ಮರಣದಂಡನೆಗೆ ಒಳಗಾದ ಕುದುರೆಗೆ ಕರುಣೆ ತೋರಿದ ಮಕ್ಕಳು!

ಶಾಲಾ ಮಕ್ಕಳು ಕರುಣೆ ತೋರಿಸಿ ಕುದುರೆಯೊಂದರ ಪ್ರಾಣ ಉಳಿಸಿದ ಕುತೂಹಲಕಾರೀ ಘಟನೆಯೊಂದು ಇಲ್ಲಿದೆ.

ಲಖನೌದ ಸೇನೆಯ ಕುದುರೆಯೊಂದಕ್ಕೆ ತುಂಬ ವಯಸ್ಸಾಗಿತ್ತು. ಅದು ನಿಷ್ಪ್ರಯೋಜಕವಾಗಿತ್ತು. ಸೇನೆಯ ನಿಯಮದಂತೆ ಮುದಿ ಕುದುರೆಯನ್ನು ಗುಂಡಿಕ್ಕಿ ಕೊಲ್ಲುವ ನಿರ್ಧಾರವಾಗಿತ್ತು.

ಸುದ್ದಿ ಲಖನೌದ ದಿನಪತ್ರಿಕೆಯಲ್ಲಿ ಪ್ರಕಟವಾದಾಗ, ಸುಮನ್ ಎಂಬ ಎಂಟನೆಯ ತರಗತಿ ಶಾಲಾ ಬಾಲಕಿಗೆ ಅಯ್ಯೋ ಎನಿಸಿತು. ಆಕೆ ಶಾಲೆಯ ಬಳಿಯೇ ಇದ್ದ ಸೇನೆಯ ಕಚೇರಿಗೆ ಹೋದಳು. ಧೈರ್ಯದಿಂದ ಅಧಿಕಾರಿಗಳನ್ನು ಭೇಟಿಯಾದಳು. ಕುದುರೆಯನ್ನು ಕೊಲ್ಲಬೇಡಿರೆಂದು ಬೇಡಿದಳು. ಆದರೆ ಅವರು ಸೇನಾ ನಿಯಮಗಳನ್ನು ಉಲ್ಲೇಖಿಸಿ ಕೈಚೆಲ್ಲಿದರು. ಆಕೆ ಖಿನ್ನವದನಳಾಗಿ ಶಾಲೆಗೆ ಹೋದಳು. ತನ್ನ ಗೆಳತಿಯೊಂದಿಗೆ ಚರ್ಚಿಸಿದಳು. ನಾವೆಲ್ಲ ನಮ್ಮ ಪಾಕೆಟ್ ಮನಿಯನ್ನು ಒಟ್ಟುಗೂಡಿಸಿ ಕುದುರೆಯನ್ನು ಸೇನೆಯಿಂದ ಬಿಡಿಸಿಕೊಂಡು ಬಂದು ಅದನ್ನು ಸಾಕೋಣ ಎಂದು ಒಪ್ಪಿಸಿದಳು. ಸಂಜೆ ಎಲ್ಲರೂ ಭೇಟಿಯಾಗಿ ಕುದುರೆಯನ್ನು ಕೊಲ್ಲುವುದು ಬೇಡ. ನಮಗೆ ಕೊಟ್ಟರೆ ನಾವದನ್ನು ಸಾಕಿಕೊಳ್ಳುತ್ತೇವೆ ಎಂದು ಬೇಡಿದರು, ಕಾಡಿದರು. ಕುದುರೆಯನ್ನು ಪಡೆದರು. ನಡೆಸಿಕೊಂಡು ತಂದರು. ಕಾಲೋನಿಯಲ್ಲಿದ್ದ ಸಾರ್ವಜನಿಕ ಪಾರ್ಕಿನಲ್ಲಿ ಕುದುರೆಯನ್ನು ಕಟ್ಟಿಹಾಕಿದರು. ಬಾಲಕಬಾಲಕಿಯರೆಲ್ಲ ಉತ್ಸಾಹದಿಂದ ಬರುತ್ತಿದ್ದರು. ಕುದುರೆಗೆ ಹುಲ್ಲು, ಹುರುಳಿ ತಿನ್ನಿಸುತ್ತಿದ್ದರು. ಬಿಡುವಾದಾಗಲೆಲ್ಲ ಅದರೊಂದಿಗೆ ಆಡುತ್ತಿದ್ದರು. ಆನಂತರ ಕುದುರೆ ಒಂದೂವರೆ ವರ್ಷ ಬದುಕಿತ್ತು. ಕೊನೆಗೆ ಸಹಜ ಸಾವನ್ನಪ್ಪಿತು.

ಮಕ್ಕಳೇ ಮುಂದಾಳತ್ವ ವಹಿಸಿ ಮಾಡಿದ ಅನುಕರಣೀಯವಾದ ಮತ್ತೆರಡು ಘಟನೆಗಳು ಇಲ್ಲಿವೆ.

2001ರಲ್ಲಿ ಹತ್ತು ಆಂತೋನಿಯ ಅಜ್ಜಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ತಲೆಯ ಕೂದಲುಗಳೆಲ್ಲ ಉದುರುತ್ತಿದ್ದವು. ಇಂದರಿಂದಾಗಿ ಆಕೆ ದುಃಖದಲ್ಲಿ ಮುಳುಗಿದ್ದರು. ನಗುವುದನ್ನೇ ಬಿಟ್ಟುಬಿಟ್ಟಿದ್ದರು. ಇದನ್ನು ಗಮನಿಸಿದ ಆಂತೋನಿ ಒಂದು ಬಣ್ಣಬಣ್ಣದ ವಿಚಿತ್ರ ಹ್ಯಾಟನ್ನು ಅಜ್ಜಿಗೆ ಉಡುಗೊರೆಯಾಗಿ ಕೊಟ್ಟ. ವಿಚಿತ್ರ ಹ್ಯಾಟನ್ನು ಕಂಡು ಅಜ್ಜಿ ನಕ್ಕುಬಿಟ್ಟರು. ಬಂದವರಿಗೆಲ್ಲ ಹೆಮ್ಮೆಯಿಂದ ಮೊಮ್ಮಗ ಕೊಟ್ಟ ಹ್ಯಾಟು ಎಂದು ತೋರಿಸುತಿದ್ದರು. ಅಜ್ಜಿಯ ನಗುವನ್ನು ಕಂಡ ಆಂತೋನಿಗೆ ಒಂದು ಯೋಜನೆ ಹೊಳೆಯಿತು. ತನ್ನ ಗೆಳೆಯರನ್ನೆಲ್ಲ ಸೇರಿಸಿ ಅವರ ಸಹಕಾರದಿಂದ ಹ್ಯಾಟುಗಳನ್ನು ತಂದರು.

ಕ್ಯಾನ್ಸರ್ ಚಿಕಿತ್ಸೆಯಿಂದ ಕೂದಲು ಕಳೆದುಕೊಳ್ಳುತ್ತಿದ್ದ ವ್ಯಕ್ತಿಗಳನ್ನೆಲ್ಲ ಹುಡುಕಿ ಹ್ಯಾಟುಗಳನ್ನು ಉಡುಗೊರೆಯಾಗಿ ಕೊಟ್ಟು ಶುಭ ಹಾರೈಸಿ ಬರುತ್ತಿದ್ದರು. ತಮ್ಮ ಸಂಘಟನೆಗೆ ಹೆವೆನ್ಲೀ ಹ್ಯಾಟ್‌ಸ್ಎಂದು ಹೆಸರಿಟ್ಟರು. (ಸ್ವರ್ಗಲೋಕದ ಟೋಪಿಗಳು) ಸಂಘವನ್ನು ಬೆಳೆಸುತ್ತ ಹೋದರು. ಇದೀಗ ಆಂತೋನಿಗೆ ಹದಿನಾರರ ವಯಸ್ಸು. ಅವರ ಸಂಸ್ಥೆ ಅಮೆರಿಕದಾದ್ಯಂತ ಹರಡಿದೆ. ಇದುವರೆವಿಗೂ ಸುಮಾರು 75 ಸಾವಿರ ಹ್ಯಾಟುಗಳನ್ನು ಹಂಚಿದೆ.

1996ರಲ್ಲಿ ಹತ್ತು ವರ್ಷದ ಆಬಿನ್ ಬರ್ನ್ಸೈಡ್ ಎಂಬ ಬಾಲಕಿ ತನ್ನ ನೆರೆಹೊರೆಯ ಬಡಮಕ್ಕಳು ಬಟ್ಟೆಬರೆಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಒಯ್ಯುವುದನ್ನು ಗಮನಿಸಿದಾಗ ಅವಳಿಗೆ ಅಯ್ಯೋ ಎನಿಸಿತು. ತನ್ನ ಮನೆಯಲ್ಲಿದ್ದ ಹಾಗೂ ತನ್ನ ಸಂಗಡಿಗರಲ್ಲಿದ್ದ ಸೂಟ್ಕೇಸುಗಳನ್ನು ಕೇಳಿ ಪಡೆದಳು. ಪ್ಲಾಸ್ಟಿಕ್ ಚೀಲವನ್ನು ಹಿಡಿದು ಹೋಗುತ್ತಿದ್ದ ಬಡಮಕ್ಕಳಿಗೆಲ್ಲ ಉಚಿತವಾಗಿ ಸೂಟ್ಕೇಸುಗಳನ್ನು ಕೊಡುವ ವ್ಯವಸ್ಥೆ ಮಾಡಿದಳು. ಆಕೆಯೂ ತನ್ನ ಗೆಳೆಯರೊಂದಿಗೆ ಸೂಟ್ಕೇಸಸ್ ಫಾರ್ ಕಿಡ್‌ಸ್(ಮಕ್ಕಳಿಗಾಗಿ ಸೂಟ್ಕೇಸುಗಳು) ಎಂಬ ಸಂಘವನ್ನು ಸ್ಥಾಪಿಸಿಕೊಂಡರು. ಶಾಲೆಗಳಿಗೆ, ದೇವಾಲಯಗಳಿಗೆ ಮತ್ತು ಮನೆಮನೆಗೂ ಹೋಗಿ ಸೂಟ್ಕೇಸುಗಳನ್ನು ದಾನ ಬೇಡಿ ತಂದರು. ಎರಡೇ ವರ್ಷಗಳಲ್ಲಿ 1700 ಸಂಗ್ರಹಿಸಿ ಹಂಚಿದರು. ಈಗ ಅಮೆರಿಕದಾದ್ಯಂತ ಶಾಖೆಗಳನ್ನು ಹೊಂದಿರುವ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ಹತ್ತು ವರ್ಷಗಳಲ್ಲಿ ಮೂವತ್ತು ಸಾವಿರ ಸೂಟ್ಕೇಸುಗಳನ್ನು ಹಂಚಿದೆ!

ಎಲ್ಲಾ ಘಟನೆಗಳ ನಾಯಕರುಗಳು ಮಕ್ಕಳೇ. ಆದರೂ ಅವರು ಮಾಡಿದ್ದು ಮಕ್ಕಳಾಟ ಅಲ್ಲವಲ್ಲಾ?

The post ಮರಣದಂಡನೆಗೆ ಒಳಗಾದ ಕುದುರೆಗೆ ಕರುಣೆ ತೋರಿದ ಮಕ್ಕಳು! appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/children-who-have-mercy-on-the-execution-horse/