ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದೆಹಲಿ ಪೊಲೀಸ್​ ಅಧಿಕಾರಿ ಮಗ

<< ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯಿಂದ ಅತ್ಯಾಚಾರ ದೂರು >>

ನವದೆಹಲಿ: ದೆಹಲಿಯ ಪೊಲೀಸ್​ ಅಧಿಕಾರಿಯೊಬ್ಬರ ಮಗ ಯುವತಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ವೈರಲ್​ ಆಗಿದ್ದು, ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ರೋಹಿತ್ ಸಿಂಗ್​ ತೋಮರ್​ ಎಂಬಾತ ಯುವತಿಯೊಬ್ಬರ ತಲೆಗೂದಲನ್ನು ಹಿಡಿದು ನೆಲದ ಮೇಲೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಜತೆಗೆ ಮೊಣಕಾಲಿನಿಂದ ಒದ್ದು, ಮೊಣಕೈನಿಂದ ಗುದ್ದಿ ಯುವತಿಗೆ ಥಳಿಸಿದ್ದಾನೆ. ರೋಹಿತ್​ನ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಆದರೆ ಯಾರೊಬ್ಬರೂ ಯುವತಿಯ ಸಹಾಯಕ್ಕೆ ಹೋಗಿಲ್ಲ.

ಸೆಪ್ಟೆಂಬರ್​ 2 ರಂದು ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಆದರೆ, ಇದುವರೆಗೆ ಈ ಘಟನೆ ಬೆಳಕಿಗೆ ಬಂದಿರಲಿಲ್ಲ. ರೋಹಿತ್​ ಮಾಜಿ ಪ್ರೇಯಸಿ ಈ ಘಟನೆಯ ಕುರಿತು ಗುರುವಾರ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಆಕೆ ತನಗೆ ರೋಹಿತ್​ ಈ ವಿಡಿಯೋವನ್ನು ಕಳುಹಿಸಿ ನನ್ನನ್ನು ಮದುವೆಯಾಗದಿದ್ದರೆ ವಿಡಿಯೋದಲ್ಲಿರುವ ಯುವತಿಗೆ ಆದ ಗತಿಯೇ ನಿನಗಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಗೃಹ ಸಚಿವರ ಗಮನಕ್ಕೆ

ಇದೇ ಸಂದರ್ಭದಲ್ಲಿ ಈ ವಿಡಿಯೋ ಸಹ ವೈರಲ್​ ಆಗಿತ್ತು. ಇದು ಗೃಹ ಸಚಿವ ರಾಜನಾಥ್​ ಸಿಂಗ್​ ಅವರ ಗಮನಕ್ಕೂ ಬಂದಿತ್ತು. ತಕ್ಷಣ ಅವರು ದೆಹಲಿ ಪೊಲೀಸ್​ ಕಮಿಷನರ್​ ಅಮೂಲ್ಯ ಪಟ್ನಾಯಕ್​ ಅವರಿಗೆ ಕರೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಗೃಹ ಸಚಿವರಿಂದ ಸೂಚನೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಶುಕ್ರವಾರ ರೋಹಿತ್​ನನ್ನು ಬಂಧಿಸಿದ್ದಾರೆ. ಶುಕ್ರವಾರ ರೋಹಿತ್​ನಿಂದ ಥಳಿತಕ್ಕೊಳಗಾಗಿರುವ ಯುವತಿ ಸಹ ಪೊಲೀಸ್​ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್​ 2 ರಂದು ರೋಹಿತ್​ ಉತ್ತಮ ನಗರದಲ್ಲಿರುವ ತನ್ನ ಸ್ನೇಹಿತನ ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದ. ಈ ಸಂದರ್ಭದಲ್ಲಿ ಆತ ನನ್ನ ಮೇಲೆ ಅತ್ಯಾಚಾರವೆಸಗಿ ಈ ವಿಷಯವನ್ನು ಬಹಿರಂಗ ಪಡಿಸದಂತೆ ಹಿಗ್ಗಾಮುಗ್ಗಾ ಥಳಿಸಿದ್ದ ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈಗ ಪೊಲೀಸರು ರೋಹಿತ್​ ವಿರುದ್ಧ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

***

Note from Kannada.Club : This story has been auto-generated from a syndicated feed from http://vijayavani.net/rohit-tomar-who-was-seen-beating-a-woman-in-a-viral-video-in-delhi-has-been-arrested/