ಯಲ್ಲಾಪುರ ಕಾಂಗ್ರೆಸ್ ಶಾಸಕ ಹೆಬ್ಬಾರ ಬಿಜೆಪಿ ಸೇರ್ಪಡೆ ಯತ್ನ ಹಿಂದೆ ಯಡ್ಡಿ, ಅನಂತ ಆಸಕ್ತಿ

ಕಾಗೇರಿ ಸೈಡಲೈನ್ ಸಾಧ್ಯತೆ

ವಿಶೇಷ ಪ್ರತಿನಿಧಿ ವರದಿ

ಶಿರಸಿ : ಸದ್ಯವೇ ಬಿಜೆಪಿ ಸರ್ಕಾರ ಬರುವ ನಿರೀಕ್ಷೆ ಇರುವುದರಿಂದ ಬಿಜೆಪಿ ಪ್ರಮುಖ ನಾಯಕ ಯಡ್ಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಹೆಬ್ಬಾರರಿಗೆ ಬಿಜೆಪಿಗೆ ಕರೆತಂದು ಮಂತ್ರಿಯಾಗುವ ಹೊಸ ಗೇಮ್ ಮಾಡಿದ್ದು, ಕಾಗೇರಿಗೆ ಸೈಡಲೈನ್ ಮಾಡುವ ಸಾಧ್ಯತೆ ಕಂಡುಬಂದಿದೆ.

ಮಗನ ಮೇಲೆ ಕೇಂದ್ರ ಸರ್ಕಾರ ಯಾವುದೇ ಹಳೇ ಕೇಸ್ ಎತ್ತದಂತೆ ತಡೆಯಲು ಸಹ ಹೆಬ್ಬಾರರು ಹೋಗುತ್ತಾರೆಂಬುದು ಯಲ್ಲಾಪುರ ಕ್ಷೇತ್ರದಲ್ಲಿ ಚರ್ಚಿತ ವಿಷಯವಾಗಿದೆ.

ಶಿವರಾಮ ಹೆಬ್ಬಾರರು ಎರಡು ದಶಕಗಳ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಬಳಿಕ ವೈಯಕ್ತಿಕ ಕಾರಣದಿಂದ ಕಾಂಗ್ರೆಸ್ ಸೇರಿ ಮುಂದೆ ಒಮ್ಮೆ ಚುನಾವಣೆಗೆ ನಿಂತು ಸೋತ ಬಳಿಕ ಕಾಂಗ್ರೆಸ್ ಶಾಸಕರಾದರು. ಎರಡನೇ ಬಾರಿ ಚುನಾವಣೆಗೆ ನಿಲ್ಲುವ ಕೆಲವು ತಿಂಗಳ ಹಿಂದೆ ಸಚಿವ ಅನಂತ ಹೆಗಡೆ ಜತೆ ಮಾತುಕತೆ ನಡೆಸಿದ್ದ ಹೆಬ್ಬಾರರು, ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದೇ ಸುದ್ದಿಯಾಗಿದ್ದರು.

ಕಾಂಗ್ರೆಸ್ ಸರ್ಕಾರ ಬಂದರೆ ತಮಗೆ ಸಚಿವ ಸ್ಥಾನ ಎಂಬ ಕನಸು ಕಂಡಿದ್ದ ಹೆಬ್ಬಾರರಿಗೆ ಮತ್ತೆ ದೇಶಪಾಂಡೆ ಅವರೇ ಅಡ್ಡಗಾಲು ಆಗಿದ್ದರು. ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾರರು ಕೈಚಳಕ ತೋರಿ ದೇಶಪಾಂಡೆಗೆ ಹಿನ್ನಡೆಯಾಯಿತು. ಅದರ ಬಳಿಕ ದೇಶಪಾಂಡೆ ಅವರ ಬೆಂಬಲಿಗರು ಹೆಬ್ಬಾರರನ್ನು ಆದಷ್ಟು ಸೋಲಿಸಲು ಸಾಕಷ್ಟು ಶ್ರಮ ಹಾಕಿದರೂ ಪೂರ್ಣ ಯಶಸ್ಸು ಆಗಲಿಲ್ಲ. ಕಾಂಗ್ರೆಸ್ಸಿನಲ್ಲೇ ಇದ್ದರೆ ಸಚಿವ ಸ್ಥಾನ ಕಷ್ಟವೆಂದು ಅರಿತ ಹೆಬ್ಬಾರರು ಮೂರು ತಿಂಗಳ ಹಿಂದೆ ಬಿಜೆಪಿಗೆ ಹೋಗುತ್ತಾರೆಂಬ ಸುದ್ದಿ ಬಿದ್ದರೂ ಕೊನೆ ಹಂತದಲ್ಲಿ ಕುಮಾರಸ್ವಾಮಿ ಸರ್ಕಾರ ಮಾಡಿಯೇ ಬಿಟ್ಟರು. ಬಿಜೆಪಿ ಹಾಕಿದ ಗಾಳ ಮತ್ತೆ ಮುಂದುವರಿದಿದ್ದು, ಈ ಸಲ 20 ಶಾಸಕರಿಗೆ ಗಾಳ ಹಾಕಲು ಬಿಜೆಪಿ ನಾಯಕರು ಮುಂದಾದರು. ಸ್ವತಃ ಯಡ್ಯೂರಪ್ಪ ಅವರೇ 20 ಶಾಸಕರನ್ನು ಪಕ್ಷಕ್ಕೆ ಕರೆತರುವ ಜವಾಬ್ದಾರಿಯನ್ನು ತಮ್ಮ ಆಪ್ತರಿಗೆ ನೀಡಿದರು. ಅದರಲ್ಲೂ ಹೆಬ್ಬಾರರಿಗೂ ಗಾಳ ಹಾಕಲಾಯಿತು. ಈ ಹಿಂದೆ ಒಮ್ಮೆ ಅನಂತ ಹೆಗಡೆ ಸಹಕಾರದಲ್ಲಿ ದೆಹಲಿಗೆ ಹೋಗಿ ಅಮಿತ ಶಾ ಜತೆ ಚರ್ಚಿಸಿ ಬಂದಿದ್ದ ಹೆಬ್ಬಾರರು ಬಿಜೆಪಿಯತ್ತ ಹೋಗಲು ಬಹುತೇಕ ಸಿದ್ಧರಾಗಿದ್ದಾರೆ.

 

***

Note from Kannada.Club : This story has been auto-generated from a syndicated feed from http://karavaliale.net/%e0%b2%af%e0%b2%b2%e0%b3%8d%e0%b2%b2%e0%b2%be%e0%b2%aa%e0%b3%81%e0%b2%b0-%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d-%e0%b2%b6%e0%b2%be%e0%b2%b8%e0%b2%95/