ಕೌಟುಂಬಿಕ ಮೌಲ್ಯ ಉಳಿಯಲಿ

ಹಿರಿಯರು ಹೇಳಿದಂತೆ ನಡೆಯಬೇಕು, ಅವರ ಮಾರ್ಗದರ್ಶನದಲ್ಲಿ ಜೀವನದ ಸವಾಲುಗಳನ್ನು ಪರಿಹರಿಸಿಕೊಳ್ಳಬೇಕು ಎಂಬ ಪಾರಂಪರಿಕ ಮೌಲ್ಯ ನಮ್ಮ ನೆಲದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಜೀವಂತವಾಗಿದೆ. ಹಿರಿಯರಿಗೆ ಸರಿ-ತಪು್ಪಗಳ ವಿವೇಕ ಇರುವುದರಿಂದ ಮನೆಮಂದಿಗೆಲ್ಲ ಸರಿಯಾದ ಮಾರ್ಗ ತೋರುತ್ತಾರೆ ಎಂಬ ನಂಬಿಕೆ, ಗೌರವ ಇರುವುದರಿಂದಲೇ ಅದೆಷ್ಟೋ ಸಮಸ್ಯೆಗಳು ಸದ್ದಿಲ್ಲದೆ ಪರಿಹಾರವಾಗುತ್ತವೆ. ಆದರೆ, ತಥಾಕಥಿತ ಆಧುನಿಕ ಜೀವನಕ್ರಮ ಧಾವಂತ ಮತ್ತು ಸ್ವಾರ್ಥಮನೋಭಾವ ಹೆಚ್ಚಿಸುತ್ತಿದ್ದು, ಕೌಟುಂಬಿಕ ಮೌಲ್ಯಗಳು ನಶಿಸಿ ಹಿರಿಯರು ಆಸರೆಗೆ ಪರದಾಡಬೇಕಾದಂಥ, ಕಾನೂನು ಹೋರಾಟ ಮಾಡುವಂಥ ಸನ್ನಿವೇಶ ಸೃಷ್ಟಿಯಾಗಿರುವುದು ಹೊಸಪೀಳಿಗೆ ತಾನು ಸಾಗುತ್ತಿರುವ ದಾರಿ ಬದಲಿಸಿಕೊಳ್ಳಬೇಕು ಎನ್ನುವುದರ ದ್ಯೋತಕ. ಇತ್ತೀಚೆಗೆ ನಡೆದ ಒಂದೆರಡು ಘಟನೆಗಳು ಕೌಟುಂಬಿಕ ಮೌಲ್ಯಗಳ ಮರುಸ್ಥಾಪನೆಯ ಅಗತ್ಯವನ್ನು ಒತ್ತಿ ಹೇಳುತ್ತಿವೆ.

ವೃದ್ಧ ಪಾಲಕರಿಗೆ ಜೀವನ ನಿರ್ವಹಣಾ ವೆಚ್ಚ ನೀಡದ ಮಗನನ್ನು ಗುಜರಾತ್ ಕೌಟುಂಬಿಕ ನ್ಯಾಯಾಲಯ ಜೈಲಿಗಟ್ಟಿದೆ. ಮಾಸಿಕ 1800 ರೂ. ಜೀವನ ನಿರ್ವಹಣಾ ವೆಚ್ಚ ನೀಡಬೇಕು ಎಂದು ನ್ಯಾಯಾಲಯ 2013ರಲ್ಲೇ ಆದೇಶಿಸಿದ್ದರೂ ಮಗರಾಯ ಕ್ಯಾರೆ ಅನ್ನದೆ ಕಳೆದ ಐದು ವರ್ಷಗಳಿಂದ ನಯಾಪೈಸೆಯನ್ನೂ ನೀಡಿಲ್ಲ. ಪಾಲಕರು ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯ 45 ವರ್ಷದ ಮಗನಿಗೆ 1545 ದಿನಗಳ ಜೈಲುಶಿಕ್ಷೆ ಹಾಗೂ 49 ಸಾವಿರ ರೂ. ದಂಡ ವಿಧಿಸಿದೆ. ಗಮನಾರ್ಹವಾದದ್ದೆಂದರೆ, ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೊಸ ಕಾನೂನನ್ನು ರೂಪಿಸಿದ್ದು, ಅದರ ಪ್ರಕಾರ ಜೀವನಾಂಶ ನೀಡದ ಮಕ್ಕಳಿಗೆ ಜೈಲುಶಿಕ್ಷೆ ವಿಧಿಸುವ ಅವಕಾಶವಿದೆ. ಈ ಹಿಂದೆ ಜೈಲು ಶಿಕ್ಷೆಯ ಅಂಶ ಕಾನೂನಿನಲ್ಲಿ ಇರಲಿಲ್ಲ.

ಆಸ್ತಿಗಾಗಿ ವ್ಯಕ್ತಿಯೋರ್ವರನ್ನು ಆತನ ಪತ್ನಿ, ಮಕ್ಕಳೇ ಅಪಹರಿಸಿ, ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, ಅಪಹರಣ ಮಾಡುವಾಗ ಮಕ್ಕಳೇ ಅಪ್ಪನ ಮೇಲೆ ರಾಡ್, ಬ್ಯಾಟ್​ನಿಂದ ಹಲ್ಲೆ ಮಾಡಿದ್ದು, ಎರಡು ದಿನಗಳ ಕಾಲ ಕೂಡಿ ಹಾಕಿದ್ದಾರೆ. ಪೊಲೀಸರು ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿ, ನಾಲ್ವರನ್ನು ಬಂಧಿಸಿದ್ದಾರೆ. ಇಂಥ ಘಟನೆಗಳು ಆತಂಕ ಮೂಡಿಸುವ ಜತೆಗೆ ಕೌಟುಂಬಿಕ ಮೌಲ್ಯಗಳ ಅವಸಾನವನ್ನು ಎತ್ತಿ ತೋರಿಸುತ್ತವೆ. ಮಕ್ಕಳನ್ನು ಹೆತ್ತುಹೊತ್ತು, ಅವರಿಗೆ ವಿದ್ಯಾಭ್ಯಾಸ, ವ್ಯಕ್ತಿತ್ವ ನೀಡುವ ಪಾಲಕರನ್ನು ವೃದ್ಧಾಪ್ಯದಲ್ಲಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುವ, ಜೀವನಾಂಶವನ್ನೂ ನೀಡದಂಥ ಕೃತ್ಯಗಳು ಅಮಾನವೀಯ. ಕಾನೂನು ಮತ್ತು ಅದರ ಕ್ರಮಗಳು ಇಂಥವರಲ್ಲಿ ಒಂದಷ್ಟು ಭಯವನ್ನೇನೋ ಮೂಡಿಸಬಹುದು. ಇನ್ನೊಂದೆಡೆ ಸಾರ್ವಜನಿಕ ಜೀವನದಲ್ಲಿ ಕೌಟುಂಬಿಕ ಮೌಲ್ಯಗಳ ಪುನರ್ ಸ್ಥಾಪನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಅರಿವು, ವಿವೇಕ ತುಂಬಬೇಕಿದ್ದು ಸಂಬಂಧ ಮತ್ತು ಅಂತಃಕರಣದ ಶಕ್ತಿಯನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ತಂದೆ-ತಾಯಿ, ಕುಟುಂಬವನ್ನೇ ಸರಿಯಾಗಿ ಪೋಷಿಸದವರು ಸಮಾಜಕ್ಕೆ ಏನು ಕೊಡುಗೆ ನೀಡಿಯಾರು? ಹಾಗಾಗಿ, ಮತ್ತೆ ಸಂಸ್ಕಾರ ಹಾಗೂ ಪಾರಂಪರಿಕ ಮೌಲ್ಯಗಳಿಗೆ ಒತ್ತು ನೀಡಬೇಕಿದ್ದು, ಹಿರಿಯರ ಬಾಳಿಗೆ ನೆಮ್ಮದಿ ಕಲ್ಪಿಸುವ ವಾತಾವರಣ ನಿರ್ವಿುಸಬೇಕಿದೆ. ಇದು ಬರೀ ಕಾನೂನಿನಿಂದ ಸಾಧ್ಯವಿಲ್ಲ, ಸಮಷ್ಟಿಯೂ ತನ್ನ ಹೊಣೆಗಾರಿಕೆಯನ್ನು ಮೆರೆಯಬೇಕಿದೆ. ಆಗ ಮಾತ್ರ, ಆಧುನಿಕ ಕಾಲದ ಇಂಥ ಅಪಸವ್ಯಗಳನ್ನು ತಡೆಯಲು ಸಾಧ್ಯ.

***

Note from Kannada.Club : This story has been auto-generated from a syndicated feed from http://vijayavani.net/vijayavani-editorial-98/