ನೆಮ್ಮದಿಗೆ ಸುಲಭ ದಾರಿ ಕ್ಷಮೆ

| ಶಿಲ್ಪಾ ಕುಲಕರ್ಣಿ

ಸಂಬಂಧಗಳಿಗೆ ಪ್ರಾಮುಖ್ಯತೆ ಕೊಟ್ಟು ತಪ್ಪಿಲ್ಲದಿದ್ದರೂ ವಾದಕ್ಕಿಳಿಯದೇ ಕ್ಷಮೆ ಕೇಳುವುದು, ಸಂಬಂಧಗಳನ್ನು ಉಳಿಸಿಕೊಳ್ಳುವ ಅತ್ಯುನ್ನತ ವಿಧಾನ, ಅದರಂತೆಯೇ ಕ್ಷಮಿಸುವುದೂ ಕೂಡ. ಕ್ಷಮೆ ಮತ್ತು ತಾಳ್ಮೆ ಒಂದಕ್ಕೊಂದು ಪೂರಕವಾಗಿವೆ. ತಾಳ್ಮೆ ಹೊಂದಿದಾಗ ತಾನಾಗಿಯೇ ಕ್ಷಮಾ ಮನೋಭಾವನೆ ಬರುತ್ತದೆ.

ಮಹಾಭಾರತದಲ್ಲಿ ಪಾಂಡವರ ಹಿರಿಯಣ್ಣನಾದ ಯುಧಿಷ್ಠಿರ ಧರ್ಮಪಾಲನೆಯಲ್ಲಿ ಎತ್ತಿದ ಕೈ. ಅಂತೆಯೇ ಆತ ಧರ್ಮಜ, ಧರ್ಮರಾಜ ಎಂದೇ ಪ್ರಖ್ಯಾತ. ಪಾಂಡವರು ವನವಾಸದಲ್ಲಿದ್ದಾಗ ನಡೆದ ಸಂದರ್ಭ. ಕೌರವರು ತಮ್ಮ ಸಿರಿಯ ವೈಭವವನ್ನು ತೋರಿಸುವುದಕ್ಕಾಗಿ ಮತ್ತು ಪಾಂಡವರು ಕಾಡಿನಲ್ಲಿ ಕಷ್ಟಪಡುತ್ತಿರುವುದನ್ನು ಕಣ್ಣಾರೆ ನೋಡಿ ಸಂತೋಷಿಸಲು ಅವರು ನೆರೆದ ದ್ವೈತವನದ ಹತ್ತಿರದ ಸರೋವರಕ್ಕೆ ಸಹಸ್ರಾರು ದಾಸ ದಾಸಿಯರು, ಹೆಂಡಂದಿರೊಡಗೂಡಿ ಜಲಕ್ರೀಡೆಗೆ ತೆರಳಿದರು. ಆದರೆ ಸರೋವರದಲ್ಲಿ ಗಂಧರ್ವನೋರ್ವ ತನ್ನವರೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದನ್ನು ಕಂಡು ದುರ್ಯೋಧನ ಕೋಪದಿಂದ ಗಂಧರ್ವನೊಂದಿಗೆ ಯುದ್ಧಕ್ಕಿಳಿದನು. ಗಂಧರ್ವನು ದುರ್ಯೋಧನಾದಿಗಳನ್ನು ಸದೆಬಡಿಯುತ್ತ ಎಲ್ಲರನ್ನೂ ಸೆರೆಹಿಡಿದನು. ಅಳಿದುಳಿದ ಜನ ಬೇರೆ ದಾರಿಕಾಣದೆ ಯುಧಿಷ್ಠಿರನಿದ್ದ ಆಶ್ರಮಕ್ಕೆ ಬಂದು ನಡೆದುದ್ದೆಲ್ಲವನ್ನು ವಿವರಿಸಿ, ಸಹಾಯ ಮಾಡುವಂತೆ ಬೇಡಿಕೊಂಡರು. ವಿಷಯ ತಿಳಿದ ಯುಧಿಷ್ಠಿರ ತನ್ನ ತಮ್ಮಂದಿರೊಡಗೂಡಿ ಗಂಧರ್ವರ ಜೊತೆಗೆ ಯುದ್ಧಮಾಡಿ ದುರ್ಯೋಧನಾದಿಗಳನ್ನು, ಹೆಂಗಳೆಯರು ಮತ್ತು ಮಕ್ಕಳನ್ನು ಪ್ರಾಣಾಪಾಯದಿಂದ ರಕ್ಷಿಸಿ ಸೆರೆಯಿಂದ ಬಿಡಿಸಿದನು. ಯುಧಿಷ್ಠಿರನು ಅಪಾರವಾದ ಕರುಣೆಯಿಂದ ದುರ್ಯೋಧನನಿಗೆ- ‘ಇನ್ನು ಇಂಥ ಮೂರ್ಖತನ ಮಾಡಲು ಹೋಗಬೇಡ, ದ್ವೇಷದಿಂದ ಸುಖವಿಲ್ಲ. ನಿನಗೆ ಒಳ್ಳೆಯದಾಗಲಿ, ನಿನ್ನ ರಾಜ್ಯಕ್ಕೆ ಹಿಂದಿರುಗು’ ಎಂದನು. ಆತ ಅಪಮಾನದಿಂದ ತಲೆ ತಗ್ಗಿಸಿ, ಮರು ಮಾತನಾಡದೆ, ತನ್ನ ಸಂಗಡಿಗರೊಡಗೂಡಿ ಅಲ್ಲಿಂದ ಹೊರಟನು. ದುರ್ಯೋಧನನು ನಡೆದದ್ದೆಲ್ಲವನ್ನು ಕರ್ಣನ ಮುಂದೆ ಹೇಳಿ, ಯಾರನ್ನು ನಾವು ಅತ್ಯಂತ ಹೀನಾಯವಾಗಿ ಅವಮಾನಿಸಿ ವನವಾಸಕ್ಕೆ ಕಳುಹಿಸಿದ್ದೆವೋ, ಅವರೇ ಉದಾರವಾಗಿ ಕ್ಷಮಿಸಿ ಬಿಡುಗಡೆ ಮಾಡಿಸಿದರು, ಎಂದು ದುಃಖಿಸಿದನು.

ದುರ್ಯೋಧನನಿಗೆ ತನ್ನ ಕೃತ್ಯದೆಡೆಗೆ ಅಸಹ್ಯ ಉಂಟಾಗಿ ಪಶ್ಚಾತ್ತಾಪ ಪಟ್ಟ. ಧರ್ಮರಾಜ ಶತ್ರುವಿನೆಡೆಗೂ ಉದಾತ್ತತೆಯನ್ನು ಮೆರೆದು ಅಜಾತಶತ್ರುವೆನಿಸಿಕೊಂಡ. ಹೀಗೆ ಪರರ ಅಸಹನೀಯ ವರ್ತನೆಯಿಂದ ಧೃತಿಗೆಡದೇ, ನಿಂದಿಸಿದವರನ್ನು ದ್ವೇಷಿಸದೇ, ಪ್ರೀತಿ ಮತ್ತು ಕ್ಷಮೆಯ ಅಡಿಪಾಯದಿಂದ ಬಾಂಧವ್ಯದ ಬೇರುಗಳನ್ನು ಗಟ್ಟಿಯಾಗಿಸೋಣ.

(ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ)

(ಪ್ರತಿಕ್ರಿಯಿಸಿ: manollasavv@gmail.com)

The post ನೆಮ್ಮದಿಗೆ ಸುಲಭ ದಾರಿ ಕ್ಷಮೆ appeared first on ವಿಜಯವಾಣಿ.

***

Note from Kannada.Club : This story has been auto-generated from a syndicated feed from http://vijayavani.net/manollasa-column-2/