ನರೇಂದ್ರ ಮೋದಿ ಅನಿಲ್​ ಅಂಬಾನಿಗೆ ಮಾತ್ರ ಪ್ರಧಾನಿ: ರಾಹುಲ್​ ಗಾಂಧಿ

ನವದೆಹಲಿ: ನರೇಂದ್ರ ಮೋದಿ ನಿಮ್ಮ ಪ್ರಧಾನಿ ಅಲ್ಲ. ಅವರು ಅನಿಲ್​ ಅಂಬಾನಿಗೆ ಮಾತ್ರ ಪ್ರಧಾನಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ರಫೇಲ್​ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

59,000 ಕೋಟಿ ರೂ. ರಫೇಲ್​ ಡೀಲ್​ ತಮ್ಮದಾಗಿಸಿಕೊಳ್ಳಲು ಡಸ್ಸಾಲ್ಟ್​ ಕಂಪನಿಗೆ ಅನಿಲ್​ ಅಂಬಾನಿ ಕಂಪನಿ ಜತೆ ಜಂಟಿ ಉದ್ಯಮ ಮಾಡುವುದು ಅನಿವಾರ್ಯವಾಗಿತ್ತು ಎಂಬುದರ ಕುರಿತು ಫ್ರಾನ್ಸ್​ ಮಾಧ್ಯಮಗಳ ವರದಿ ಬಂದ ಕೆಲವೇ ಗಂಟೆಗಳಲ್ಲಿ ರಾಹುಲ್​ಗಾಂಧಿ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟ ಎಂಬುದು ಸ್ಪಷ್ಟವಾಗಿದೆ. ಮತ್ತೊಮ್ಮೆ ಹೇಳುತ್ತೇನೆ, ಭಾರತದ ಪ್ರಧಾನಿ ಭ್ರಷ್ಟ ಮನುಷ್ಯ. ದುಃಖಕರ ವಿಷಯವೆಂದರೆ ಅವರು ಭ್ರಷ್ಟಾಚಾರದ ವಿರುದ್ಧವೇ ಆಂದೋಲನ ನಡೆಸಿದ್ದರು ಎಂದರು.

ತರಾತುರಿಯ ಫ್ರಾನ್ಸ್ ಭೇಟಿ

ಇದೇ ವೇಳೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ತರಾತುರಿಯ ಫ್ರಾನ್ಸ್​ ಭೇಟಿ ಕುರಿತು ಮಾತನಾಡಿ, ಅವರು ಫ್ರಾನ್ಸ್​ಗೆ ಭೇಟಿ ನೀಡಿರುವುದು ಕೇವಲ ಸಮರ್ಥನೆಗಾಗಿ. ಅಲ್ಲಿಗೆ ತುರ್ತಾಗಿ ಭೇಟಿ ನೀಡುವ ಅವಶ್ಯವೇನಿತ್ತು? ಡಸಾಲ್ಟ್ ಏವಿಯೇಶನ್​​ ಮೇಲೆ ಒತ್ತಡ ಹೇರಲು ಅವರು ಫ್ರಾನ್ಸ್​ಗೆ ತೆರಳಿದ್ದಾರೆ ಎಂದು ಆರೋಪಿಸಿದರು. (ಏಜೆನ್ಸೀಸ್​)

 

 

 

***

Note from Kannada.Club : This story has been auto-generated from a syndicated feed from http://vijayavani.net/greatrafalecoverup-rahul-gandhi-on-nirmala-sitharamans-france-visit/