ಬಿಸಿಲ ಧಗೆಗೆ ಬಳಲಿದ ಭತ್ತ

ಕಾರವಾರ/ಹೊನ್ನಾವರ: ಕರಾವಳಿಯಲ್ಲಿ ಎರಡು-ಮೂರು ವಾರಗಳಿಂದ ಮಳೆ ಮಾಯವಾಗಿ ಪ್ರಖರ ಬಿಸಿಲಿನ ವಾತಾವರಣ ನಿರ್ವಣವಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಝುಳಕ್ಕೆ ಜಿಲ್ಲೆಯ ವಿವಿಧೆಡೆ ಭತ್ತದ ಗದ್ದೆಗಳು ಒಣಗಿವೆ. ಶೇಂಗಾ, ತರಕಾರಿ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಅಲ್ಲದೆ, ರೋಗಕ್ಕೆ ತುತ್ತಾಗುತ್ತಿವೆ.ಜೂನ್, ಜುಲೈ ಹಾಗೂ ಆಗಸ್ಟ್​ನಲ್ಲಿ ಜಿಲ್ಲೆಯ ಕರಾವಳಿಯ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಆದರೆ, ಸೆಪ್ಟೆಂಬರ್​ನಲ್ಲಿ ಇದ್ದಕ್ಕಿದ್ದಂತೆ ಬಿಸಿಲು ಬಿದ್ದಿದ್ದು ಮಳೆ ಕೊರತೆಯಾಗಿದೆ. ವಾಡಿಕೆಯಂತೆ ಸೆ. 1ರಿಂದ 17ರವರೆಗೆ 135 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 37.2 ಮಿ.ಮೀ. ಮಾತ್ರ ಮಳೆಯಾಗಿದೆ.
ದಾಖಲೆ ಧಗೆ: ಕಾರವಾರ ಹವಾಮಾನ ಕೇಂದ್ರದ ವರದಿಯಂತೆ ಭಾನುವಾರ 33.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 6 ವರ್ಷಗಳ ಸೆಪ್ಟೆಂಬರ್ ತಿಂಗಳಲ್ಲಿ ಕಂಡ ದಾಖಲೆಯ ಉಷ್ಣಾಂಶವಾಗಿದೆ. (2012ರ ಸೆ. 28 ರಂದು 33.6 ಡಿಗ್ರಿ ಸೆಲ್ಸಿಯಸ್ ಹಾಗೂ 2011 ರ ಸೆ. 27ರಂದು 33.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ನಂತರ ಇಷ್ಟೊಂದು ಉಷ್ಣಾಂಶ ದಾಖಲಾಗಿರಲಿಲ್ಲ.)
ಕೀಟ ಬಾಧೆ: ಮಳೆ ಕಡಿಮೆಯಾಗಿ ಬಿಸಿಲಿದೆ ಆದರೂ ವಾತಾವರಣದಲ್ಲಿ ಶೇ. 85ರಷ್ಟು ತೇವಾಂಶವಿದೆ. ಇದು ಕೀಟ ಬಾಧೆ ಹೆಚ್ಚಲು ಕಾರಣವಾಗಿದೆ. ಎಲೆ, ಕಾಂಡ ತಿನ್ನುವ ಕೀಟಗಳು ಕೇವಲ ಭತ್ತ ಮಾತ್ರವಲ್ಲದೆ, ಎಲ್ಲ ಬೆಳೆಗಳಿಗೂ ಮುತ್ತಿಕೊಳ್ಳುತ್ತಿವೆ. ಇದರಿಂದ ಜನ ಭಯಪಡುವಂತಾಗಿದೆ.
ಹೊನ್ನಾವರದಲ್ಲಿ ನಲುಗಿದ ಬೆಳೆ: ಹೊನ್ನಾವರ ತಾಲೂಕಿನ ಗೇರುಸೊಪ್ಪಾ, ಹಡಿನಬಾಳ, ಹಾಡಗೇರಿ, ನಗರೆ, ಕವಲಕ್ಕಿ, ರ್ಕ, ಹಳದೀಪುರ, ಚಂದಾವರ, ಹೊದ್ಕೆ-ಶಿರೂರು, ಕಡ್ನೀರು, ನವಿಲಗೋಣ ಸೇರಿ 77 ಹಳ್ಳಿಗಳಲ್ಲಿನ ಬೆಳೆಗಳು ಬಿರು ಬಿಸಿಲಿನ ತಾಪಕ್ಕೆ ವಿಪರೀತ ನಲುಗಿವೆ. ವಿವಿಧ ಭಾಗಗಳಲ್ಲಿ ಭತ್ತಕ್ಕೆ ಬೆಂಕಿ ರೋಗ ತಗುಲಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಭತ್ತಕ್ಕೆ ಎರೆಹುಳು ಬಾಧೆ ಕಾಣಿಸಿಕೊಂಡಿತ್ತು. ಸಕಾಲಕ್ಕೆ ವಿಪರೀತ ಮಳೆಯಾಗಿದ್ದ ರಿಂದ ರೋಗ ತಾನಾಗಿಯೇ ಕಡಿಮೆಯಾಗಿತ್ತು. ಆದರೆ, ಈಗ ಮುಂದುವರಿದ ಬಿಸಿಲಿನ ಝುಳಕ್ಕೆ ಭತ್ತದ ಬೆಳೆ ಕೈ ಕೊಡುವ ಸಾಧ್ಯತೆ ಇದೆ.
ಹೂ ಬರುವ ವೇಳೆ ಕೈ-ಕೊಟ್ಟ ಮಳೆ: ಭತ್ತದ ಸಸಿಗಳು ಹೂವಾಡುವ ಹಂತದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಭತ್ತ ಜೊಳ್ಳು ಬೀಳುವ ಸಾಧ್ಯತೆಯಿದೆ. ಮಳೆಗೆ ಭತ್ತದ ತೆನೆಗಳು ಗಟ್ಟಿಯಾಗಿ ಉತ್ತಮ ಫಸಲು ನೀಡುತ್ತವೆ. ಆದರೆ, 1 ತಿಂಗಳಿಂದ ಮಳೆ ಕೊರತೆ ಕಾಡುತ್ತಿದೆ. ರೈತರು ಸಂಕಷ್ಟ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಳ್ಳ- ಕೊಳ್ಳಗಳು ಮಳೆಯಿಲ್ಲದೆ ಬತ್ತುತ್ತಿದ್ದು, ಬಾವಿಯ ನೀರಿನ ಮಟ್ಟ ಕುಸಿಯುತ್ತಿವೆ.
ಒಡ್ಡು ಕಟ್ಟಿ ನೀರು ಹಾಯಿಸಿದರು: ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ಕಡ್ನೀರಿನಲ್ಲಿ ನೂರಾರು ಎಕರೆ ಭತ್ತದ ಬೆಳೆಗಳಿಗೆ ನೀರಿಲ್ಲದೇ ಬೆಳೆ ಒಣಗುತ್ತಿತ್ತು. ಈ ವೇಳೆ ರೈತರು ಕಾಲುವೆಗಳ ಮೂಲಕ ನೀರು ಹಾಯಿಸಲು ಮುಂದಾಗಿದ್ದಾರೆ. ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ರಾಜಕಾಲುವೆಗಳಲ್ಲಿ ಹರಿಯುತ್ತಿದ್ದ ನೀರು ಕಡಿಮೆಯಾಗಿದೆ. ಇದರಿಂದ ಊರಿನ ಕೆಲವರು ಸೇರಿ ಬಾಂದಾರ್​ಗೆ ಅಡ್ಡಲಾಗಿ ಸ್ವತಃ ತಾವೇ ಕಲ್ಲು ಮಣ್ಣಿನಿಂದ ಒಡ್ಡು ನಿರ್ವಿುಸಿ, ಬಾಡುತ್ತಿರುವ ಗದ್ದೆಗಳಿಗೆ ನೀರು ಹಾಯಿಸಿದ್ದಾರೆ. ಆದರೆ, ಸೆಪ್ಟೆಂಬರ್ ಮೊದಲ ವಾರದಲ್ಲೇ ರಣ ಬಿಸಿಲಿನ ಛಾಯೆ ಆವರಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ ವಿವಿಧೆಡೆ ಬಿಸಿಲಿನಿಂದಾಗಿ ಭತ್ತದ ಗದ್ದೆಗಳು ಕೆಂಪು ಬಣ್ಣಕ್ಕೆ ತಿರುಗಿರುವ ಬಗೆಗೆ ವರದಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರುವುದರಿಂದ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಭತ್ತ ಕೆಂಪಾಗಿರುವುದನ್ನು ಕಂಡವರು ಯಾರೂ ಸಹ ರಾಸಾಯನಿಕ ಯೂರಿಯಾಗಳಂತಹ ಗೊಬ್ಬರ ಸಿಂಪಡಿಸಬಾರದು. ಬೆಂಕಿ ರೋಗಕ್ಕೆ ತಾಲೂಕಿನ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿಗಳು ಲಭ್ಯವಿದೆ.
| ಪುನೀತಾ ಕಿರಣಕುಮಾರ ನಾಯ್ಕ ಕೃಷಿ ಅಧಿಕಾರಿ 

***

Note from Kannada.Club : This story has been auto-generated from a syndicated feed from http://vijayavani.net/karwar-paddy-worn-by-sun/