ಯಾರಿಗೆ ಹತ್ತಿರ ಬೆಂ.ಉತ್ತರ

ಅತ್ತ ಪೂರ್ಣ ಪ್ರಮಾಣದಲ್ಲಿ ಮೆಟ್ರೋಪಾಲಿಟನ್ ಲಕ್ಷಣಗಳೂ ಇಲ್ಲ. ಇತ್ತ ಗ್ರಾಮೀಣ ಸೊಗಡೂ ಉಳಿದಿಲ್ಲ. ಕಡು ಬಡವರು, ಕೂಲಿಕಾರ್ವಿುಕರು, ನಿತ್ಯ ದುಡಿದೇ ತಿನ್ನಬೇಕಾದ ಸ್ಥಿತಿ. ಇವರೊಟ್ಟಿಗೆ ಆಗರ್ಭ ಶ್ರೀಮಂತರು ವಾಸಿಸುವ ಡಾಲರ್ಸ್ ಕಾಲೋನಿಯೂ ಇಲ್ಲುಂಟು. ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಶೇಷ. ಕ್ಷೇತ್ರವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಪ್ರತಿನಿಧಿಸುತ್ತಿದ್ದಾರೆ. ಮೂವರು ಕಾಂಗ್ರೆಸ್ ಶಾಸಕರಿದ್ದರೂ, ಬ್ಯಾಟರಾಯನಪುರದ ಕೃಷ್ಣ ಬೈರೇಗೌಡರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ದಳಪತಿಗಳಲ್ಲಿ ತಳಮಳ ಸೃಷ್ಟಿಸಿದ್ದಾರೆ. ಮೂರು ಕ್ಷೇತ್ರಗಳು ಬಿಜೆಪಿ ಮುಷ್ಟಿಯಲ್ಲಿವೆ. ಜೆಡಿಎಸ್ ತೆಕ್ಕೆಯಲ್ಲಿರುವ 2 ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಕಸರತ್ತು ನಡೆಸಿದೆ. ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ಜನರಿರುವುದರಿಂದ ಅಭ್ಯರ್ಥಿಗಳ ‘ಉತ್ತರೊತ್ತರ’ ಗೆಲುವಿಗೆ ಪಕ್ಷದ ಶಕ್ತಿಗಿಂತ ವ್ಯಕ್ತಿಗತ ವರ್ಚಸ್ಸು ಮುಖ್ಯವಾಗುತ್ತದೆ. ಅಭ್ಯರ್ಥಿಗಳು ಜನರೊಂದಿಗೆ ಹೊಂದಿರುವ ಬಾಂಧವ್ಯಕ್ಕೆ ಹೆಚ್ಚು ಬೆಲೆ. ಹಾಗಾಗಿ ರಾಜಕೀಯ ಲೆಕ್ಕಾಚಾರ ಸುಲಭವಾಗಿ ಸಿಗುವುದಿಲ್ಲ.

ಸಚಿವ ಕೃಷ್ಣಗೆ ‘ಮೀನಾಕ್ಷಿ’ ಕಟಾಕ್ಷ!

ಬ್ಯಾಟರಾಯನಪುರಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಪ್ರತಿನಿಧಿ. ಹೈ ಫ್ರೋಫೈಲ್ ಆಟಿಟ್ಯೂಡ್, ಸಾಮಾನ್ಯ ಜನರಿರಲಿ, ಕಾರ್ಯಕರ್ತರಿಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ. ಕ್ಷೇತ್ರದಲ್ಲಿ ಯಾವುದೇ ವಿಶೇಷ ಅಭಿವೃದ್ಧಿ ಕೆಲಸವಾಗಿಲ್ಲ. ಕ್ಷೇತ್ರದ ಗ್ರಾಮೀಣ ಪ್ರದೇಶಗಳು ಆಧುನಿಕತೆಗೆ ತುಡಿಯುತ್ತಿದ್ದರೂ ಸೌಲಭ್ಯ ಕಲ್ಪಿಸುವಲ್ಲಿ ಸಚಿವರು ಉದಾಸೀನತೆ ತೋರಿದ್ದಾರೆ ಎಂಬ ಅಸಮಾಧಾನ ಜನರಲ್ಲಿ ಮಡುಗಟ್ಟಿದೆ. ಕೃಷ್ಣರ ಪತ್ನಿ ಮೀನಾಕ್ಷಿಯವರು ರೆಸಿಡೆನ್ಸ್ ವೆಲ್ಪೇರ್ ಅಸೋಸಿಯೇಷನ್, ಸಿಟಿಜನ್ಸ್ ಫೋರಂ ಅಂತಹ ನಾನಾ ಸಂಘಟನೆಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ಸಚಿವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮತದಾರರು ಹೇಳುತ್ತಾರೆ. ಬಿಜೆಪಿಯಿಂದ ಮಾಜಿ ಡಿಸಿಎಂ ಆರ್.ಅಶೋಕ್ ಹತ್ತಿರದ ಸಂಬಂಧಿ ಎ.ರವಿ ಪೈಪೋಟಿ ನೀಡುತ್ತಿದ್ದಾರೆ. ಜೆಡಿಎಸ್​ನಿಂದ ಟಿ.ಜೆ.ಚಂದ್ರಣ್ಣ ಕಣದಲ್ಲಿದ್ದಾರೆ.

ಅವರ ಅಂತಃಕಲಹ ಇವರಿಗೆ ವರ!

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದ ಮಹಾಲಕ್ಷ್ಮಿಪುರ ಶಾಸಕ ಕೆ.ಗೋಪಾಲಯ್ಯ, ದೇವೇಗೌಡ ಹಾಗೂ ಕುಮಾರಸ್ವಾಮಿ ಆಶೀರ್ವಾದ ಬಲದಿಂದ ‘ಉಳಿದು’ಕೊಂಡು ಎರಡನೇ ಬಾರಿಗೂ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ ಹೆಸರಿದೆ. ಕಾಂಗ್ರೆಸ್​ಗೆ ಕೈಕೊಟ್ಟು ಹೋದ ಮಾಜಿ ಶಾಸಕ ನೆ.ಲ.ನರೇಂದ್ರಬಾಬುಗೆ ಬಿಜೆಪಿ ಟಿಕೆಟ್ ನೀಡಿದೆ. ಪರಿಣಾಮ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಉಪಮೇಯರ್ ಹರೀಶ್ ಮತ್ತು ಮಾಜಿ ಕಾಪೋರೇಟರ್ ನಾಗರಾಜ್ ತಟಸ್ಥ ಧೋರಣೆ ತಳೆದಿದ್ದಾರೆ. ಇದು ಜೆಡಿಎಸ್​ಗೆ ವರವಾಗುವ ಲಕ್ಷಣಗಳಿವೆ. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಗಿರೀಶ್ ಕೆ.ನಾಶಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಯುವ ನಾಯಕ ಎಚ್.ಎಸ್.ಮಂಜುನಾಥ್​ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಇದು ಪಕ್ಷದ ಕೆಲವರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಪುಲಿಕೇಶಿ‘ಸಮರ’

ಪುಲಿಕೇಶಿನಗರದಲ್ಲಿ ಜೆಡಿಎಸ್​ನಿಂದ ಚುನಾಯಿತರಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈಗ ಕಾಂಗ್ರೆಸ್​ನಿಂದ ಕಣದಲ್ಲಿದ್ದಾರೆ. ದಲಿತ ನಾಯಕ, ಮಾಜಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಪುತ್ರ ಪ್ರಸನ್ನಕುಮಾರ್ ಜೆಡಿಎಸ್​ನಿಂದ ಸೆಡ್ಡು ಹೊಡೆದಿದ್ದಾರೆ. ಪ್ರಸನ್ನಕುಮಾರ್ ಬರಬಹುದು ಎಂದು ಬಿಜೆಪಿ ವರಿಷ್ಠರು ನಿರೀಕ್ಷಿಸಿದ್ದರು. ಅವರು ಬಾರದ ಹಿನ್ನೆಲೆಯಲ್ಲಿ ಸುಶೀಲಾ ದೇವರಾಜ್ ಕಣಕ್ಕಿಳಿಸಿದೆ. ಮುಸ್ಲಿಂ ಹಾಗೂ ತಮಿಳು ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ.

‘ಮುನಿ’ ಗೆಲುವಿಗೆ ಅಡ್ಡಿ ಯಾರು?

ದಾಸರಹಳ್ಳಿ ಯಲ್ಲಿ ಬಿಜೆಪಿಯ ಹಾಲಿ ಶಾಸಕ ಮುನಿರಾಜು ಹ್ಯಾಟ್ರಿಕ್ ಗೆಲುವಿಗೆ ಪ್ರಯತ್ನಿ ಸುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡ ಬಿ.ಎಲ್.ಶಂಕರ್ ಈ ಸಲ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ. ಅವರ ಸ್ಥಾನದಲ್ಲಿ ಪಿ.ಎನ್.ಕೃಷ್ಣಮೂರ್ತಿ ಇದ್ದಾರೆ. ಆರ್.ಮಂಜುನಾಥ್ ಜೆಡಿಎಸ್ ಅಭ್ಯರ್ಥಿ. ಶಾಸಕ ಮುನಿರಾಜು ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪವಿದ್ದರೂ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ.

ಯಶವಂತಪುರದಲ್ಲಿ ತ್ರಿಕೋನ ಸ್ಪರ್ಧೆ

ಕಾಂಗ್ರೆಸ್ ಬಿಗಿಮುಷ್ಟಿಯಲ್ಲಿರುವ ಯಶವಂತಪುರ ಕ್ಷೇತ್ರವನ್ನು ಎಸ್.ಟಿ. ಸೋಮಶೇಖರ್ ಪ್ರತಿನಿಧಿಸುತ್ತಿದ್ದು, 2ನೇ ಬಾರಿ ಸೆಣಸಾಟಕ್ಕೆ ಸಜ್ಜಾಗಿದ್ದಾರೆ. ಜೆಡಿಎಸ್ ಕೂಡ ಪ್ರಬಲವಾಗಿದ್ದು ಜವರಾಯಿಗೌಡ ಸ್ಪರ್ಧಿಸಿದ್ದಾರೆ. ಯಾರೂ ನಿರೀಕ್ಷಿಸದ ರೀತಿ ಚಿತ್ರನಟ ಜಗ್ಗೇಶ್ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ರಣಾಂಗಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಕೇಡರ್ ಬೇಸ್ ವೋಟ್, ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಇದೆ. ಅಲ್ಲದೆ, ಪ್ರಧಾನಿ ಮೋದಿ ರ‍್ಯಾಲಿ ನಡೆಸಿ ಹೋಗಿದ್ದಾರೆ. ಇದು ಜಗ್ಗೇಶ್​ಗೆ ಪಾಸಿಟಿವ್ ಆಗಬಹುದೆಂಬ ನಿರೀಕ್ಷೆ ಕಾರ್ಯಕರ್ತರದ್ದು.

ಬೇರು ಬಿಟ್ಟ ಬೈರತಿಗೆ ನಂದೀಶ್ ರೆಡ್ಡಿ ಸವಾಲು

ಕೆ.ಆರ್.ಪುರಂ ಅನ್ನು ಮುಖ್ಯಮಂತ್ರಿಗಳ ಆಪ್ತ ಭೈರತಿ ಬಸವರಾಜ್ ಆಳುತ್ತಿದ್ದಾರೆ. ಸಾಂಪ್ರದಾಯಿಕ ಎದುರಾಳಿ ನಂದೀಶ್ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಬಲವಾಗಿ ಬೇರು ಬಿಟ್ಟಿರುವ ಬೈರತಿ, 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ. ಕ್ಷೇತ್ರವನ್ನು ಮರಳಿ ಪಡೆಯಲೇಬೇಕೆಂದು ಬಿಜೆಪಿ ಪ್ರಯತ್ನ ನಡೆಸಿದೆ. ಜೆಡಿಎಸ್ ಅಭ್ಯರ್ಥಿ ಡಿ.ಎ.ಗೋಪಾಲ್ ಕೂಡ ಹೋರಾಟದಲ್ಲಿದ್ದಾರೆ.

ಹ್ಯಾಟ್ರಿಕ್ ಉತ್ಸಾಹದಲ್ಲಿ ಅಶ್ವತ್ಥವೃಕ್ಷ

ಮಲ್ಲೇಶ್ವರಂ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಡಾ.ಆಶ್ವತ್ಥ ನಾರಾಯಣ ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದಾರೆ. ಸಚಿವ ಸೀತಾರಾಂಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದರೂ, ಪೂರ್ವ ತಯಾರಿ ನೆಪವೊಡ್ಡಿ ಹಿಂದೆ ಸರಿದರು. ಕೊನೇ ಕ್ಷಣದಲ್ಲಿ ಕೆಂಗಲ್ ಹನುಮಂತಯ್ಯ ನವರ ಮೊಮ್ಮಗ ಶ್ರೀಪಾದರೇಣುಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಜೆಡಿಎಸ್​ನಿಂದ ಮಧುಸೂದನ್ ಕಣದಲ್ಲಿದ್ದಾರೆ. ಬಿಜೆಪಿ ಸಲೀಸಾಗಿ ಗೆಲ್ಲುವ ಉತ್ಸಾಹದಲ್ಲಿದೆ.

ಹೆಬ್ಬಾಳದಲ್ಲಿ ಬಿಜೆಪಿ ಕಾಂಗ್ರೆಸ್

ಹೆಬ್ಬಾಳದಲ್ಲಿ ಶಾಸಕ ಜಗದೀಶ್​ಕುಮಾರ್ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಮರು ಆಯ್ಕೆ ಬಯಸಿದ್ದಾರೆ. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಇಬ್ಬರೂ ಭರ್ಜರಿ ರ‍್ಯಾಲಿ ನಡೆಸಿ, ಬಲಾಬಲ ಪ್ರದರ್ಶಿಸಿದ್ದಾರೆ. ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮುಸ್ಲಿಂ ಮುಖಂಡರು ಕೋರಿದ್ದರು. ಆದರೆ, ಟಿಕೆಟ್ ಹಂಚಿಕೆಯಲ್ಲಿ ಸಿಎಂ ಕೈ ಮೇಲಾಯಿತು. ಜೆಡಿಎಸ್​ನಿಂದ ಹನುಮಂತೇಗೌಡ ಸ್ಪರ್ಧೆಯಲ್ಲಿದ್ದಾರೆ.

***

Note from Kannada.Club : This story has been auto-generated from a syndicated feed from http://vijayavani.net/ground-report-bangalore-north-assembly-constituency-congress-bjp-jds/