ಛಲಬಿಡದ ಕದನ ಕಲಿ ಜೋಗೇಶ್​ಚಂದ್ರ ಚಟರ್ಜಿ

| ಡಾ. ಬಾಬು ಕೃಷ್ಣಮೂರ್ತಿ

ಜೋಗೇಶನ ಜತೆಗೆ ಶಿಕ್ಷಿತರಾಗಿದ್ದ ಮೂವರು ಕ್ರಾಂತಿಕಾರಿಗಳು ಪ್ರೆಸಿಡೆನ್ಸಿ ಜೈಲಿನ ಕತ್ತಲ ಸೆಲ್ಲಿನ ಜೀವನ ಸಹಿಸಲಾಗದೆ ಹುಚ್ಚರಾದರು. ಈ ಘೊರ ಪರಿಸ್ಥಿತಿಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಮಾಡಿ ಗೆದ್ದು ರಾಜಷಾಹಿ ಜೈಲಿಗೆ ವರ್ಗಾವಣೆ ಮಾಡಿಸಿಕೊಂಡ ಜೋಗೇಶ್ ಅಲ್ಲಿ ಹಲವಾರು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿಕೊಂಡ. 

ವಾರಾಣಸಿಯ ಕ್ರಾಂತಿಕಾರಿ ನಾಯಕ ಶಚೀಂದ್ರನಾಥ ಸನ್ಯಾಲನ ಜೀವನದಂತೆಯೇ ಏಳುಬೀಳುಗಳೊಂದಿಗೆ ಸಾಗಿದ ಜೀವನ ಅವನ ಆತ್ಮೀಯ ಸಂಗಾತಿ ಜೋಗೇಶ್​ಚಂದ್ರ ಚಟರ್ಜಿಯದು. ತನ್ನ ಜೀವನದ ಕಾಲು ಶತಮಾನದಷ್ಟು ಕಾಲವನ್ನು ಕಾರಾಗೃಹದ ಕತ್ತಲಕೋಣೆಗಳಲ್ಲಿ ಕಳೆದ ಪ್ರಭಾವಳಿ ಚಟರ್ಜಿಯದು. ಅವನು ಹುಟ್ಟಿದ್ದು 1895ರಲ್ಲಿ. ಈಗಿನ ಬಾಂಗ್ಲಾದೇಶ (ಆಗ ಪೂರ್ವ ಬಂಗಾಳ)ದ ಢಾಕಾ ಜಿಲ್ಲೆಯ ಗವಾಡಿ ಎಂಬ ಹಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಬಿಪಿನ್​ಚಂದ್ರ ಚಟರ್ಜಿ ಜೋಗೇಶನ ತಂದೆ.

ಸ್ವದೇಶಿ, ಸ್ವಾಭಿಮಾನಿ ವಿಚಾರಗಳನ್ನು ಕೇಳಿ ಬಾಲ್ಯವನ್ನು ಕಳೆದವನು ಜೋಗೇಶ್​ಚಂದ್ರ. ರಷ್ಯಾದಂಥ ಬೃಹತ್ ಬಲಾಢ್ಯ ರಾಷ್ಟ್ರವನ್ನು ಜಪಾನ್ ಆಗ ನಡೆದ ಯುದ್ಧದಲ್ಲಿ ಸೋಲಿಸಿದ ಸಂಗತಿಯನ್ನು ಅವನ ಹಿರಿಯ ನೆಂಟನೊಬ್ಬ ಹೇಳಿದಾಗಲೇ ಪುಟ್ಟ ಹುಡುಗ ಜೋಗೇಶನ ಚಿಂತನೆಗಳಿಗೆ ಇಂಬು ದೊರೆಯಿತಂತೆ. ಅವನಿಗೆ ಹತ್ತು ವರ್ಷವಾಗುವ ವೇಳೆಗೆ ಬಂಗಾಳದಲ್ಲಿ ಸ್ವದೇಶಿ ಚಳವಳಿ ಗರಿಗೆದರಿತ್ತು. ‘ವಂದೇಮಾತರಂ’ ಗೀತೆ ಬಂಗಾಳಿಗಳ ದೇಶಪ್ರೇಮದ ಭಾವನೆಗಳನ್ನು ಬಡಿದೆಬ್ಬಿಸಿತ್ತು. 1905ರಲ್ಲಿ ವೈಸ್ರಾಯ್ ಕರ್ಜನ್ ಬಂಗಾಳವನ್ನು ವಿಭಜಿಸಿ ಬಂಗಾಳಿಗಳ ಹಾಗೂ ಬಹುಪಾಲು ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದ್ದ. ಈ ಪ್ರವಾಹದಲ್ಲಿ ಸಿಲುಕಿದ ಕೋಮಲ ಮನಸ್ಸಿನ ಬಾಲಕ ಜೋಗೇಶ್ ದೇಶಪ್ರೇಮ ಹಾಗೂ ಕ್ರಾಂತಿಕಾರಿ ವಿಚಾರಗಳನ್ನು ಸ್ವೀಕರಿಸಿ ಅದರ ದ್ಯೋತಕವಾಗಿ ಹತ್ತು ವರ್ಷದವನಿದ್ದಾಗಲೇ ಖಾದಿಯ ಬಟ್ಟೆಗಳನ್ನು ಧರಿಸಲು ಆರಂಭಿಸಿದ.

1908ರಲ್ಲಿ ಅವನು ದೌಲತ್ ಖಾನಾ ಎಂಬ ಊರಿನ ಶಾಲೆಯಲ್ಲಿ ಓದುತ್ತಿದ್ದ. ಬುದ್ಧಿವಂತ ವಿದ್ಯಾರ್ಥಿ. ಆಗಲೇ ಮುಝುಫ್ಪರಪುರದಲ್ಲಿ ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಮೊಟ್ಟಮೊದಲ ಬಾಂಬ್ ಸ್ಪೋಟಿಸಿ ದೇಶವನ್ನು ನಿದ್ರೆಯಿಂದೆಬ್ಬಿಸಿದರು. ಹುತಾತ್ಮರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದರು. ಪರಿಣಾಮ, ಹನ್ನೆರಡು ವರ್ಷದ ಜೋಗೇಶನನ್ನು ಕ್ರಾಂತಿಮಾರ್ಗ ಕೈ ಬೀಸಿ ಕರೆಯಿತು.

ಅಮಾನುಷ ಹಿಂಸೆ: ಆಗ ಅನುಶೀಲನ ಸಮಿತಿಯ ಢಾಕಾ ವಿಭಾಗದಲ್ಲಿ ಪುಲಿನ್ ಬಿಹಾರಿ ದಾಸ್, ವಿವೇಕಾನಂದರ ನಿಷ್ಠ ಅನುಯಾಯಿ ಹೇಮಚಂದ್ರ ಘೊಷ್ ಅತ್ಯುತ್ತಮವಾಗಿ ಸಮಿತಿಯನ್ನು ಸಂಘಟಿಸುತ್ತಿದ್ದರು. ಇವನೂ ಅದರ ಸದಸ್ಯನಾಗಿ ಸೇರಿ ಪ್ರತಿಜ್ಞಾಬದ್ಧನಾದ. ಅವನಿಗೆ ಇಪ್ಪತ್ತು ವರ್ಷವಾಗುವ ವೇಳೆಗೆ ಪೂರ್ಣಪ್ರಮಾಣದ ಕ್ರಾಂತಿಕಾರಿಯಾಗಿದ್ದ! ಅದಕ್ಕೆ ಪುಷ್ಟಿ ನೀಡಿದ್ದು ಅವನ ಸೋದರಮಾವ ವಿಶ್ವೇಶ್ವರ ಚಟರ್ಜಿ. ಜೋಗೇಶ್ ಹಾಗೂ ಅನುಶೀಲನ ಸಮಿತಿಯ ನಂಟು ಬಲಗೊಂಡು ಪೊಲೀಸರ ದೃಷ್ಟಿಗೆ ಅವನು ಬೀಳುವಂತಾಯಿತು. ಜೋಗೇಶನ ಬಳಿ ಬಾಂಬ್ ಹಾಗೂ ಇತರ ಶಸ್ತ್ರಗಳಿವೆಯೆಂಬ ಸುಳಿವು ಪಡೆದ ಪೊಲೀಸರು ಅವನನ್ನು ಹಿಡಿಯಲು ಅದೊಂದು ಮುಂಜಾನೆ ಮನೆಯ ಮೇಲೆ ದಾಳಿ ಮಾಡಿದರು. ಪೊಲೀಸರ ಕಣ್ಣಿಗೆ ಮಣ್ಣೆರಚಿ ಮನೆಯ ಹಿಂಬಾಗಿಲಿನಿಂದ ಬರಿ ಮೈಯಲ್ಲೇ ಹೊರಕ್ಕೆ ಬಂದ ಜೋಗೇಶ್ 13 ಮೈಲಿ ಓಡಿ ಅಲ್ಲಿ ಹಳ್ಳಿಯೊಂದರಲ್ಲಿ ಕ್ರಾಂತಿಹಿತೈಷಿಯ ಮನೆಯಲ್ಲಿ ಕೆಲಕಾಲ ಆಶ್ರಯ ಪಡೆದು ಅನಂತರ ಕೊಲ್ಕತಾಗೆ ಹೋದ.

ಕೊಲ್ಕತಾದಲ್ಲಿ ಭೂಗತನಾಗಿ ಅನುಶೀಲನ ಸಮಿತಿಯ ಕೆಲಸದಲ್ಲಿ ತೊಡಗಿದ್ದಾಗ ಬೆಂಬಿಡದ ಭೂತಗಳಂತೆ ಅಲ್ಲಿಗೂ ಬಂದ ಪೊಲೀಸರು ಅವನ ಜಾಡನ್ನು ಹಿಡಿದು 1916 ಅಕ್ಟೋಬರ್ ತಿಂಗಳಿನಲ್ಲೊಂದು ರಾತ್ರಿ ಅವನು ಅಡಗಿದ್ದ ಜಾಗದಿಂದ ಬಂಧಿಸಿ ಕರೆದೊಯ್ದರು. ಜೋಗೇಶನ ಬಾಯಿಯಿಂದ ಕ್ರಾಂತಿ ಚಟುವಟಿಕೆಗಳ ರಹಸ್ಯಗಳನ್ನು ಬಿಡಿಸಲು ಪೊಲೀಸರು ಮಾಡಿದ ಘೊರ ದೌರ್ಜನ್ಯಗಳಿಗೆ ಕೊನೆ ಮೊದಲಿರಲಿಲ್ಲ. ಸೆಲ್ಲಿನಲ್ಲಿ ಹಾಕಿ ಲಾಠಿ ಏಟು ನೀಡಿದರು. ಮನೋಜ್ ಪಾಲ್ ಎಂಬ ಪೊಲೀಸ್ ಇನ್ಸ್​ಪೆಕ್ಟರ್ ಜೋಗೇಶನ ಬಾಯಲ್ಲಿ ಮೂತ್ರ ವಿಸರ್ಜನೆ ಮಾಡಿದ. ಸಾಲದೆಂಬಂತೆ ಮಲದಲ್ಲಿ ಅವನ ಮುಖವನ್ನು ಅದ್ದಿದ. ಲಾಠಿ ಪೆಟ್ಟುಗಳಿಂದ ಮೈ ಎಲ್ಲ ಗಾಯಗಳಾಗಿ ರಕ್ತ ಒಸರುತ್ತಿದ್ದರೂ ಅವನ ಬಾಯಿಂದ ಸಂಸ್ಥೆಗೆ ಸಂಬಂಧಿಸಿದ ಒಂದೇ ಒಂದು ಮಾಹಿತಿಯೂ ಅವರಿಗೆ ದೊರೆಯಲಿಲ್ಲ. ಕೊನೆಗೆ ಸೋಲೊಪ್ಪಿಕೊಂಡ ಪೊಲೀಸರು ಅವನನ್ನು ಕೋರ್ಟಿನಲ್ಲಿ ಹಾಜರುಪಡಿಸಿದಾಗ ಅವನಿಗೆ 4 ವರ್ಷಗಳ ಜೈಲು ಶಿಕ್ಷೆಯ ತೀರ್ಪಾಯಿತು. ಕೊಲ್ಕತಾದ ಪ್ರೆಸಿಡೆನ್ಸಿ ಜೈಲಿಗೆ ಅವನನ್ನು ದೂಡಲಾಯಿತು.

ಪ್ರೆಸಿಡೆನ್ಸಿ ಜೈಲಿನಲ್ಲಿ ತೀರ ಕತ್ತಲು ತುಂಬಿದ್ದ ಸೆಲ್ಲುಗಳು. ಅಲ್ಲಿ ಏಕಾಕಿ ಜೀವನ. ಜೋಗೇಶನ ಜತೆಗೆ ಶಿಕ್ಷಿತರಾಗಿದ್ದ ಮೂವರು ಕ್ರಾಂತಿಕಾರಿಗಳು ಕತ್ತಲ ಸೆಲ್ಲಿನ ಜೀವನ ಸಹಿಸಲಾಗದೆ ಹುಚ್ಚರಾದರು. ಈ ಘೊರ ಪರಿಸ್ಥಿತಿಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಮಾಡಿ ಗೆದ್ದು ರಾಜಷಾಹಿ ಜೈಲಿಗೆ ವರ್ಗಾವಣೆ ಮಾಡಿಸಿಕೊಂಡ ಜೋಗೇಶ ಅಲ್ಲಿ ಹಲವಾರು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿದ.

ಪುನಶ್ಚ ಹರಿ ಓಂ: 1920ರ ಸೆ.1ರಂದು ಜೈಲಿನಿಂದ ಹೊರ ಬಂದ. ಮನೆಯ ಪರಿಸ್ಥಿತಿ ಶೋಚನೀಯ. ತಂದೆಯ ವ್ಯಾಪಾರದಲ್ಲಿ ನಷ್ಟವಾಗಿ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. 25 ವರ್ಷದ ಜೋಗೇಶನಿಗೆ ಕೆಲಸಕ್ಕೆ ಸೇರಿ ಸಂಪಾದಿಸುವಂತೆ ಮನೆಯವರ, ಬಂಧುವರ್ಗದವರ ಅಪಾರ ಒತ್ತಡ. ಆದರೆ ಅವನು ಅನುಶೀಲನ ಸಮಿತಿ ಸೇರಿದಾಗಲೇ ಸ್ವಂತಕ್ಕಾಗಿ ದುಡಿಯದೆ ದುಡಿಯುವುದೆಲ್ಲ ದೇಶಕ್ಕಾಗಿಯೇ ಎಂಬ ಪ್ರತಿಜ್ಞೆ ಸ್ವೀಕರಿಸಿದ್ದರಿಂದ ಅವರೆಲ್ಲರ ಒತ್ತಡವನ್ನು ಬದಿಗಿರಿಸಿ ಕ್ರಾಂತಿಕಾರ್ಯ ಮುಂದುವರಿಸಿದ.

ಉತ್ತರ ಭಾರತದ ವಾರಾಣಸಿಯನ್ನು ಕೇಂದ್ರ ಮಾಡಿಕೊಂಡು ಕ್ರಾಂತಿ ಸಂಘಟನಾ ಕಾರ್ಯದಲ್ಲಿ ತೊಡಗಿದ್ದ ಶಚೀಂದ್ರನಾಥ ಸನ್ಯಾಲ್​ಗೆ ಸಹಕಾರಿಗಳು ಬೇಕೆಂದು ಢಾಕಾ ಅನುಶೀಲನ ಸಮಿತಿಗೆ ಸಮಾಚಾರ ತಲಪಿದಾಗ ಸಮಿತಿ ಜೋಗೇಶನನ್ನು ಅಲ್ಲಿಗೆ ಕಳಿಸಿತು. ವಾರಾಣಸಿಗೆ ಬಂದು ಸನ್ಯಾಲನನ್ನು ಭೇಟಿ ಮಾಡಿದ. ಸಮಾನ ಮನಸ್ಕರೂ ಸಮಾನ ಆಸಕ್ತರೂ ಆದ ಇಬ್ಬರು ಶ್ರೇಷ್ಠ ಕ್ರಾಂತಿಕಾರಿಗಳ ಅಪೂರ್ವ ಮಿಲನ ಅದಾಗಿತ್ತು.

ಆಗ ಬಿಡಿಬಿಡಿಯಾಗಿ ಹಲವು ಕ್ರಾಂತಿ ಸಂಘಟನೆಗಳು ಕೆಲಸ ಮಾಡುತ್ತಿದ್ದವು. ಅವುಗಳನ್ನೆಲ್ಲ ಏಕಸೂತ್ರದಲ್ಲಿ ತರುವುದರಿಂದ ಹೋರಾಟಕ್ಕೆ ಹೆಚ್ಚು ಸಹಾಯಕಾರಿ ಎಂದು ಯೋಚಿಸಿದ ಶಚೀಂದ್ರ ಮತ್ತು ಜೋಗೇಶ್ ಅದರ ಮುಂದಾಳತ್ವ ವಹಿಸಿದರು. ‘ಹಿಂದೂಸ್ಥಾನ್ ರಿಪಬ್ಲಿಕನ್ ಆರ್ವಿು’ ಹೆಸರಿನಲ್ಲಿ ಒಂದು ಸಂಘಟನೆ ಹುಟ್ಟಿಕೊಂಡಿತು. ಆಗ ಅದರಲ್ಲಿ ರಾಮಪ್ರಸಾದ್ ಬಿಸ್ಮಿಲ್, ಚಂದ್ರಶೇಖರ ಆಜಾದ್, ಮನ್ಮಥ್​ನಾಥ್ ಗುಪ್ತ, ರಾಜೇಂದ್ರ ಲಾಹಿರಿ ಮುಂತಾದ ಚಿನ್ನದಂಥ ಯುವಕರಿದ್ದರು. ಮನ್ಮಥನಾಥ್ ಗುಪ್ತನ ಸಂಪಾದಕತ್ವದಲ್ಲಿ ‘ಅಗ್ರದೂತ್’ ಎಂಬ ಪತ್ರಿಕೆಯನ್ನು ಹೊರಡಿಸಲಾಯಿತು. ರಾಮಪ್ರಸಾದ್ ಬಿಸ್ಮಿಲ್ ಉತ್ತರ ಭಾರತದ ಪ್ರಮುಖ ಸಂಘಟಕನಾದ.

1924ರಲ್ಲಿ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ವಿುಯ ಸಭೆಯ ಅನಂತರ ಬಹುಮುಖ್ಯವಾದ ಕಾಗದಪತ್ರಗಳನ್ನು ಬಳಿ ಇರಿಸಿಕೊಂಡಿದ್ದ ಜೋಗೇಶ್ ಅ.18ರಂದು ಕಲ್ಕತ್ತೆಯ ಹೌರಾ ಎಂಬಲ್ಲಿ ರೈಲಿನಿಂದ ಇಳಿದಾಗ ಹಿಂಬಾಲಿಸಿ ಬಂದ ಪೊಲೀಸರ ಬಂಧನಕ್ಕೆ ಒಳಗಾದ. ಪತ್ರಗಳೆಲ್ಲ ಪೊಲೀಸರ ವಶವಾಯಿತು. ಪತ್ರಗಳಲ್ಲಿ ಬಹು ಅಪಾಯಕಾರಿ ಮಾಹಿತಿಗಳಿದ್ದರೂ ಅವುಗಳ ತಲೆಬಾಲ ಅರ್ಥವಾಗಲಿಲ್ಲ ಪೊಲೀಸರಿಗೆ. ಆದರೆ ಹಿಂದೂಸ್ಥಾನ ರಿಪಬ್ಲಿಕನ್ ಆರ್ವಿುಯ ಪ್ರಮುಖ ನಾಯಕ ಅವನೆಂಬುದು ತಿಳಿದು ಅವನನ್ನು ಸೆರೆಗೆ ದೂಡಲಾಯಿತು. ಅದೇ ವೇಳೆ ಶಚೀಂದ್ರನಾಥನೂ ‘ರೆವಲೂಷನರಿ’ ಪತ್ರಕಗಳೊಡನೆ ಸಿಕ್ಕಿಬಿದ್ದು ಸೆರೆಯಾದ.

ಕಾಕೋರಿ ಸರ್ಕಾರಿ ಖಜಾನೆ ಲೂಟಿ ಪ್ರಕರಣದಲ್ಲಿ ಬಂಧನಗಳಾಗಿ ಅವರ ಪೈಕಿ 28 ಮಂದಿಯನ್ನು ಆರೋಪಿಗಳನ್ನಾಗಿ ದಾಖಲಿಸಿ ಮಿಕ್ಕವರನ್ನು ನ್ಯಾಯಾಲಯ ಬಿಡುಗಡೆ ಮಾಡಿತು. ಶಚೀಂದ್ರ ಮತ್ತು ಜೋಗೇಶ್​ಚಂದ್ರರು ಆ ವೇಳೆಗೆ ಸೆರೆವಾಸ ಅನುಭವಿಸುತ್ತ ಸರ್ಕಾರದ ವಶದಲ್ಲೇ ಇದ್ದರೂ ಅವರಿಬ್ಬರನ್ನು ಎಚ್.ಆರ್.ಎ. ನಾಯಕರೆಂದು ತೀರ್ವನಿಸಿ ಅವರಿಗೂ ಶಿಕ್ಷೆ ವಿಧಿಸಲಾಯಿತು. ಬಿಸ್ಮಿಲ್, ಅಸ್ಪಾಕ್, ರೋಶನ್ ಮತ್ತು ಲಾಹಿರಿಗೆ ಮರಣದಂಡನೆ, ಶಚೀಂದ್ರನಿಗೆ ಜೀವಾವಧಿ ಕರಿನೀರು ಶಿಕ್ಷೆ, ಜೋಗೇಶ್​ನಿಗೆ 7 ವರ್ಷಗಳ ಕಠಿಣಶಿಕ್ಷೆ ವಿಧಿಸಲಾಯಿತು.

ಸರ್ಕಾರದ ಈ ಪೆಟ್ಟಿನಿಂದ ಕ್ರಾಂತಿಕಾರಿಗಳ ಸಂಘಟನೆ ವಿಘಟಿತವಾಯಿತು. ಹೊಸಪೀಳಿಗೆಯ ಕ್ರಾಂತಿಕಾರಿಗಳು ಮುಂಚೂಣಿಗೆ ಬಂದರು. ಹೊಸಪೀಳಿಗೆಯ ಭಗತ್ ಸಿಂಗ್ ಮುಂತಾದ ಯುವಕರಿಗೆ ಚಂದ್ರಶೇಖರ ಆಜಾದ್ ನಾಯಕನಾದ. ಹೊಸ ಯುವಕರ ಸೇರ್ಪಡೆಯಾಗುತ್ತಿದ್ದಂತೆ ಜೋಗೇಶ್​ನಂಥ ನುರಿತ ಕ್ರಾಂತಿಕಾರಿ ತಮಗೆ ಅವಶ್ಯವೆಂದು ಆಜಾದ್, ಭಗತ್ ಸಿಂಗರು ಭಾವಿಸಿದರು. ಜೋಗೇಶ್​ಚಂದ್ರ ಫತೇಗಢ ಜೈಲಿನಲ್ಲಿದ್ದ. ಅಲ್ಲಿಂದ ಅವನನ್ನು ಆಗ್ರಾ ಜೈಲಿಗೆ ರವಾನಿಸುವ ಸಮಾಚಾರ ತಿಳಿದು ಬಂದು ಮಾರ್ಗ ಮಧ್ಯದಲ್ಲಿ ಅವನನ್ನು ಅಪಹರಿಸುವ ಯೋಜನೆಯನ್ನು ಆಜಾದ್, ಭಗತ್ ಹಮ್ಮಿಕೊಂಡರು. ಜೋಗೇಶ್​ನನ್ನು ಸಂಕೋಲೆಗಳಿಂದ ಭದ್ರವಾಗಿ ಬಂಧಿಸಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಬಂದೋಬಸ್ತ್​ನೊಂದಿಗೆ ಆಗ್ರಾಕ್ಕೆ ಹೋಗುವ ಬಂಡಿಯಲ್ಲಿ ಹತ್ತಿಸಲು ಕಾನ್​ಪುರ ರೈಲುನಿಲ್ದಾಣದಲ್ಲಿ ಕರೆದೊಯ್ಯುತ್ತಿದ್ದರು. ಕ್ರಾಂತಿಕಾರಿಗಳು ಕಾರ್ಯಾಚರಣೆಗೆ ಆಜಾದನ ಸೂಚನೆಗಾಗಿ ಕಟ್ಟೆಚ್ಚರದಿಂದ ಕಾಯುತ್ತಿದ್ದರು.

ಅವರೆಲ್ಲರ ಕಣ್ಮುಂದೆ ಜೋಗೇಶ್ ನಡೆದುಹೋಗಿಬಿಟ್ಟ. ಆದರೆ ಸೂಚನೆ ಬರಲಿಲ್ಲ. ಬದಲಾಗಿ ‘ಕಾರ್ಯಾಚರಣೆ ರದ್ದಾಗಿದೆ’ ಎಂಬ ಸೂಚನೆ ಬಂತು. ಕ್ರಾಂತಿಕಾರಿಗಳೆಲ್ಲ ನಿರಾಶೆಯಿಂದ ಕೈಚೆಲ್ಲಿ ಕುಳಿತರು. ಕಾನ್​ಪುರದಿಂದ ಆಗ್ರಾಕ್ಕೆ ಹಿಂದಿರುಗಿದರು.

ಆಗ್ರಾದಲ್ಲಿ ತಮ್ಮ ರಹಸ್ಯತಾಣ ಸೇರುತ್ತಿದ್ದಂತೆ ಭಗತ್ ಸಿಂಗ್ ತಾಳ್ಮೆ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಅವನು ತನ್ನ 17ನೆಯ ವಯಸ್ಸಿನಲ್ಲಿ ಮನೆ ತೊರೆದು ಬಂದಾಗ ಮೊದಲು ಸ್ವಾಗತಿಸಿದವರ ಪೈಕಿ ಜೋಗೇಶ್ ಮುಖ್ಯನಾಗಿದ್ದ. ಅವನನ್ನು ಬಿಡಿಸುವ ಕೆಲಸವನ್ನು ಹಠಾತ್ತಾಗಿ ರದ್ದುಗೊಳಿಸಿದ ಆಜಾದನ ಮೇಲೆ ಕುಪಿತನಾಗಿ ಅವನನ್ನು ಬೈಯ್ಯಲಾರಂಭಿಸಿದ. ಅವನ ಆಕ್ರೋಶವೆಲ್ಲ ತಣ್ಣಗಾದ ಮೇಲೆ ಆಜಾದ್ ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಪೊಲೀಸರ ಬಂದೋಬಸ್ತು ಹಾಗೂ ಅವರ ಸಂಖ್ಯೆ ಬಹಳ ಹೆಚ್ಚಿದ್ದು ಕ್ರಾಂತಿಕಾರಿಗಳ ಸಂಖ್ಯೆ ಅತಿ ಕಡಮೆ ಇದ್ದುದರಿಂದ ಕಾರ್ಯಾಚರಣೆ ವಿಫಲವಾಗುತ್ತಿತ್ತೆಂದೂ ಕೆಲವರು ಕ್ರಾಂತಿಕಾರಿಗಳು ಬಲಿದಾನವಾಗುತ್ತಿತ್ತೆಂದೂ ವಿವರಿಸಿದ ಮೇಲೆ ಭಗತ್​ಗೆ ತಪ್ಪಿನ ಅರಿವುಂಟಾಗಿ ಆಜಾದನ ಕ್ಷಮೆ ಬೇಡಿದ.

ಹುಟ್ಟು ಹೋರಾಟಗಾರ: ಜೋಗೇಶ್​ಚಂದ್ರನನ್ನು ಆಗ್ರಾದಿಂದ ಲಖನೌ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿರುವಾಗಲೇ, ಆಜಾದ್ ಹುತಾತ್ಮನಾದ ಸುದ್ದಿ ಮತ್ತು ಭಗತ್ ಸಿಂಗ್, ರಾಜಗುರು, ಸುಖದೇವ್ ಗಲ್ಲಿಗೇರಿದ ಸುದ್ದಿ ತಿಳಿದು ಅವನ ಮನಸ್ಸು ಖಿನ್ನವಾಯಿತು. ಆದರೆ ಜೈಲಿನಲ್ಲಿ ಏನೂ ಮಾಡಲಾರದವನಾಗಿದ್ದ.

ಜೈಲಿನಲ್ಲಿ ರಾಜಕೀಯ ಕೈದಿಗಳ ಪರಿಸ್ಥಿತಿಯನ್ನು ಸುಧಾರಿಸುವಂತೆ ಒತ್ತಾಯಿಸಿ ಜೋಗೇಶ್ ಉಪವಾಸ ಸತ್ಯಾಗ್ರಹ ಶುರುಮಾಡಿದ. 146 ಪೌಂಡ್ ತೂಕದ ಅವನು 76 ಪೌಂಡ್​ಗಳಿಗೆ ಇಳಿದು ಅಸ್ಥಿಪಂಜರದಂತಾದ. ಅವನ ಉಪವಾಸ ಸತ್ಯಾಗ್ರಹ ಮುರಿಯಲು ಜೈಲಿನ ಸಿಬ್ಬಂದಿ ಅಮಾನುಷ ರೀತಿಯಲ್ಲಿ ನಡೆದುಕೊಂಡರು. ಆದರೆ ಅವನ ದೃಢಸಂಕಲ್ಪ ವಿಚಲಿತವಾಗಲಿಲ್ಲ. 142 ದಿವಸಗಳ ಉಪವಾಸದ ಅನಂತರ ಸರ್ಕಾರ ಅವನ ಮಾತನ್ನು ನಡೆಸಿಕೊಡುವುದಾಗಿ ಸುಳ್ಳು ಭರವಸೆ ನೀಡಿ ಉಪವಾಸ ಮುರಿಯಿತು. ಆ ಮೋಸವನ್ನು ಖಂಡಿಸಿ ಮತ್ತೆ ಉಪವಾಸ ಆರಂಭಿಸಿದ. ಕಾಂಗ್ರೆಸ್ ನಾಯಕರಾಗಿದ್ದ ರಾಜೇಂದ್ರ ಪ್ರಸಾದ್, ರಫಿ ಅಹಮದ್ ಕಿದ್ವಾಯ್ ಮೊದಲಾದವರು ಮಧ್ಯೆ ಪ್ರವೇಶಿಸಿದ್ದರಿಂದ ಅವನ ಬೇಡಿಕೆಗಳಿಗೆ ಸರ್ಕಾರ ಒಪ್ಪಿತು. ಆವೇಳೆಗೆ ಎರಡನೆ ಸಲ ಉಪವಾಸ ಆರಂಭಿಸಿ 111 ದಿನಗಳು ಉರುಳಿದ್ದವು!

1937ರಲ್ಲಿ ಚುನಾವಣೆ ನಡೆದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ರಚನೆಯಾಯಿತು. 1938ರ ಆಗಸ್ಟ್ 24ರಂದು ಶಚೀಂದ್ರನಾಥ್ ಸನ್ಯಾಲ್ ಮತ್ತು ಜೋಗೇಶ್​ಚಂದ್ರರ ಬಿಡುಗಡೆಯೂ ಆಯಿತು. ಆದರೆ ಡಿಸೆಂಬರ್ 2ರಂದು ಮತ್ತೆ ಅವನ ಬಂಧನ ಆಯಿತು. ಜೋಗೇಶ್ ಜೈಲಿನಲ್ಲಿದ್ದಾಗ ಅವನ ತಾಯಿಯ ಸ್ಥಿತಿ ಗಂಭೀರವಾಯಿತು. ಸುಭಾಷ್​ಚಂದ್ರ ಬೋಸರ ಪ್ರಯತ್ನದಿಂದ ಒಂದೆರಡು ದಿನಗಳ ಪರೋಲ್ ಸಿಕ್ಕಿತಾದರೂ ತಾಯಿಯ ಅಂತಿಮಕ್ಷಣಗಳಲ್ಲಿ ಆಕೆಯ ಜತೆಯಲ್ಲಿರಲು ಅವನಿಗೆ ಸರ್ಕಾರ ಅನುಮತಿ ನೀಡಲಿಲ್ಲ!

ಆನಂತರದ ದಿನಗಳಲ್ಲಿ ಅವನ ಬಿಡುಗಡೆ ಆಯಿತು. ಹೊರಕ್ಕೆ ಬಂದ ಜೋಗೇಶ್​ಚಂದ್ರ ಮದುವೆಯಾಗುವ ನಿರ್ಧಾರ ತಳೆದ. ಆಗ ಅವನ ಕಣ್ಣಿಗೆ ಕಂಡವಳೇ ಕ್ರಾಂತಿಕಾರಿ ಭಗವತಿ ಚರಣ್ ಬೋಹ್ರಾನ ವಿಧವಾ ಪತ್ನಿ ದುರ್ಗಾದೇವಿ. 1938ರ ಆಗಸ್ಟ್ 6ರಂದು ಅವರಿಬ್ಬರ ಮದುವೆಯಾಯಿತು. ಆನಂತರ ಕಾಂಗ್ರೆಸ್ ಸೇರಿದ ಜೋಗೇಶ್​ಚಂದ್ರ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 10 ವರ್ಷಗಳ ಸಶ್ರಮ ಶಿಕ್ಷೆಗೆ ಗುರಿಯಾದ. ಆದರೆ 1944ರಲ್ಲಿ ಬಿಡುಗಡೆಯಾದ.

ಭಾರತದ ಸ್ವಾತಂತ್ರ್ಯವನ್ನು ಕಂಡ ಜೋಗೇಶ್​ಚಂದ್ರ ಸ್ವತಂತ್ರ ಭಾರತದಲ್ಲಿ ರಾಜ್ಯಸಭಾ ಸದಸ್ಯನಾಗಿ, ಕಾರ್ವಿುಕ ನಾಯಕನಾಗಿ, ರೈತ ಚಳವಳಿಯ ಮುಂದಾಳಾಗಿ ಕೆಲಸ ಮಾಡಿ 1969ರ ಏಪ್ರಿಲ್ 22ರಂದು 74ನೆಯ ವಯಸ್ಸಿನಲ್ಲಿ ಅಸುನೀಗಿ ಇತಿಹಾಸದ ಪುಟಗಳಲ್ಲಿ ಸೇರಿಹೋದ.

(ಲೇಖಕರು ಹಿರಿಯ ಪತ್ರಕರ್ತರು)

***

Note from Kannada.Club : This story has been auto-generated from a syndicated feed from http://vijayavani.net/horatada-haadi-column-by-dr-babu-krishna-murthy-2/