ಪಿ.ಟಿ. ಮೇಷ್ಟ್ರಿಗೆ ಪೀಕಲಾಟ

| ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ದೈಹಿಕ ಶಿಕ್ಷಣಕ್ಕೆ ಪಠ್ಯಪುಸ್ತಕ ಮುದ್ರಿಸಿ ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ವಿಚಾರದಲ್ಲಿ ಮಾತ್ರ ಉದಾಸೀನತೆ ಮುಂದುವರಿಸಿಕೊಂಡೇ ಬಂದಿರುವ ಸರ್ಕಾರಕ್ಕೀಗ ಹಾಲಿ ಸೇವೆಯಲ್ಲಿರುವ ಪಿ.ಟಿ. ಮೇಷ್ಟ್ರುಗಳೂ ಹೊರೆ ಎನಿಸಿದ್ದಾರೆ.

 

ರಾಜ್ಯಾದ್ಯಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 5,500ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇರುವ ಬೆನ್ನಲ್ಲೇ ಸರ್ಕಾರ ಈ ಶಿಕ್ಷಕರನ್ನೂ ಸಹ-ಶಿಕ್ಷಕರ ಪಟ್ಟಿಗೆ ಸೇರಿಸಿ ವರ್ಗಾವಣೆಗೆ ಮುಂದಾಗಿರುವುದು ಬೋಧಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿರುವ 25 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟಾರೆ 10 ಸಾವಿರ ಮಂಜೂರಾದ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಇದ್ದರೂ ನಿವೃತ್ತಿ ಮತ್ತಿತರ ಕಾರಣಗಳಿಂದಾಗಿ ಈ ಸೇವೆಯಲ್ಲಿರುವವರ ಸಂಖ್ಯೆ 4500 ದಾಟಿಲ್ಲ. ಪ್ರತಿ ಶಾಲೆಗೆ ಒಬ್ಬ ದೈಹಿಕ ಶಿಕ್ಷಕ ಇರಲೇಬೇಕು, ಸಾಮಾನ್ಯ ಶಿಕ್ಷಕರಿಗೆ ಹೋಲಿಸಿದರೆ ದೈಹಿಕ ಶಿಕ್ಷಕರ ಕರ್ತವ್ಯವೇ ಭಿನ್ನ. ಇವೆಲ್ಲ ಅರಿವಿದ್ದ್ದೂ ಸರ್ಕಾರ ದೈಹಿಕ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ಖಾಲಿ ಇರುವ ಇತರ ಶಾಲೆಗಳಿಗೆ ವರ್ಗಾವಣೆ ಮಾಡಲು ಹೊರಟಿದೆ. ಈ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಂದು ಪರಿಗಣಿಸಿ ಪಾಠ ಮಾಡಿಸಲಾಗುತ್ತದೆಯೇ ಎಂಬುದಕ್ಕೆ ಸದ್ಯ ಶಿಕ್ಷಣ ಇಲಾಖೆಯಲ್ಲಿ ಉತ್ತರವಿಲ್ಲ.

ಲೆಕ್ಕ ಏರುಪೇರು!: ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ-ಶಿಕ್ಷಕರೆಂದು ಗುರುತಿಸಿರುವ ಕಾರಣ, ಹೆಚ್ಚುವರಿ ಶಿಕ್ಷಕರ ಲೆಕ್ಕದಲ್ಲಿ ಏರುಪೇರಾಗಿದೆ. ಯಾವ್ಯಾವ ಶಾಲೆಗಳಲ್ಲಿ ಸಹ-ಶಿಕ್ಷಕರು ಹೆಚ್ಚುವರಿಯಾಗಿದ್ದಾರೋ ಅವರಿಗೆ ಅಲ್ಲೇ ಉಳಿದುಕೊಳ್ಳುವ ಅವಕಾಶ ಸಿಕ್ಕಿದೆ.

ವರದಿಗಿಲ್ಲ ಬೆಲೆ : ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚಲು ಪ್ರತಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ ಇರುವಂತೆ ದೈಹಿಕ ಶಿಕ್ಷಕರೂ ಇರಲೇಬೇಕು ಎಂದು ಡಾ.ವೈದ್ಯನಾಥನ್ ವರದಿ ಅಭಿಪ್ರಾಯಪಟ್ಟಿತ್ತು. ಈಗಾಗಲೇ 60 ಮಕ್ಕಳಿರುವ ಶಾಲೆಗಳಿಗೆ ಬಡ್ತಿ ಮುಖ್ಯೋಪಾಧ್ಯಾಯರನ್ನು ನೇಮಿಸಿರುವಂತೆ 100 ಮಕ್ಕಳಿರುವ ಪ್ರಾಥಮಿಕ ಶಾಲೆಗಳಿಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಮುಂದುವರಿಸುವಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆ ಕೂಡ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಆದರೆ ಇನ್ನೂ ಫಲ ಸಿಕ್ಕಿಲ್ಲ.

ನಿಯಮವಿದೆ

ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ಗುರುತಿಸಬಾರೆಂದೇನು ಇಲ್ಲ. 500ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಇಬ್ಬರು ದೈಹಿಕ ಶಿಕ್ಷಕರ ಹುದ್ದೆಗಳಿದ್ದಲ್ಲಿ ಅಂತಹ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೆ ಅಲ್ಲಿ ಹೆಚ್ಚುವರಿ ಎಂದು ಗುರುತಿಸಲು ಅಡ್ಡಿ ಇಲ್ಲ.

ಕಾಟಾಚಾರಕ್ಕೆ ಕೊನೆ ಎಂದು?

ಸರ್ಕಾರಿ ಶಾಲೆ ಗುಣಮಟ್ಟ ಹೆಚ್ಚಿಸುತ್ತೇವೆಂದು ಬಡಬಡಾಯಿಸುವ ಸರ್ಕಾರ ಶಿಕ್ಷಕರ ನೇಮಕಕ್ಕೆ ಹಿಂದೇಟು ಹಾಕುತ್ತದೆ ಎಂಬುದಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವೇ ದೊಡ್ಡ ಉದಾಹರಣೆ. ರಾಜ್ಯದಲ್ಲಿರುವ 25 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಶೇ.20 ಶಾಲೆಗಳಲ್ಲೂ ಪಿ.ಟಿ. ಟೀಚರ್​ಗಳಿಲ್ಲ. 2007ರಿಂದ ಈ ಶಿಕ್ಷಕರ ನೇಮಕವೇ ನಡೆದಿಲ್ಲ. ಕಳೆದ ಏಳು ವರ್ಷಗಳಲ್ಲಿ ನಾಲ್ಕು ಶಿಕ್ಷಣ ಸಚಿವರು ಬದಲಾದರೂ ನೇಮಕದ ಬಗ್ಗೆ ಮಾತಷ್ಟೇ ಹೊರತು ಕ್ರಿಯೆ ಮಾತ್ರ ಕಂಡಿಲ್ಲ.

10 ಸಾವಿರ ಮಂಜೂರಾದ ಹುದ್ದೆಗಳಲ್ಲಿ ಏಳು ಸಾವಿರ ಮಂದಿ ನಿವೃತ್ತರಾದರೂ ಅವರ ಸ್ಥಾನಕ್ಕೆ ಬೇರೆಯವರನ್ನು ತುಂಬುವ ಗೋಜಿಗೆ ಹೋಗಿಲ್ಲ. ವೈರುಧ್ಯ ಎಂದರೆ 2012ರಿಂದ ಆರು ಭಾಷೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಮಕ್ಕಳು ಈ ಪಠ್ಯ ಪುಸ್ತಕವನ್ನು ದಿನಾ ಶಾಲೆಗೆ ತಂದು ವಾಪಸ್ ಕೊಂಡೊಯ್ಯುತ್ತಿದ್ದಾರೆ.

ವರ್ಗಾವಣೆ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನೂ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಯಾವ ಮಾನದಂಡದಲ್ಲಿ ಈ ರೀತಿ ಸೇರಿಸಿದ್ದಾರೋ ಗೊತ್ತಿಲ್ಲ. ಇದನ್ನು ಸರಿಪಡಿಸಿ ಎಂದು ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ದೈಹಿಕ ಶಿಕ್ಷಣ ಸಚಿವರ ನೇಮಕ ಪ್ರಕ್ರಿಯೆಗೂ ಆದ್ಯತೆ ಕೊಡಿ ಎಂದು ಕೇಳಿದ್ದೇವೆ.

| ಶ್ರೀನಿವಾಸ ಗೌಡ, ಅಧ್ಯಕ್ಷರು, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ


882 ಹುದ್ದೆ ಭರ್ತಿಗೆ ಅವಕಾಶ

ಬೆಂಗಳೂರು: ಅನುದಾನಿತ ಖಾಸಗಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ನಿವೃತ್ತಿ, ರಾಜೀನಾಮೆ, ಮರಣದಿಂದ ಖಾಲಿಯಾಗಿರುವ 882 ಬೋಧಕ ಹುದ್ದೆ ಭರ್ತಿ ಮಾಡಿಕೊಳ್ಳಲು ಆರ್ಥಿಕ ಮಿತವ್ಯಯ ಸಡಿಲಿಸಿ ಹಣಕಾಸು ಇಲಾಖೆ ಅನುಮತಿ ನೀಡಿದೆ. 2014ರ ಪೂರ್ವದಲ್ಲಿ ವಿವಿಧ ಕಾರಣಗಳಿಂದ 457 ಖಾಲಿ ಹುದ್ದೆ ಭರ್ತಿ ಮಾಡಲಾಗಿದೆ.

2294 ಹುದ್ದೆ ಭರ್ತಿಯಾಗದೆ ಬಾಕಿ ಇದೆ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ತಿಳಿಸಿದೆ. 2015ರ ಜನವರಿಯಿಂದ 2017ರ ಡಿ.31ರವೆರೆಗೆ 2272 ಹುದ್ದೆ ಖಾಲಿಯಾಗಿದ್ದು, ಇವುಗಳ ಭರ್ತಿಗೆ ಅನುಮತಿ ಸಿಕ್ಕಲ್ಲಿ ವಾರ್ಷಿಕ 76 ಕೋಟಿ ಆರ್ಥಿಕ ಹೊರೆ ಆಗುತ್ತದೆ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಮಾಡಿತ್ತು. ಇದೀಗ ಹಣಕಾಸು ಇಲಾಖೆ 882 ಹುದ್ದೆ ಭರ್ತಿಗಷ್ಟೆ ಅನುಮತಿ ನೀಡಿದೆ. ವಿಶೇಷ ಸಂಗತಿ ಎಂದರೆ ಸರ್ಕಾರ ನೀಡಿರುವ ಖಾಲಿ ಹುದ್ದೆಗಳ ವಿವರದಲ್ಲಿ ವೃತ್ತಿ, ಚಿತ್ರಕಲಾ, ಸಂಗೀತ ಮುಂತಾದ ವಿಶೇಷ ಶಿಕ್ಷಕರ ಹುದ್ದೆಗಳು ಸೇರಿಲ್ಲ. ಇದೇ ವೇಳೆ ಸರ್ಕಾರದ ಈ ನಿರ್ಧಾರ ಅನುದಾನಿತ ಶಾಲೆಗಳ ಅಸಮಾಧಾನಕ್ಕೂ ಕಾರಣವಾಗಿದೆ. ಹೊಸ ಹುದ್ದೆಗಳನ್ನು ಅನುದಾನಕ್ಕೊಳಪಡಿಸದ ಸರ್ಕಾರ, ಮಂಜೂರಾದ ಹುದ್ದೆಗಳನ್ನೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುತ್ತಿಲ್ಲ ಎಂಬ ಬೇಸರ ಹೊರಹಾಕಿವೆ.

ಹೊರೆ ಹೊರಲು ಸಿದ್ಧ

ದೈಹಿಕ ಶಿಕ್ಷಕರ ನೇಮಕ ತಡವಾಗುವ ಕಾರಣ ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳ ದೈಹಿಕ ಶಿಕ್ಷಕರು ಸಮೀಪದ ಮತ್ತೊಂದು ಶಾಲೆ ಮಕ್ಕಳಿಗೂ ದೈಹಿಕ ಶಿಕ್ಷಣ ನೀಡಲು ತಯಾರಿದ್ದಾರೆ. ಆದರೆ ಈ ಸಲಹೆಯನ್ನು ಕೇಳಿಸಿಕೊಳ್ಳುವ ವ್ಯವಧಾನ ಶಿಕ್ಷಣ ಇಲಾಖೆಗೆ ಇಲ್ಲವಾಗಿದೆ.

***

Note from Kannada.Club : This story has been auto-generated from a syndicated feed from http://vijayavani.net/physical-education-teacher-teacher-government-school-transfer-state-government/