ಬಾಬಾ ರಾಂಪಾಲ್​ 2 ಹತ್ಯೆ ಪ್ರಕರಣಗಳಲ್ಲಿ ದೋಷಿ: ಹರಿಯಾಣ ಕೋರ್ಟ್​ ತೀರ್ಪು, ಶಿಕ್ಷೆ ಅ.17ಕ್ಕೆ ಪ್ರಕಟ

ನವದೆಹಲಿ: ಸ್ವಯಂಘೋಷಿತ ದೇವಮಾನವ ರಾಂಪಾಲ್​ ಎರಡು ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹರಿಯಾಣ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಹಿಸಾರ್ ಜಿಲ್ಲೆಯ ಬರ್ವಾಲಾದಲ್ಲಿ ಸತ್ಲೋಕ ಆಶ್ರಮದ ಆವರಣದಲ್ಲಿ 2014ರ ನವೆಂಬರ್​ನಲ್ಲಿ ನಾಲ್ವರು ಮಹಿಳೆಯರು, ಒಂದು ಮಗುವಿನ ಹತ್ಯೆಯಾಗಿತ್ತು. ರಾಂಪಾಲ್​ ಹಾಗೂ ಆತನ 27 ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಆರೋಪಿ ಎಂದು ಕೋರ್ಟ್​ ತೀರ್ಪು ನೀಡಿದ್ದು, ಅಕ್ಟೋಬರ್​ 16 ಮತ್ತು 17ರಂದು ಶಿಕ್ಷೆ ಪ್ರಮಾಣ ನಿಗದಿಯಾಗಲಿದೆ.

2014ರಲ್ಲಿ ಸತ್​ಲೋಕ​ ಆಶ್ರಮವನ್ನು ಪೊಲೀಸರು ವಶಪಡಿಸಿಕೊಂಡು ರಾಂಪಾಲ್ ಅವರನ್ನು ಬಂಧಿಸಿದ್ದರು. ಈ ವೇಳೆ ಆತನ ಬೆಂಬಲಿಗರು ಕಲ್ಲು, ಗನ್​ಗಳಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಪೊಲೀಸರು ಮುತ್ತಿಗೆ ಹಾಕಿದ ದಿನ ರಾಂಪಾಲ್ ಅವರು ಭಕ್ತರನ್ನೇ ಗುರಾಣಿಯಂತೆ ಬಳಸಿಕೊಂಡಿದ್ದರು. ಬೆಂಬಲಿಗರು ಪೊಲೀಸರ ಮೇಲೆ ಪೆಟ್ರೋಲ್​, ಆ್ಯಸಿಡ್​ ಬಾಂಬ್​ಗಳನ್ನೂ ಎಸೆದಿದ್ದರು. ಘಟನೆಯಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಬಾಬಾ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆ ಸಹಿತ ಗಲಭೆಗೆ ಪ್ರಚೋದನೆ, ರಾಷ್ಟ್ರದ್ರೋಹ, ಅಕ್ರಮ ಬಂಧನ ಮುಂತಾದ ಪ್ರಕರಣಗಳು ದಾಖಲಾಗಿದ್ದವು.

ಪೊಲೀಸ್​ ಭದ್ರತೆ
ಕೋರ್ಟ್​ನಿಂದ ತೀರ್ಪು ಬಂದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬರ್ವಾಲಾದಲ್ಲಿ 2000 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ನೂ 3 ಪ್ರಕರಣ ಬಾಕಿ: ಖುಲಾಸೆಗೊಂಡರೂ ರಾಮ್‌ಪಾಲ್​ಗೆ ಜೈಲೇ ಗತಿ

***

Note from Kannada.Club : This story has been auto-generated from a syndicated feed from http://vijayavani.net/murder-self-self-styled-godman-ramphal-court-police-judgment/