ

ಮೊದಲ ಚಿತ್ರ ‘ದುನಿಯಾ’ ಮೂಲಕ ಸ್ಯಾಂಡಲ್​ವುಡ್​ಗೆ ಭರವಸೆಯ ನಟಿಯಾಗಿ ಪದಾರ್ಪಣೆ ಮಾಡಿದ ರಶ್ಮಿ, ಆನಂತರದಲ್ಲಿ ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆಯೇ. ಕಾರಣ, ವಿಭಿನ್ನವಾದ ಪಾತ್ರಗಳ ಮೂಲಕ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಅವರದು. ಇದೇ ಶುಕ್ರವಾರ (ಸೆ.14) ತೆರೆಕಾಣಲಿರುವ, ವಿನೋದ್​ಕುಮಾರ್ ನಿರ್ದೇಶನದ ‘ಕಾರ್ನಿ’ ಚಿತ್ರದಲ್ಲಿ ಮುಖ್ಯಪಾತ್ರ ನಿಭಾಯಿಸಿರುವ ರಶ್ಮಿ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ.

| ಪದ್ಮಶ್ರೀ ಭಟ್ ಬೆಂಗಳೂರು

# ಎರಡು ವರ್ಷಗಳ ನಂತರ ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಹೇಗೆ ಅನಿಸುತ್ತಿದೆ?

ಒಂದೊಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ, ಈಗ ಸಿಕ್ಕಿದೆ. ತುಂಬ ವಿಭಿನ್ನವಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಧರಿತ ಸಿನಿಮಾ ‘ಕಾರ್ನಿ’. ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಿದೆ. ಆದರೆ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಕೂಡ ಇದೆ. ಇಡೀ ಕುಟುಂಬ ಸೇರಿ ನೋಡುವ ಸಿನಿಮಾ ಇದು.

# ‘ಕಾರ್ನಿ’ಯಲ್ಲಿ ನಿಮ್ಮ ಪಾತ್ರ ಹೇಗಿದೆ?

ಬರಹಗಾರ್ತಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಜತೆಗೆ ಮೂಗಿಯೂ ಹೌದು. ಕೈ ಸನ್ನೆ ಮೂಲಕವೇ ನಾನು ಎಲ್ಲವನ್ನು ಹೇಳಬೇಕು. ಮಾತಿನ ಜತೆ ಹಾವ-ಭಾವ ಸಹಿತ ನಟಿಸುವುದೇ ಕಷ್ಟ. ಅಂಥದ್ದರಲ್ಲಿ ಮೂಗಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ತುಂಬ ತ್ರಾಸದಾಯಕ.

# ಟ್ರೇಲರ್ ತುಂಬ ಭಿನ್ನವಾಗಿದೆ. ನಿಮ್ಮ ಪಾಲಿಗೆ ಈ ಸಿನಿಮಾ ಯಾಕೆ ಸ್ಪೆಷಲ್?

ಈ ಚಿತ್ರದಲ್ಲಿ ಹಾಡುಗಳಿಲ್ಲ. ಒಂದು ಗಂಟೆ ನಲವತೆôದು ನಿಮಿಷದ ಸಿನಿಮಾ ಇದಾಗಿದೆ. ಕಥೆ ತುಂಬ ಚೆನ್ನಾಗಿತ್ತು. ಹಾಗಾಗಿ, ಅಭಿನಯಿಸಲು ಒಪ್ಪಿಕೊಂಡೆ. ಜನರನ್ನು ಸೀಟಿನ ತುದಿಗೆ ತಂದು ಕೂರಿಸುವಷ್ಟರ ಮಟ್ಟಿಗೆ ಕ್ಷಣ ಕ್ಷಣವೂ ಕುತೂಹಲಕಾರಿಯಾಗಿರುತ್ತದೆ.

# ನಾಯಕಿಪ್ರಧಾನ ಸಿನಿಮಾದ ಅವಕಾಶ ಸಿಗುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ…

ಸುಮ್ಮನೆ ಸಿನಿಮಾ ಮಾಡಬೇಕು ಎಂಬ ಕಾರಣಕ್ಕೆ ಒಪ್ಪಿಕೊಳ್ಳುವವಳು ನಾನಲ್ಲ, ಹೆಸರಿನ ಹಿಂದೆ ಹೋದವಳೂ ನಾನಲ್ಲ. ಇಷ್ಟು ವರ್ಷದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ‘ದುನಿಯಾ’ ತೆರೆಕಂಡ ನಂತರ ಕೆಲವೊಂದು ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದೆ ಅನಿಸುತ್ತದೆ. ಆಗ ನನಗೆ ಈ ಕ್ಷೇತ್ರ ಹೊಸದು. ಯಾರೂ ಕೂಡ ಈ ಕಥೆ ಚೆನ್ನಾಗಿದೆ, ಹಾಗೆ ಮಾಡು, ಹೀಗೆ ಮಾಡು ಎಂದು ಹೇಳುವವರಿರಲಿಲ್ಲ. ಕಥೆ ಆಯ್ಕೆ ಕಷ್ಟ ಎನಿಸುತ್ತಿತ್ತು. ಈಗ ನಾಯಕಿಪ್ರಧಾನ ಸಿನಿಮಾ ಸಿಕ್ಕಿದ್ದಕ್ಕೆ ಖುಷಿಯಿದೆ.

# ಬಹುತೇಕ ಶೂಟಿಂಗ್ ರಾತ್ರಿ ವೇಳೆಯೇ ನಡೆದಿದೆ ಯಾಕೆ?

ಹಾಲಿವುಡ್ ಮಾದರಿಯಲ್ಲಿ ಸಿನಿಮಾ ಮೂಡಿಬಂದಿದೆ. ಎಫೆಕ್ಟ್, ಗ್ರಾಫಿಕ್ಸ್ ಅದೇ ಮಾದರಿಯಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಧಾರಿತ ಸಿನಿಮಾವಾದ್ದರಿಂದ ರಾತ್ರಿ ಚಿತ್ರೀಕರಣ ಮಾಡುವ ಅಗತ್ಯವಿತ್ತು. ಹೀಗಾಗಿ ನಿದ್ದೆಗೆಟ್ಟು ಸಿನಿಮಾ ಮಾಡಿದ್ದೇವೆ.

# ಹಬ್ಬದ ಸಮಯಕ್ಕೆ ಸರಿಯಾಗಿ ‘ಕಾರ್ನಿ’ ತೆರೆಕಾಣುತ್ತಿರುವುದಕ್ಕೆ ಏನನ್ನಿಸುತ್ತಿದೆ?

ಹಬ್ಬದ ಸಮಯಕ್ಕೆ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸುತ್ತವೆ. ಸೌಭಾಗ್ಯವೋ ಎಂಬಂತೆ ‘ದಿ ವಿಲನ್’ ಚಿತ್ರದ ರಿಲೀಸ್ ಡೇಟ್ ನಮಗೆ ಸಿಕ್ಕಿದೆ. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ‘ಪ್ರಯತ್ನಕ್ಕೆ ಫಲ ಇದೆ’ ಎಂಬ ಮಾತಿದೆ. ಜನರು ಹರಸಿ, ಹಾರೈಸುತ್ತಾರೆ ಎಂದುಕೊಂಡಿದ್ದೇನೆ.

# ಬೇರೆ ಯಾವ ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೀರಿ?

‘ಪ್ರೊಡಕ್ಷನ್ ನಂ. 1’, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ‘ದುನಿಯಾ’ ನಂತರ ತುಂಬ ಅವಕಾಶಗಳು ಬರುತ್ತಿದ್ದವು. ಆದರೆ ಕಥೆ ಹೇಳುವುದು ಒಂದಾಗಿತ್ತು, ಸಿನಿಮಾ ಮಾಡುವುದು ಬೇರೆ ಆಗಿತ್ತು. ಹೀಗಾಗಿ ನಾನು ಅವಸರಕ್ಕೆ ಬಿದ್ದು ಸಿನಿಮಾ ಮಾಡುವುದು ಸರಿಯಲ್ಲ ಎಂದುಕೊಂಡು ಹಲವು ಆಫರ್​ಗಳನ್ನು ಕೈಬಿಟ್ಟಿದ್ದೇನೆ. ತಮಿಳಿನಲ್ಲಿ ಹೆಚ್ಚು ಅವಕಾಶಗಳು ಬಂದಿವೆ. ಕನ್ನಡದಲ್ಲಿಯೇ ಒಳ್ಳೆಯ ಕಥೆ ಆಧಾರಿತ ಚಿತ್ರದ ಅವಕಾಶ ಸಿಕ್ಕಿದರೆ ತಮಿಳು ಚಿತ್ರದಲ್ಲಿ ಅಭಿನಯಿಸುವ ಯೋಚನೆ ಮಾಡಲಾರೆ. ಕಳೆದ ಒಂದು ವರ್ಷದಿಂದ ಒಳ್ಳೊಳ್ಳೆಯ ಕಥೆಗಳನ್ನು ಕೇಳಿದ್ದೇನೆ. ಹೊಸಬರು ಪ್ಯಾಶನ್ ಇಟ್ಟುಕೊಂಡು ಸ್ಯಾಂಡಲ್​ವುಡ್​ಗೆ ಬರುತ್ತಿರುವುದು ಒಳ್ಳೆಯ ವಿಚಾರ. ಅಂತಹ ತಂಡದಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ.

# ‘ದುನಿಯಾ’ ಚಿತ್ರ ತೆರೆಕಂಡು ಹಲವು ವರ್ಷಗಳು ಕಳೆದಿವೆ. ಇಂದಿಗೂ ನಿಮ್ಮನ್ನು ದುನಿಯಾ ರಶ್ಮಿ ಎಂದೇ ಜನರು ಗುರುತಿಸುತ್ತಾರೆ. ಆದರೆ ‘ಕಾರ್ನಿ’ಯಲ್ಲಿ ಎಂದೂ ಕಂಡಿರದ ರಶ್ಮಿಯನ್ನು ನೋಡಬಹುದೇ?

ನಿಜವಾಗಲೂ ನೋಡಬಹುದು. ಈ ಚಿತ್ರದಲ್ಲಿ ಫೈಟ್ ಸೀನ್​ಗಳಿವೆ. ಎಕ್ಸ್​ಪ್ರೆಷನ್​ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಮೂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನನ್ನ ಭಾವಾಭಿವ್ಯಕ್ತಿ ತುಂಬ ಮುಖ್ಯವಾಗುತ್ತದೆ. ‘ದುನಿಯಾ’ ಚಿತ್ರದ ರಶ್ಮಿಯನ್ನು ಇಲ್ಲಿ ಕಾಣಲು ಸಾಧ್ಯವಿಲ್ಲ.

***

Note from Kannada.Club : This story has been auto-generated from a syndicated feed from http://vijayavani.net/duniya-rashmi-actress-rashmi-sandalwood-karni-film/