ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ

 

ಮದ್ದೂರು : ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜೀತ ವಿಮುಕ್ತಿ ಕರ್ನಾಟಕ ಹಾಗೂ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಸದಸ್ಯರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಜೀತ ಪದ್ಧತಿ ಜೀವಂತವಾಗಿದೆ. ಪ್ರತಿ ವರ್ಷ ಜೀತದಾಳುಗಳನ್ನು ಗುರುತಿಸಿ ಜೀತ ಪದ್ಧತಿಯಿಂದ ಬಿಡುಗಡೆಗೊಳಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

2016ರಿಂದ 18ರವರೆಗೆ ಜೀತ ವಿಮುಕ್ತಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ ಜೀತದಾಳುಗಳಿಗೆ ಕೂಡಲೇ ಜೀತವಿಮುಕ್ತಿಗೊಳಿಸಿ ಬಿಡುಗಡೆ ಪತ್ರ ನೀಡಬೇಕು. 2017ರಲ್ಲಿ ಬಿಡುಗಡೆಗೊಂಡ 40 ಜೀತದಾಳುಗಳಿಗೆ ಕೂಡಲೇ ತಾತ್ಕಾಲಿಕ ಪರಿಹಾರ ಹಾಗೂ ಪುರ್ನವಸತಿ ಕಲ್ಪಿಸಬೇಕು. 2004 ಮತ್ತು 2005ರಲ್ಲಿ 77 ಜನ ಜೀತವಿಮುಕ್ತಿಗೊಂಡಿದ್ದು. ಇವರಲ್ಲಿ 62 ಜನರಿಗೆ ಬಿಡುಗಡೆ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಜೀತಪದ್ಧತಿ ಸಂಪೂರ್ಣವಾಗಿ ನಿಮೂರ್ಲನೆಯಾಗುವವರೆಗೂ ಒಕ್ಕೂಟದ ವತಿಯಿಂದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಜೀವಿಕ ರಾಜ್ಯ ಘಟಕದ ಅಧ್ಯಕ್ಷ ಮುತ್ತಯ್ಯ ಎಚ್ಚರಿಕೆ ನೀಡಿದರು.
ಜೀವಿಕ ಸಂಚಾಲಕರಾದ ಲೋಕೇಶ್, ಶಿವು, ದುರ್ಗೇಶ್, ರಾಜಣ್ಣ, ಬಸವರಾಜು, ಸೌಮ್ಯ, ಕೆಂಪಯ್ಯ, ಮುಖಂಡರಾದ ದೊರೆಸ್ವಾಮಿ, ಶಿವರಾಜು, ಅಂಬರೀಷ್, ಮಾದೇಶ್, ಶಂಕರ್, ರವಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

***

Note from Kannada.Club : This story has been auto-generated from a syndicated feed from http://vijayavani.net/%e0%b2%a4%e0%b2%be%e0%b2%b2%e0%b3%82%e0%b2%95%e0%b3%81-%e0%b2%95%e0%b2%9a%e0%b3%87%e0%b2%b0%e0%b2%bf%e0%b2%97%e0%b3%86-%e0%b2%ae%e0%b3%81%e0%b2%a4%e0%b3%8d%e0%b2%a4%e0%b2%bf%e0%b2%97%e0%b3%86/