ಜಡೆ ಮಠಕ್ಕೆ ನಾಗಾಸಾಧುಗಳ ಆಗಮನ

ಸೊರಬ: ಜಡೆ ಸಂಸ್ಥಾನ ಮಠಕ್ಕೆ ಶುಕ್ರವಾರ ಆಗಮಿಸಿದ್ದ ನಾಗಾಸಾಧುಗಳು 2019ರ ಜನವರಿಯಲ್ಲಿ ಉತ್ತರಾಖಂಡದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಡಾ. ಶ್ರೀ ಮಹಾಂತ ಸ್ವಾಮೀಜಿಯನ್ನು ಆಹ್ವಾನಿಸಿದರು.

ಹರಿದ್ವಾರದ ಶಿಥಲ ಮಠದ ಸಂತ ಅಘೊರಿ ಶ್ರೀ ಮಹಾಂತ ಸ್ವಾಮಿ ಅಮೃತಗಿರಿ ಮಾತನಾಡಿ, ತಾಯಿ ತನ್ನ ಮಕ್ಕಳನ್ನು ಹೇಗೆ ಲಾಲನೆ, ಪಾಲನೆ ಮಾಡುತ್ತಾಳೋ ಹಾಗೆ ಮಠಗಳು, ಆಶ್ರಮಗಳು ಆಶ್ರಯ ಅರಸಿ ಬಂದ ಸಾಧು ಸಂತರನ್ನು ಬರಮಾಡಿಕೊಂಡು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮುಂದಿನ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಲು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಜಡೆ ಸಂಸ್ಥಾನಮಠದ ಡಾ. ಮಹಾಂತ ಸ್ವಾಮೀಜಿ ಅಭಿನಂದನಾರ್ಹರಾಗಿದ್ದಾರೆ ಎಂದು ಶ್ಲಾಘಿಸಿದರು.

ಧರ್ಮಸ್ಥಳದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಧರ್ಮ ಸಂಸದ್ ಸಭೆ ವೈಶಿಷ್ಟವಾಗಿ ನಡೆದಿದೆ. ಲೋಕ ಕಲ್ಯಾಣಾರ್ಥವಾಗಿ ರಾಷ್ಟ್ರದ ಹಿತವನ್ನು ಪರಮ ಹಿತವೆಂದು ಭಾವಿಸಿ ರಾಷ್ಟ್ರೀಯ ಧರ್ಮಸಭೆ ನಡೆಸಲಾಗಿದೆ ಎಂದರು.

ಸಂತ ಅಘೊರಿಗಳಾದ ಸಂಜಯಗಿರಿ, ಸ್ವಾಮಿದತ್ತಗಿರಿ, ಸ್ವಾಮಿ ಸೋನಾಗಿರಿ ಉಪಸ್ಥಿತರಿದ್ದರು.

***

Note from Kannada.Club : This story has been auto-generated from a syndicated feed from http://vijayavani.net/nagasadhu-kumbh-mela-uttarakhand-dharmasthala/