ನವದೇವಿಯರ ಆರಾಧನೆ

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ದೇವಿಯನ್ನು ಶ್ರದ್ಧಾಭಕ್ತಿಯಿಂದ ಪವಿತ್ರಭಾವನೆಯಿಂದ 9 ದಿನಗಳೂ ಆರಾಧಿಸುವ ವ್ರತವೇ ನವರಾತ್ರಿ. ‘ನವ’ ಎಂಬುದಕ್ಕೆ ‘ಹೊಸದು’ ಮತ್ತು ‘ಒಂಭತ್ತು’ ಎಂಬ ಎರಡು ಅರ್ಥವಿದೆ. ಒಂಭತ್ತು ಎಂಬ ಅಂಕಿಯಲ್ಲಿ ಒಂದು ವಿಶೇಷವಿದೆ. ಒಂಭತ್ತರ ಗುಣಾಕಾರದಲ್ಲಿ ಗುಣಲಬ್ಧವನ್ನು ಪರಸ್ಪರ ಕೂಡಿಸಿದರೆ ಕೊನೆಯಲ್ಲಿ ಒಂಭತ್ತೇ ಬರುತ್ತದೆ. ಉದಾಹರಣೆಗೆ, 92= 18; 1+8= 9. ಅದೇ ರೀತಿಯಲ್ಲಿ, 93= 27; 2+7= 9. ಹೀಗೆ ನಮಗೆ ಕೊನೆಗೆ ಸಿಗುವುದು ‘9’. ಈ ಅಂಕಿ ಪರಿಪೂರ್ಣತೆಯನ್ನು ಸೂಚಿಸುತ್ತದೆ. ಅಂದರೆ, ದೇವಿಯು ಎಷ್ಟೇ ಅವತಾರ ತಾಳಿದರೂ ಕೊನೆಯಲ್ಲಿ ಆದಿಶಕ್ತಿಯಾಗಿಯೇ ಉಳಿಯುವಳು ಎಂಬುದರ ದ್ಯೋತಕವಿದು. ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿ ದಿನದವರೆಗೆ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು.

ನವರಾತ್ರಿಯ 9 ದಿನಗಳಲ್ಲಿ ನವದೇವಿಯರನ್ನು ಬೇರೆಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ಅವುಗಳೆಂದರೆ:

1) ಶೈಲಪುತ್ರೀ 2) ಬ್ರಹ್ಮಚಾರಿಣೀ 3) ಚಂದ್ರಘಂಟಾ 4) ಕೂಷ್ಮಾಂಡಾ 5) ಸ್ಕಂದ ಮಾತಾ

6) ಕಾತ್ಯಾಯನೀ 7) ಸರಸ್ವತೀ 8) ದುರ್ಗಾ 9) ಮಹಾಗೌರೀ

್ಞೇಹದ ನವಚಕ್ರಗಳಿಂದ ನವದೇವಿಯರ ಆರಾಧನೆ: ಆಧ್ಯಾತ್ಮಿಕ ಭಾವದಲ್ಲಿ ದೇಹ ಮತ್ತು ಮನಸ್ಸು ಹಗುರವಾದಾಗ ಅಂತಃಚೈತನ್ಯ ಜಾಗೃತವಾಗುತ್ತದೆ. ಯೋಗಶಾಸ್ತ್ರದ ರೀತ್ಯಾ ನಮ್ಮ ಶರೀರದೊಳಗೆ 9 ಚಕ್ರಗಳಿವೆ. ಅವುಗಳೆಂದರೆ: 1) ಮೂಲಾಧಾರ 2) ಸ್ವಾಧಿಷ್ಠಾನ 3) ಮಣಿಪೂರ 4) ಅನಾಹತ 5) ವಿಶುದ್ಧ 6) ಆಜ್ಞಾ 7) ಸಹಸ್ರಾರ 8) ದೈವೀಭಾವನೆಯ ಕೇಂದ್ರಚಕ್ರ 9) ಸಾಕ್ಷಾತ್ಕಾರ.

ನವರಾತ್ರಿಯಲ್ಲಿ ಈ 9 ಚಕ್ರಗಳನ್ನು ಉಪಯೋಗಿಸಿ 9 ದಿನ ನವದೇವಿಯರನ್ನು ಪೂಜಿಸಿದರೆ ವಿಶೇಷಫಲ ಸಿಗುವುದು.

ಮೊದಲನೆಯ ದಿನ- ಶೈಲಪುತ್ರೀ ದೇವಿ- ‘ಮೂಲಾಧಾರ ಚಕ್ರ’: ನವರಾತ್ರಿಯ ಮೊದಲನೆಯ ದಿನ, ಕುಂಡಲಿನಿ ಶಕ್ತಿಯ ಕೇಂದ್ರಬಿಂದುವಾದ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನಮಾಡಬೇಕು. ಈ ಚಕ್ರವು ‘ಪೃಥ್ವೀತತ್ತ್ವ’ವನ್ನು ಹೊಂದಿದೆ. ಇದರ ಬಣ್ಣ ಕೆಂಪು. ನವರಾತ್ರಿಯ 9 ದಿನಗಳೂ ನಮ್ಮೊಳಗಿನ ಚೈತನ್ಯಶಕ್ತಿಯನ್ನು ಬಡಿದೆಬ್ಬಿಸುವ ಪರ್ವಕಾಲ. ಸುಪ್ತಚೈತನ್ಯವನ್ನು ಜಾಗೃತಗೊಳಿಸುವ ಮೂಲಕ ಸಂಕಷ್ಟಗಳನ್ನು ಮೆಟ್ಟಿನಿಲ್ಲಬಹುದು ಎನ್ನುವುದೇ ನವರಾತ್ರಿ ಆಚರಣೆಯ ಅಂತರಾರ್ಥ.

1) ಶೈಲಪುತ್ರೀ ದೇವಿ

‘ವಂದೇ ವಾಂಛಿತಲಾಭಾಯ ಚಂದ್ರಾರ್ಕಕೃತಶೇಖರಾಮ್ |

ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||

ನವರಾತ್ರಿಯ ಪ್ರಥಮದಿನ ದೇವಿಯನ್ನು ಶೈಲಪುತ್ರೀ ರೂಪದಲ್ಲಿ ಪೂಜಿಸಲಾಗುತ್ತದೆ. ಪರ್ವತರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ್ದರಿಂದಾಗಿ ಈ ದೇವಿಗೆ ‘ಶೈಲಪುತ್ರೀ’ ಎಂದು ಹೆಸರಾಯಿತು. ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲಪುಷ್ಪ ಹಿಡಿದು ವೃಷಭವಾಹನೆಯಾಗಿ ಕುಳಿತಿರುವಳು.

ಅವತಾರದ ಹಿನ್ನೆಲೆ: ಈ ದೇವಿಯು ಹಿಂದಿನ ಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳಾಗಿ ಅವತರಿಸಿದ್ದಳು. ಆಗ ಇವಳ ಹೆಸರು ‘ಸತಿ’ ಎಂದು. ಇವಳ ವಿವಾಹವು ಶಿವನೊಡನೆ ಆಗಿತ್ತು. ಒಮ್ಮೆ ದಕ್ಷನು ಒಂದು ದೊಡ್ಡ ಯಜ್ಞವನ್ನು ಮಾಡಿದನು. ಅದಕ್ಕೆ ಎಲ್ಲ ದೇವಾನುದೇವತೆಗಳನ್ನು ಕರೆದಿದ್ದನು. ಆದರೆ ಶಿವನಿಗೆ ಮತ್ತು ಅವನ ಪತ್ನಿಗೆ ಆಮಂತ್ರಣವಿರಲಿಲ್ಲ. ಯಜ್ಞ ನಡೆಯುವ ವಿಷಯ ಇವರಿಗೆ ತಿಳಿದಿತ್ತು. ಆ ಯಜ್ಞದಲ್ಲಿ ಭಾಗವಹಿಸಲು ಸತಿಯು ಹೊರಟಾಗ ಶಿವನು ‘ನಿನ್ನ ತಂದೆ ಆಮಂತ್ರಣವನ್ನೇ ನೀಡಿಲ್ಲ, ಹೋಗಬೇಡ’ ಎಂದು ಹೇಳಿದರೂ ಸತಿದೇವಿಯು ಅಲ್ಲಿಗೆ ಹೋದಳು. ಅಲ್ಲಿ ಅವಳಿಗೆ ಗೌರವ ಸಿಗಲಿಲ್ಲ, ಶಿವನ ಕುರಿತೂ ತಿರಸ್ಕಾರ ಭಾವನೆಯಿಂದ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡಳು. ದಕ್ಷನೂ ಅವಳ ಕುರಿತು ಅಪಮಾನದ ಮಾತನ್ನಾಡಿದ. ಇದನ್ನೆಲ್ಲ ಕಂಡು ಅವಳಿಗೆ ದುಃಖವಾಗಿ, ‘ಶಿವನ ಮಾತು ಕೇಳದೆ ಇಲ್ಲಿಗೆ ಬಂದು ದೊಡ್ಡತಪು್ಪ ಮಾಡಿದೆ’ ಎಂದು ಅನಿಸಿತು. ತನ್ನ ಪತಿ ಶಂಕರನಿಗಾದ ಅಪಮಾನವನ್ನು ಸಹಿಸಲಾರದೆ ಅವಳು ತನ್ನ ಆ ರೂಪವನ್ನು ಕೂಡಲೆ ಅಲ್ಲೇ ಯೋಗಾಗ್ನಿಯಿಂದ ಸುಟ್ಟು ಭಸ್ಮಮಾಡಿದಳು. ಸತಿಯು ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯ ರೂಪದಲ್ಲಿ ಅವತರಿಸಿ, ಶೈಲಪುತ್ರೀ ಎಂಬ ಹೆಸರು ಪಡೆದು ಪ್ರಖ್ಯಾತಳಾದಳು.

ಪೂಜಾಕ್ರಮ: ಶೈಲಪುತ್ರೀ ದೇವಿಗೆ ಹಳದಿ ಬಣ್ಣದ ಸೀರೆಯನ್ನೂ, ಅದೇ ಬಣ್ಣದ ಕುಪು್ಪಸವನ್ನೂ ಉಡಿಸಿ ಹಳದಿ ಬಣ್ಣದ ಹೂವು (ಸೇವಂತಿಗೆ), ಹಳದಿ ಬಣ್ಣದ ಅಕ್ಷತೆ, ಅರಿಸಿನ ಗೆಜ್ಜೆವಸ್ತ್ರಗಳಿಂದ ಪೂಜಿಸಬೇಕು. ಅಂದು ಈ ದೇವಿಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು. ಅಂದು ದೇವಿಗೆ ಬ್ರಾಹ್ಮೀ ಅಲಂಕಾರ ಮಾಡುವರು.

ಪೂಜಾಫಲ: ಈ ದೇವಿಯನ್ನು ಪೂಜಿಸುವುದರಿಂದ ಸಂತಾನಪ್ರಾಪ್ತಿಯಾಗುವುದು, ಮನಸ್ಸಿನ ದೃಢತೆ ಮತ್ತು ಗೌರವ ವರ್ಧಿಸುವುದು, ಉತ್ತಮ ಆರೋಗ್ಯ ಲಭಿಸುವುದು. ಯೋಗಿಗಳು ಅಂದು ಈ ದೇವಿ ಯನ್ನು ಆರಾಧಿಸುವಾಗ ಮೂಲಾಧಾರ ಚಕ್ರದಲ್ಲಿ ಮನಸ್ಸನ್ನು ನೆಲೆಗೊಳಿಸಿಕೊಳ್ಳುತ್ತಾರೆ. ಅಂದು ಈ ಶ್ಲೋಕವನ್ನು 24 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ಮನೋಕಾಮನೆಗಳು ಈಡೇರುವುವು-

ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ |

ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋ ನಮಃ ||

(ಲೇಖಕರು ಧಾರ್ವಿುಕ ಚಿಂತಕರು)

***

Note from Kannada.Club : This story has been auto-generated from a syndicated feed from http://vijayavani.net/vijayavani-navarathri-special/