ಕೆರೆಯಂಗಳ, ಗೋಮಾಳದಲ್ಲಿ ಹಸಿರೀಕರಣಕ್ಕೆ ಆದ್ಯತೆ

ಮುದ್ದೇಬಿಹಾಳ: ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೊಷಿಸಿರುವಂತೆ ಹಸಿರು ಕರ್ನಾಟಕ ಯೋಜನೆಯಡಿ ಆಯಾ ಜಿಲ್ಲೆಯಾದ್ಯಂತ ಖಾಲಿ ಇರುವ ಕೆರೆಯಂಗಳ, ಗೋಮಾಳ ಜಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ ಮಿಶ್ರಾ ಹೇಳಿದರು.

ಸಾಮಾಜಿಕ ಅರಣ್ಯ ವಲಯ ಮುದ್ದೇಬಿಹಾಳ 2018-19ನೇ ಸಾಲಿನಲ್ಲಿ ಮಾನಸೂನ್ ಬ್ಲಾಕ್ ನೆಡುತೋಪು ನಿರ್ವಣದ ಬಿದರಕುಂದಿಯ ಮದರಸಾಗೆ ಸೇರಿದ ಸ್ಥಳಕ್ಕೆ ಭೇಟಿ ನೀಡಿ ಹಾಗೂ ಇಲಾಖೆಯಡಿ ಬರುವ ಗಿಡಗಳನ್ನು ನೆಟ್ಟಿರುವುದನ್ನು ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುದ್ದೇಬಿಹಾಳ ವಲಯದಲ್ಲಿ ಗಿಡಗಳನ್ನು ಒಳ್ಳೆಯ ರೀತಿಯಲ್ಲಿ ನೆಟ್ಟಿದ್ದು ಮಳೆಗಾಗಿ ಎದುರು ನೋಡುತ್ತಿದ್ದೇವೆ. ಊರಿಗೊಂದು ತೋಪು, ತಾಲೂಕಿಗೊಂದು ಕಿರು ವರಾಂಡ್, ಜಿಲ್ಲೆಗೊಂದು ಅರಣ್ಯ ಬೆಳೆಸುವ ಗುರಿ ಹೊಂದಿದ್ದೇವೆ. ಈ ವರ್ಷದಿಂದ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡಲಾಗುವುದು. ಮನೆಗೊಂದು ಮರ ಬೆಳೆಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಮುದ್ದೇಬಿಹಾಳ ಪಟ್ಟಣದಲ್ಲಿ 8 ಸಾವಿರ ಸಸಿಗಳನ್ನು ನೆಟ್ಟಿದ್ದು, ತಾಲೂಕಿನಾದ್ಯಂತ 40ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ಅಧಿಕಾರಿ ಸಂತೋಷ ಆಜೂರ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ, ಪುರಸಭೆಯಲ್ಲಿ ಸಸಿಗಳನ್ನು ನೆಡುವ ಗುರಿ ನೀಡಲಾಗಿದೆ. ಬೇವು, ಹೊಂಗೆ, ಅರಳಿ ಗಿಡಗಳನ್ನು ಬೆಳೆಸಲಾಗಿದೆ. ಜನರ ಸಹಕಾರವೂ ಇದೆ. ಖಾಸಗಿ ಸಂಘ-ಸಂಸ್ಥೆಗಳಲ್ಲೂ ಗಿಡ ನೆಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಪಟ್ಟಣದ ಪೊಲೀಸ್ ಠಾಣೆ ಆವರಣ, ಎಂಜಿವಿಸಿ ಕಾಲೇಜು, ವಿಜಯಪುರ ರಸ್ತೆಯಲ್ಲಿರುವ ನ್ಯಾಯವಾದಿ ಎಂ.ಎಸ್. ನಾವದಗಿ ನಿವಾಸದ ಎದುರು ಅರಣ್ಯ ಇಲಾಖೆಯಿಂದ ನೆಟ್ಟಿರುವ ಗಿಡಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ಆರ್​ಎಫ್​ಓ ಎಸ್.ಬಿ. ಪೋಳ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಅರಣ್ಯ ಇಲಾಖ್ಯೆ ವ್ಯಾಪ್ತಿಯಲ್ಲಿ ಎಲ್ಲಿ ಗಿಡಗಳನ್ನು ನೆಡಲಾಗಿದೆ ಎಂಬುದನ್ನು ಸರಿಯಾಗಿ ಮೇಲ್ಚಿಚಾರಣೆ ನಡೆಸುತ್ತಿಲ್ಲ. ಅಧಿಕಾರಿ ದೂರದಲ್ಲಿ ಕೂತು ಆಡಳಿತ ನಡೆಸುತ್ತಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ, ಬೆಳಗಾವಿಯ ಸಿಸಿಎಫ್ ಕರುಣಾಕರನ್ ಮಾತನಾಡಿ, ಆರ್​ಎಫ್​ಒ ಎಸ್.ಬಿ. ಪೋಳ ಕೋರ್ಟ್ ಕೆಲಸ ಮೇಲೆ ಹೋಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯ ಅಧಿಕಾರಿಗಳು ನೀಡಿದ್ದಾರೆ. ಅವರು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದಾದರೆ ಅವರ ವಿರುದ್ಧ ಮಾಹಿತಿ ತರಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಅಲ್ಲದೇ ಅಕ್ರಮವಾಗಿ ಮರಮುಟ್ಟುಗಳನ್ನು ಕಡಿದು ಸಾಗಾಟ ಮಾಡುತ್ತಿದ್ದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುತ್ತದೆ. ಸಾ ಮಿಲ್​ಗಳ ಮೇಲೆ ನಿಗಾ ವಹಿಸಲಾಗಿದೆ. ಹೆಚ್ಚಿನ ಸಾಮರ್ಥ್ಯದ ಗಿಡಗಳ ಬೊಡ್ಡೆಗಳನ್ನು ಕತ್ತರಿಸುವ ಬ್ಲೇಡ್ ಇದ್ದರೆ ಅಂಥ ಸಾ ಮಿಲ್ ಮಾಲೀಕರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು.

ವಿಜಯಪುರದ ಡಿಎಫ್​ಸಿ ಕಲ್ಲೋಳಿಕರ್, ಆರ್​ಎಫ್​ಒ ಸಂತೋಷ ಅಜೂರ, ಡಿವೈಆರ್​ಎಫ್​ಒ ಸುಭಾಷಚಂದ್ರ ಬಿ.ಕೆ., ಎಸಿಎಫ್ ಬಿ.ಪಿ.ಚವಾಣ್ ಇದ್ದರು.

 

***

Note from Kannada.Club : This story has been auto-generated from a syndicated feed from http://vijayavani.net/muddebihal-police-station-tree-bangaluru-forest-conservator-ajay-mishra-inspectionbidarkundi-officers/