ಟೋಲ್ ಸಂಗ್ರಹ ನಿಯಮ ಬದಲಾವಣೆ ಅಸಾಧ್ಯ

ವಿಜಯವಾಣಿ ಸುದ್ದಿಜಾಲ ಹಾಸನ
ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸುವ ಆದೇಶ ಬಿಜೆಪಿ ಸರ್ಕಾರದ ಅವಧಿಯದ್ದಾಗಿದ್ದು, ಆಗಿನ ಒಪ್ಪಂದದ ಪ್ರಕಾರವಾಗಿ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಸುಂಕ ಪಡೆಯುವ ನಿಯಮವನ್ನು ಈಗ ಬದಲಿಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ನಿರ್ಧಾರ ಮಾಡಲಾಗಿತ್ತು. ಆಗಿನ ಆದೇಶದಡಿಯಲ್ಲಿನ ಒಪ್ಪಂದದ ಪ್ರಕಾರ ರಸ್ತೆಗಳು ನಿರ್ಮಾಣವಾಗಿವೆ. ಹೀಗಾಗಿ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಗುರುವಾರ ಸುದ್ದಿಗಾರರಿಗೆ ಹೇಳಿದರು.
ಹಾಸನ ಉತ್ತಮ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ಎ.ಮಂಜು ಅವರು ತಮ್ಮ ಕುಟುಂಬದ ವಿರುದ್ಧ ಮಾಡಿರುವ ಭೂ ಕಬಳಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಯಾರಾದರೂ ಒಳ್ಳೆಯವರು ಆರೋಪಿಸಿದರೆ ಅದಕ್ಕೆ ಪ್ರತಿಕ್ರಿಯಿಸಬೇಕು. ಇಂತಹವರಿಗೆ ರಿಯಾಕ್ಟ್ ನೀಡಬಾರದು. ನಾನು ಅಥವಾ ನನ್ನ ಮಗ ಅಕ್ರಮವಾಗಿ ಭೂಮಿ ಪಡೆದಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಂಡು ಅವರ ಹೆಸರಿಗೆ ಬರೆಸಿಕೊಳ್ಳಲಿ ಎಂದರು.

ಲಿಫ್ಟ್‌ನಲ್ಲಿ ಸಿಲುಕಿದ ಸಚಿವ:
ಕೆಡಿಪಿ ಸಭೆ ಮುಗಿದ ನಂತರ ಸಭಾಂಗಣದಿಂದ ಹೊರ ಬಂದ ಸಚಿವ ರೇವಣ್ಣ ಹಾಗೂ ಶಾಸಕರು ಕಟ್ಟಡದಿಂದ ಕೆಳಗಿಳಿಯುವಾಗ ಲಿಫ್ಟ್ ಮೂಲಕ ಕೆಳ ಅಂತಸ್ತು ತಲುಪಿದರು. ಆದರೆ ಲಿಫ್ಟ್ ಬಾಗಿಲು ತೆರೆದುಕೊಳ್ಳದೆ ನೆಲ ಮಟ್ಟಕ್ಕಿಂತಲೂ ಎರಡು ಅಡಿ ಕೆಳಗೆ ಹೋಯಿತು. ಹೀಗಾಗಿ ಕೆಲ ನಿಮಿಷ ಸಚಿವರು ಲಿಫ್ಟ್ ಒಳಗೆ ಕಳೆಯುವಂತಾಯಿತು.
ತಕ್ಷಣವೇ ಹೊರಗಿದ್ದ ಲಿಫ್ಟ್ ಆಪರೇಟರ್ ಕೀ ಬಳಸಿ ಲಿಫ್ಟ್ ಬಾಗಿಲು ತೆರೆದು ಕೈ ಹಿಡಿದು ಸಚಿವರನ್ನು ಮೇಲೆತ್ತಿ ಹೊರ ಕಳುಹಿಸಿದರು. ಸಚಿವರು ಒಳಗೆ ಸಿಲುಕಿ ಹಾಕಿಕೊಂಡ ವಿಷಯ ಕೇಳಿ ಸಮೀಪದಲ್ಲಿದ್ದ ಅಧಿಕಾರಿಗಳು ಲಿಫ್ಟ್ ಎದುರು ಜಮಾಯಿಸಿದ್ದರು. ನಗರ ಠಾಣೆ ಪಿಎಸ್‌ಐ ಪ್ರಮೋದ್ ಎಲ್ಲರನ್ನೂ ಅಲ್ಲಿಂದ ದೂರ ಕಳುಹಿಸಿ ಬಾಗಿಲು ತೆರೆಯಲು ಸಿಬ್ಬಂದಿಗೆ ಅನುವು ಮಾಡಿಕೊಟ್ಟರು.
ಶಾಸಕರಾದ ಸಿ.ಎನ್.ಬಾಲಕೃಷ್ಣ, ಲಿಂಗೇಶ್, ಜಿಪಂ ಪ್ರಭಾರಿ ಸಿಇಒ ಪುಟ್ಟಸ್ವಾಮಿ, ಹಾಮೂಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮುಂತಾದವರು ಸಚಿವರೊಂದಿಗೆ ಲಿಫ್ಟ್‌ನಲ್ಲಿ ಸಿಲುಕಿದ್ದರು.
ಆರು ಜನರ ಸಾಮರ್ಥ್ಯದ ಲಿಫ್ಟ್‌ನಲ್ಲಿ ಎಂಟು ಜನರು ಏರಿದ್ದರಿಂದ ಸಮಸ್ಯೆಯಾಗಿತ್ತು. ಕೆಲ ತಿಂಗಳ ಹಿಂದೆ ಸಭೆಗೆ ಆಗಮಿಸುತ್ತಿದ್ದ ವೇಳೆಯಲ್ಲಿಯೂ ಸಚಿವ ರೇವಣ್ಣ ಅವರಿದ್ದ ಲಿಫ್ಟ್ ಓವರ್‌ಲೋಡ್ ಆಗಿ ಕೆಲ ನಿಮಿಷ ಒಳಗೆ ಸಿಲುಕಿದ್ದರು.

***

Note from Kannada.Club : This story has been auto-generated from a syndicated feed from http://vijayavani.net/61-5000-saciva-ec-%e1%b8%8ci-reva%e1%b9%87%e1%b9%87a-he%e1%b8%b7ika-%e1%b9%adol-sa%e1%b9%85graha-adesa-bijepi-sarkaraddu-minister-hd-ravanna-said-toll-collection-order-bjp-government/