ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆಯ ದುಷ್ಪರಿಣಾಮ ತಪ್ಪಿಸಲು ನಡೆದ ಅಂತಿಮ ಪ್ರಯತ್ನಗಳೇನು?

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ದಿಢೀರನೇ ಮಹತ್ವ ಪಡೆದುಕೊಂಡಿರುವ, ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುವ ಬೆಳವಣಿಗೆ ಎಂದೇ ಹುಯಿಲೆದ್ದಿರುವ ಬೆಳಗಾವಿ ಪ್ರಾಥಮಿಕ ಭೂ ಅಭಿವೃದ್ಧಿ (ಪಿಎಲ್​ಡಿ) ಬ್ಯಾಂಕ್​ನ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಈ ನಡುವೆ ಹಲವು ಮಹತ್ತರ ಬೆಳವಣಿಗೆಗಳೂ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸುತ್ತ ನಡೆದಿವೆ.

ಒಂದೆಡೆ ತಮ್ಮ ಬಣದವರನ್ನೇ ಗೆಲ್ಲಿಸಿಕೊಳ್ಳಲು ಸತೀಶ್​ ಜಾರಕಿಹೊಳಿ ಮತ್ತು ಸಹೋದರರ ಬಣ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಬಣ ಪ್ರಯತ್ನಿಸುತ್ತಿವೆ. ಇನ್ನೊಂದಡೆ ಈ ಚುನಾವಣೆಯ ಫಲಿತಾಂಶದಿಂದ ಆಗಬಹುದಾದ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಮಟ್ಟದಲ್ಲಿಯೂ ಪ್ರಯತ್ನಗಳು ನಡೆದಿವೆ.

ಚುನಾವಣೆಯನ್ನು ಜಾರಕಿಹೊಳಿ ಕುಟುಂಬ ಅತ್ಯಂತ ಪ್ರತಿಷ್ಠೆಯ ವಿಚಾರವನ್ನಾಗಿ ಪರಿಗಣಿಸಿದೆ. ಆದರೆ, 9 ನಿರ್ದೇಶಕರನ್ನು ತಮ್ಮ ಬಣದಲ್ಲಿ ಹೊಂದಿರುವ ಲಕ್ಷ್ಮೀ ಹೆಬ್ಬಾಳ್ಕರ್​ ಅವರೂ ತಮ್ಮವರ ಗೆಲುವಿಗಾಗಿ ಹಠಕ್ಕೆ ಬಿದ್ದಿದ್ದಾರೆ. ಸಹಜವಾಗಿಯೇ ಲಕ್ಷ್ಮೀ ಬಣ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ಜಾರಕಿಹೊಳಿ ಕುಟುಂಬ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯನ್ನೇ ಎತ್ತಿ ರಾಜ್ಯದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಜಾರಕಿಹೊಳಿ ಸೋದರರಿಗೆ ಸೋಲುಂಟಾದರೆ, ಅವರಿಂದ ಸರ್ಕಾರಕ್ಕೆ ಎದುರಾಗಬಹುದಾದ ಕಂಟಕವನ್ನು ಮೊದಲೇ ನಿಗ್ರಹಸಲು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು, ಡಿ.ಕೆ ಶಿವಕುಮಾರ್​ ಅವರ ಮೂಲಕ ಅಂತಿಮ ಹಂತದಲ್ಲಿ ಪ್ರಯತ್ನ ನಡೆಸಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಸಂಧಾನಕ್ಕೆ ಮುಂದಾದ ಡಿಕೆಶಿ ಮಾತಿಗೆ ಜಾರಕಿಹೊಳಿ ಸಹೋದರರು ಬೆಲೆ ನೀಡಿಲ್ಲ. ಹೀಗಾಗಿ ಡಿಕೆಶಿ ಅವರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್​​ ಅವರ ಮೂಲಕ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆಶೋಕ್​ ಚವಾಣ್​ ಅವರ ಮಾತಿಗೂ ಬಗ್ಗದ ಜಾರಕಿಹೊಳಿ ಸಹೋದರರು, ಸ್ಥಳೀಯ ವಿಷಯದಲ್ಲಿ ತಲೆ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲೇ ನಡೆದ ಅಂತಿಮ ಪ್ರಯತ್ನವೂ ಫಲಪ್ರದವಾಗದೇ ಹೋಗಿದೆ ಎನ್ನಲಾಗುತ್ತಿದೆ.
ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯ ಖಾನಾಪುರದಲ್ಲಿರುವ ಪಿಎಲ್​ಡಿ ಬ್ಯಾಂಕ್​ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಬ್ಯಾಂಕ್ ಸುತ್ತಮುತ್ತ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗಾಗಿ 2 ಕೆಎಸ್​​ಆರ್​​ಪಿ, 4 ಡಿಆರ್, 200 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಇನ್ನು ಬೆಳಗ್ಗೆ 10 ರಿಂದ 11 ಗಂಟೆ ಒಳಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನ 1:20 ರಿಂದ 1: 50 ನಾಮಪತ್ರ ಹಿಂಪಡೆಯಲು ಅವಕಾಶವಿರಲಿದೆ. ಮಧ್ಯಾಹ್ನ 2 ಗಂಟೆಯಿಂದ ಗೌಪ್ಯ ಮತದಾನ ನಡೆಯಲಿದೆ.

ಪಿಎಲ್‌ಡಿ ಬ್ಯಾಂಕ್‌ನ ಒಟ್ಟು 14 ನಿರ್ದೇಶಕರ ಪೈಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬಣದಲ್ಲಿ 9 ಮಂದಿ ಇದ್ದು, ಜಾರಕಿಹೊಳಿ ಸೋದರರ ಬಣದಲ್ಲಿ ಐವರು ನಿರ್ದೇಶಕರಿದ್ದಾರೆ. ಮೆಲ್ನೋಟಕ್ಕೆ ಹೆಬ್ಬಾಳ್ಕರ್‌ ಬಣ ಮೇಲುಗೈ ಸಾಧಿಸಿದೆ.

***

Note from Kannada.Club : This story has been auto-generated from a syndicated feed from http://vijayavani.net/belgaum-pld-bank-elections-directors-jarakiholi-brothers-laxmi-hebbalkar-faction-politics-government-hd-kumaraswamy-dk-shivakumar-ashok-chavan/