ಮನೆಬಾಗಿಲಿಗೆ ಸರ್ಕಾರಿ ಸೇವೆ

ವಿವಾಹ ನೋಂದಣಿ ಪ್ರಮಾಣಪತ್ರ, ವಾಹನ ಚಾಲನಾ ಪರವಾನಗಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಚೀಟಿ ಸೇರಿದಂತೆ 40 ಸೇವೆಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ಒದಗಿಸುವ ವಿನೂತನ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಾಲನೆ ನೀಡಿದ್ದಾರೆ. ಇಂಥ ವಿವಿಧ ಸೇವೆಗಳನ್ನು ಪಡೆಯುವುದಕ್ಕೆ ಸರ್ಕಾರಿ ಕಚೇರಿಗಳನ್ನು ಹಲವು ಬಾರಿ ಎಡತಾಕುತ್ತಿದ್ದವರ ಪಾಲಿಗೆ ಇದು ಶುಭಸುದ್ದಿಯೇ ಸರಿ. ಅಷ್ಟೇ ಅಲ್ಲ, ಇದನ್ನು ದೇಶದ ಮಿಕ್ಕ ರಾಜ್ಯಗಳೂ ಮೇಲ್ಪಂಕ್ತಿಯಾಗಿಸಿಕೊಂಡು ಕಾರ್ಯೋನ್ಮುಖವಾದಲ್ಲಿ ಅದು ನಿಜಕ್ಕೂ ಕ್ರಾಂತಿಕಾರಿ ಬೆಳವಣಿಗೆಯಾಗಬಲ್ಲದು.

ಈ ಉಪಕ್ರಮದಿಂದಾಗಿ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ಪರಿಪಾಠಕ್ಕೆ ಕೊಡಲಿಯೇಟು ಬೀಳುತ್ತದೆ ಎಂದೇನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೇಜ್ರಿವಾಲ್. ಆದರೆ, ಆಳುಗರಿಂದ ಹೊಮ್ಮುವ ಇಂಥ ಸದಾಶಯಗಳನ್ನು ಚಾಚೂತಪ್ಪದಂತೆ ಅನುಷ್ಠಾನಕ್ಕೆ ತಂದು ಅಂತಿಮ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಂಥ ಚಿತ್ತಸ್ಥಿತಿ ಅಧಿಕಾರಿಶಾಹಿಯಲ್ಲಿದೆಯೇ ಎಂಬುದು ಪ್ರಶ್ನೆ. ಸದರಿ ಕಾರ್ಯಕ್ರಮದ ಮಾರ್ಗದರ್ಶಿ ಸೂತ್ರದನುಸಾರ, ನಿರ್ದಿಷ್ಟ ನಾಗರಿಕ ಸೇವೆ ಪಡೆಯಲೆಂದು ಪೂರ್ವನಿಗದಿತ ಸಂಖ್ಯೆಗೆ (1076) ಸಾರ್ವಜನಿಕರು ಕರೆಮಾಡಿ ಮನವಿ ಸಲ್ಲಿಸಿದಲ್ಲಿ, ಅಗತ್ಯವಾಗುವ ಪೂರಕ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ‘ಸಂಚಾರಿ ಸಹಾಯಕ’ನ ಮೂಲಕ ಅಂಥ ಸೇವೆ ಅಪೇಕ್ಷಿತರ ಮನೆ ತಲುಪುತ್ತದೆ ಹಾಗೂ ಇಂಥ ಸೇವೆಯನ್ನು ಕಚೇರಿಗೇ ತೆರಳಿ ಪಡೆಯುವುದಕ್ಕೆ ಅನ್ವಯವಾಗುವ ಶುಲ್ಕದ ಹೊರತಾಗಿ ಹೆಚ್ಚುವರಿಯಾಗಿ 50 ರೂ. ನೀಡಬೇಕಾಗುತ್ತದೆ ಎಂಬುದು ಲಭ್ಯಮಾಹಿತಿ. ಆದರೆ ಇಲ್ಲಿ ಕೆಲ ಸಂಶಯಗಳೂ ಉದ್ಭವಿಸುತ್ತವೆ. ಕಾರಣ, ‘ಯಾವುದೇ ಸರ್ಕಾರಿ ಸೇವೆಗೆ ಸಂಬಂಧಿಸಿಯೂ ನಮ್ಮದೇ ನಿರ್ಣಾಯಕ ಅಧಿಕಾರ; ಅಗತ್ಯ ಕೆಲಸವಾಗಬೇಕಿದ್ದಲ್ಲಿ ಸಾರ್ವಜನಿಕರು ನಾವಿದ್ದಲ್ಲಿಗೇ ಬರಬೇಕೇ ವಿನಾ, ಅವರಿಗೆ ನಾವು ತಲೆಬಾಗುವಂತಾಗಬಾರದು, ಅವರು ಯಾವತ್ತಿಗೂ ನಮ್ಮ ನಿಯಂತ್ರಣದಲ್ಲೇ ಇರಬೇಕು’ ಎಂಬ ಧೋರಣೆ ಬಹಳಷ್ಟು ಅಧಿಕಾರಿಗಳಲ್ಲಿ ಮೈಗೂಡಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಇಂಥವರು, ದಾಖಲೆಗಳು ಮತ್ತು ಶುಲ್ಕಪಾವತಿ ಕ್ರಮ ಸರಿಯಾಗಿದ್ದರೂ, ನಿಗದಿತ ಸೇವೆಯನ್ನು ಜನರ ಮನೆಗೆ ತಲುಪಿಸುವಾಗಲೂ ವಿಳಂಬನೀತಿಗೆ ಮೊರೆಹೋಗುವುದಿಲ್ಲ ಮತ್ತು ಸೇವಾಸೌಲಭ್ಯದ ವಿತರಣೆಯಾಗುವ ಹಂತದಲ್ಲಿ ಲಂಚ-ರುಷುವತ್ತಿಗೆ ಅಪೇಕ್ಷಿಸುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಇಂಥ ಕೆಲಸವನ್ನು ಇನ್ನೂ ಕ್ಷಿಪ್ರವಾಗಿ ಮಾಡಿಸಿಕೊಡುತ್ತೇವೆ ಎಂದು ಕತೆಕಟ್ಟಿ ಜನರಿಂದ ಹೆಚ್ಚುವರಿ ಹಣಕಿತ್ತು ತಮ್ಮ ಜೇಬು ತುಂಬಿಸುವ, ಸರ್ಕಾರಿ ಯೋಜನೆಗೆ ಕಳಂಕ ಹಚ್ಚುವ ಮಧ್ಯವರ್ತಿಗಳು ಹುಟ್ಟಿಕೊಳ್ಳುವುದಿಲ್ಲ ಎನ್ನಲಾದೀತೇ?

ಹಾಗಂತ, ಇದು ಸದರಿ ಕಾರ್ಯಕ್ರಮದ ಕುರಿತಾದ ಸಿನಿಕ ನುಡಿ ಅಥವಾ ಕೊಂಕುಮಾತು ಎಂದು ಭಾವಿಸಬಾರದು; ಯೋಜನಾ ಹಂತದಲ್ಲಿ ‘ವರ್ಣರಂಜಿತ’ವಾಗಿರುವ ಸರ್ಕಾರಿ ಕಾರ್ಯಕ್ರಮಗಳು ಅನುಷ್ಠಾನದ ವೇಳೆಗೆ ಹೇಗೆ ಬಣ್ಣ ಕಳೆದುಕೊಂಡಿರುತ್ತವೆ ಎಂಬುದನ್ನು ಸ್ವಾತಂತ್ರ್ಯಾನಂತರದ ಇಷ್ಟೂ ದಶಕಗಳಲ್ಲಿ ಕಂಡಿರುವ ಜನರಿಗೆ, ಇಂಥ ಯಾವುದೇ ಯೋಜನೆಯನ್ನು ಅಧಿಕಾರಿಶಾಹಿಯೇ ಹೇಗೆ ಹಳ್ಳಹಿಡಿಸುತ್ತದೆ ಎಂಬುದನ್ನು ಪೂರ್ವಭಾವಿಯಾಗಿ ಗ್ರಹಿಸುವುದು ಕಷ್ಟವೇನಲ್ಲ! ಇಷ್ಟಾಗಿಯೂ, ಈ ಕಾರ್ಯಕ್ರಮ ಯಶಸ್ವಿಯಾಗಲಿ, ಇಂಥ ಮತ್ತಷ್ಟು ಉಪಕ್ರಮಗಳಿಗೆ ಮಾದರಿಯಾಗಲಿ ಹಾಗೂ ಮಿಕ್ಕ ರಾಜ್ಯಗಳೂ ಈ ಹೆಜ್ಜೆಯನ್ನು ಅನುಸರಿಸುವಂತಾಗಲಿ ಎಂದು ಆಶಿಸೋಣ. ಈ ಕಾರ್ಯಕ್ರಮವನ್ನು ಯಾರೂ ಯಾವುದೇ ಹಂತದಲ್ಲೂ ದುರುಪಯೋಗಪಡಿಸಿಕೊಳ್ಳಲಿಕ್ಕೆ ಆಗದಂಥ ‘ತಪ್ಪಿಗೆ ಆಸ್ಪದವಿಲ್ಲದ’ ಅನುಷ್ಠಾನ ಕ್ರಮವನ್ನೂ ಆಳುಗರು ರೂಪಿಸಲಿ, ರೂಢಿಸಲಿ. ಅದು ಪ್ರಜ್ಞಾವಂತ ನಾಗರಿಕರ ನಿರೀಕ್ಷೆಯೂ ಹೌದು.

***

Note from Kannada.Club : This story has been auto-generated from a syndicated feed from http://vijayavani.net/vijayavani-editorial-88/