ಬ್ರಹ್ಮಜ್ಞಾನ ಸಿದ್ಧಿ

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಯೋಗ ಸಾಧಕರು ಸ್ವಾಧಿಷ್ಟಾನ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡಬೇಕು. ಈ ಚಕ್ರವು ಮೂಲಾಧಾರ ಚಕ್ರದಿಂದ ಸ್ವಲ್ಪ ಮೇಲ್ಭಾಗದಲ್ಲಿದೆ. ಇದು ಕಿತ್ತಳೆ ಬಣ್ಣದಲ್ಲಿದ್ದು, ಆರು ದಳಗಳನ್ನು ಹೊಂದಿದೆ. ಇದನ್ನು ಚೈತನ್ಯದ ಬಿಂದು ಎಂದು ಗುರುತಿಸಲಾಗಿದೆ. ಈ ಚಕ್ರದ ಮೇಲೆ ಗಮನ ಹರಿಸಿದಾಗ ಇಂದ್ರಿಯಗಳನ್ನು ನಿಗ್ರಹಿಸಬಹುದು, ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು ಹಾಗೂ ಆಲೋಚನಾಶಕ್ತಿ ವೃದ್ಧಿಸುತ್ತದೆ. ಈ ಚಕ್ರದ ಅಧಿಷ್ಠಾನ ದೇವತೆ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಬೇಕು. ಈ ದೇವಿಯು ತಪಸ್ಸಿನ ಚಾರಿಣಿ ಮತ್ತು ಇಂದ್ರಿಯಗಳನ್ನು ನಿಗ್ರಹಿಸುವಳು ಎಂಬ ಭಾವ ಇದೆ. ಎರಡು ಎನ್ನುವ ಸಂಖ್ಯೆಗೆ ಮಹತ್ವವಿದೆ. ಅದು ಕುಟುಂಬಸೌಖ್ಯವನ್ನು ಹೊಂದಾಣಿಕೆಯ ಮನೋಭಾವನೆಯನ್ನು ಪ್ರತಿಪಾದಿಸುತ್ತದೆ. ದ್ವೈತ ಭಾವನೆಯನ್ನು ಪಸರಿಸುವ ಮೂಲಕ ಜೀವಾತ್ಮ, ಪರಮಾತ್ಮ ನಡುವಿನ ಅಂತರವನ್ನು ತಿಳಿಸುತ್ತದೆ. ಜೀವನಿಗೂ ಪರಮಾತ್ಮನಿಗೂ ಇರುವ ತಾರತಮ್ಯ ಭಾವನೆಯನ್ನು ಹೋಗಲಾಡಿಸುವ ಮೂಲಕ ಪರಿಶುದ್ಧ ಜ್ಞಾನವನ್ನು ನೀಡುತ್ತದೆ.

ಬ್ರಹ್ಮಚಾರಿಣಿ ದೇವಿಃ ದಧಾನ ಕರಧ್ಮಾಭ್ಯಾಮಕ್ಷಮಾಲಾಕಮಂಡಲೂ |

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ||

ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಈಕೆಯ ಸ್ವರೂಪವು ಜ್ಯೋತಿರ್ಮಯ ಮತ್ತು ಅತ್ಯಂತ ಭವ್ಯವಾಗಿದೆ. ಬಲ ಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲವನ್ನು ಧರಿಸಿರುವಳು.

ಅವತಾರದ ಹಿನ್ನೆಲೆ: ದೇವಿಯು ಭಗವಾನ್ ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದಳು. ಒಂದು ಸಾವಿರ ವರ್ಷಗಳ ಕಾಲ ಸತತವಾಗಿ ಕೇವಲ ಹಣ್ಣುಗಳನ್ನು ತಿಂದು ಕಳೆದಳಂತೆ. 150 ವರ್ಷಗಳ ಕಾಲ ಗಿಡದ ಎಲೆಗಳನ್ನು ತಿಂದು ಕೆಲವು ವರ್ಷಗಳ ಕಾಲ ಉಪವಾಸವಿದ್ದು, ಸಾವಿರಾರು ವರ್ಷಗಳ ಕಾಲ ಹಗಲು ರಾತ್ರಿ ಶಿವನನ್ನು ಕುರಿತು ತಪಸ್ಸು ಮಾಡಿದಳು. ಇವಳ ತಪಸ್ಸನ್ನು ಕಂಡು ದೇವತೆಗಳು, ಋಷಿಗಳು ಹೊಗಳಿದರು. ಕೊನೆಯಲ್ಲಿ ಬ್ರಹ್ಮ ದೇವನು ಆಶ್ಚರ್ಯವಾಗಿ ‘ಹೇ ದೇವಿ ನಿನ್ನಂಥ ತಪಸ್ಸು ಇಲ್ಲಿಯವರೆಗೆ ಯಾರೂ ಮಾಡಿರಲಿಲ್ಲ. ನಿನ್ನ ಕಾಮನೆಯು ಸದ್ಯದಲ್ಲಿ ಪೂರ್ಣವಾಗುವುದು. ಶಿವನು ನಿನಗೆ ಪತಿಯಾಗಿ ದೊರೆಯುವನು’ ಎಂದು ನುಡಿದನು. ನಂತರ ಶಿವನು ತನ್ನ ಸತಿಯಾಗಿ ಸ್ವೀಕರಿಸಿದನು.

ಪೂಜಾವಿಧಿ: ನವರಾತ್ರಿಯ ಎರಡನೆ ದಿನ ಈ ಬ್ರಹ್ಮಚಾರಿಣಿ ದೇವಿಗೆ ಶ್ವೇತವರ್ಣದ ಸೀರೆ ಹಾಗೂ ಅದೇ ಬಣ್ಣದ ಕುಪ್ಪಸ ತೊಡಿಸಿ, ಬಿಳಿ ಬಣ್ಣದ ಹೂವಿನಿಂದ (ಮಲ್ಲಿಗೆ), ಬಿಳಿ ಅಕ್ಷತೆ, ಗೆಜ್ಜೆವಸ್ತ್ರಗಳಿಂದ ಈ ದೇವಿಯ ಅಷ್ಟೋತ್ತರ ಹೇಳಿ ಪೂಜಿಸಬೇಕು. ಗಸಗಸೆ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು. ದೇವಿಗೆ ಮಾಹೇಶ್ವರಿ ಅಲಂಕಾರ ಮಾಡಬೇಕು.

ಫಲ: ಈ ದೇವಿಯನ್ನು ಪೂಜಿಸುವುದರಿಂದ ವೈರಾಗ್ಯ, ಸದಾಚಾರ, ಸಂಯಮ, ತಪಸ್ಸು ವೃದ್ಧಿ ಆಗುವುದು. ಸ್ವಚರಿತ್ರೆ, ಪ್ರೇರಣೆ ಮತ್ತು ಬ್ರಹ್ಮಜ್ಞಾನ ದೊರೆಯುವುದು. ಮನಸ್ಸಿಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ಸಿಗುವುದು.

ಈ ಕೆಳಗಿನ ಶ್ಲೋಕವನ್ನು 12 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ಮನಸ್ಸಿನ ಕಾಮನೆಗಳು ಈಡೇರುವುದು.

ಯಾ ದೇವಿ ಸರ್ವ ಭೂತೇಷು ಶಕ್ತಿರೂಪೇಣ ಸಂಸ್ಥಿತಾ |

ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋ ನಮಃ ||

(ಲೇಖಕರು ಧಾರ್ವಿುಕ ಚಿಂತಕರು)

***

Note from Kannada.Club : This story has been auto-generated from a syndicated feed from http://vijayavani.net/mysuru-dasara-dasara-2018-navaratri-navaratri-special/