ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಡಾ.ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಮಂಡ್ಯ ಚುನಾವಣೆ ಉಸ್ತುವಾರಿಯಾಗಿ ಮಾಜಿ ಎಂಎಲ್‌ಸಿ ಅಶ್ವತ್ಥ್‌ ನಾರಾಯಣ ಅವರನ್ನು ನೇಮಿಸಲಾಗಿದೆ. ನಿನ್ನೆ ನಡೆದ ಕೋರ್ ಕಮಿಟಿಯಲ್ಲಿ ಯಡಿಯೂರಪ್ಪ ಅವರ ಸಹಮತದಿಂದಾಗಿ ಮಂಡ್ಯ ಮಾಜಿ ಶಾಸಕ ದೊಡ್ಡ ಬೋರೇಗೌಡ ಅವರ ಪುತ್ರ ಡಾ. ಸಿದ್ದರಾಮಯ್ಯ ಪಕ್ಷ ಸೇರ್ಪಡೆ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಆರ್ ಆರ್‌ ಅಶೋಕ್‌ ತಿಳಿದ್ದಾರೆ.

ಒಂದೆರಡು ತಿಂಗಳಲ್ಲಿ ನಾವು ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತಿದ್ದೇವೆ. ಹಾಗಾಗಿಯೇ ನಾನು ಮತ್ತು ಶ್ರೀರಾಮುಲು ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ. ನಾನು ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದೇನೆ. ಮೈತ್ರಿ ಸರ್ಕಾರದ ವೈಫಲ್ಯಗಳ ಬಗ್ಗೆ ಬೇಸರಗೊಂಡಿರುವವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಒಳಗಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ‌. ಇದಕ್ಕೆ ಬಿಜೆಪಿ ವರಿಷ್ಠರ ಸಮ್ಮತಿಯೂ ಸಿಕ್ಕಿದೆ. ಸರ್ಕಾರ ರಚನೆ ಗುರಿಯೋ, ಕನಸೋ ನಮ್ಮ ಸರ್ಕಾರ ಬರುವುದಂತೂ ಖಚಿತ. ನಮಗೂ ಆಸೆಯಿದೆ. ನಾವು ಸನ್ಯಾಸಿಗಳಲ್ಲ ಎಂದು ಹೇಳಿದರು.

ಮಾಜಿ ಎಂಎಲ್‌ಸಿ ಅಶ್ವತ್ಥ್‌ ನಾರಾಯಣ ಮಾತನಾಡಿ, ಆರ್.ಅಶೋಕ್ ಅವರು ನನ್ಮನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ಸಹ ಕೊಟ್ಟಿದ್ದಾರೆ. ಹಾಗಾಗಿ ಎಲ್ಲ ಪ್ರಮುಖರೊಂದಿಗೆ ಚರ್ಚಿಸಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಡಾ.ಸಿದ್ದರಾಮಯ್ಯ ಅವರೇ ಬಿಜೆಪಿ ಅಭ್ಯರ್ಥಿ ಎಂದು ನಿರ್ಧರಿಸಲಾಗಿದೆ. ಕೇಂದ್ರಕ್ಕೆ ಅವರ ಹೆಸರು ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು.

ಬಿಜೆಪಿಗೆ ಸೇರ್ಪಡೆಯಾದ ಬಳಿಕ ಡಾ. ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸೇವೆ ನೋಡಿ ಈ ಪಕ್ಷದಲ್ಲಿ ಗುರುತಿಸಿಕೊಳ್ಳುವ ಆಸೆಯಿತ್ತು. ಸರ್ಕಾರಿ ಸೇವೆಯಲ್ಲಿದ್ದರಿಂದ ರಾಜಕೀಯದಿಂದ ದೂರವಿದ್ದೆ. ಸರ್ಕಾರಿ ಕೆಲಸಕ್ಕೆ ಸೇರುವ ಮುನ್ನ ಎಬಿವಿಪಿಯಲ್ಲಿದ್ದೆ. ಬಿಜೆಪಿ ಬಗ್ಗೆ ಬಹಳ ಅಭಿಮಾನವಿತ್ತು. ಈಗ ಸೇವೆ ನಿವೃತ್ತಿ ನಂತರ ಪಕ್ಷಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ವಕ್ತಾರ ವಾಮನಾಚಾರ್ಯ ಸಮ್ಮುಖದಲ್ಲಿ ಐಆರ್‌ಎಸ್‌ ನಿವೃತ್ತ ಅಧಿಕಾರಿ ಡಾ. ಸಿದ್ದರಾಮಯ್ಯ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದರು. (ದಿಗ್ವಿಜಯ ನ್ಯೂಸ್)

***

Note from Kannada.Club : This story has been auto-generated from a syndicated feed from http://vijayavani.net/mandya-lok-sabha-constituency-by-election-bjp-bangalore-ashwath-narayan-r-ashok-dr-siddaramaiah/