ಕಾಂಗ್ರೆಸ್‌ನವರಿಂದ ಬಿಜೆಪಿ ಶಾಸಕರನ್ನು ಟಚ್ ಮಾಡಲು ಸಾಧ್ಯವಿಲ್ಲ…!

ಬೆಂಗಳೂರು: ನಮ್ಮ ಶಾಸಕರು ಸುಭದ್ರವಾಗಿದ್ದು, ಅವರನ್ನು ಟಚ್ ಮಾಡಲೂ ಸಾಧ್ಯವಿಲ್ಲ. ಕಾಂಗ್ರೆಸ್, ಜೆಡಿಎಸ್‌ನವರು ನಮ್ಮ ಶಾಸಕರನ್ನು ಆಪರೇಷನ್ ಮಾಡುವುದಿರಲಿ, ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದನ್ನು ಮೊದಲು ಕಲಿಯಲಿ. ಬಿಜೆಪಿ ಶಾಸಕರನ್ನು ಟಚ್ ಮಾಡಲು ಕಾಂಗ್ರೆಸ್ ನವರಿಂದ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಗುಡುಗಿದ್ದಾರೆ.

ಬಿಜೆಪಿಯವರು ಸರಕಾರ ಬೀಳಿಸುವ ಕೆಲಸ ಮಾಡುತ್ತಿದ್ದು, ಹಣದ ಆಮಿಷ ಮಾಡುತ್ತಿರುವುದು ಗೊತ್ತಿದೆ. ಹಣ ಎಲ್ಲಿ ಸಂಗ್ರಹ ಇದರ ಕಿಂಗ್ ಪಿನ್ ಯಾರು ಎಲ್ಲವೂ ಗೊತ್ತಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಆರ್.ಅಶೋಕ್ ಉತ್ತರಿಸಿದರು.

ಕಾಂಗ್ರೆಸ್‌ನ ಹಾದಿಬೀದಿ ಜಗಳದಿಂದ ಸರಕಾರ ಪತನವಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಸರಕಾರದ ಭಾಗವಾಗಿರುವ ಶಾಸಕರೇ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ರಾದ್ಧಾಂತ ಮಾಡುತ್ತಿದ್ದಾರೆ. ಮೊದಲು ಅವರ ಸರಕಾರದ ಬಾಯಿ ಮುಚ್ಚಿಸಲಿ ನಂತರ ಬಿಜೆಪಿ ವಿರುದ್ಧ ಟೀಕಿಸಲಿ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕುಮಾರಸ್ವಾಮಿ ಅವರು ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಹಿಟ್ ಆ್ಯಂಡ್ ರನ್ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸರಕಾರ ಬೀಳಿಸುವ ಕೆಲಸ ಮಾಡುತ್ತಿಲ್ಲ. ಅವರೇ ಕಚ್ಚಾಡಿಕೊಂಡು ಸರಕಾರ ಬೀಳಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಅವರ ಬಾಯಿ ಮುಚ್ಚಿಸಿ, ನಮ್ಮ ಬಾಯಿ ಮುಚ್ಚಿಸಲು ಯತ್ನಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವತ್ತೂ ಸುಭದ್ರವಾಗಿದೆ ಎಂದು ಹೇಳಿಲ್ಲ. ಇಷ್ಟೆಲ್ಲ ಆದರೂ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಐಟಿ ಇಲ್ಲವೆ ಎಲ್ಲಿ ದೂರು ನೀಡಲಿ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

The post ಕಾಂಗ್ರೆಸ್‌ನವರಿಂದ ಬಿಜೆಪಿ ಶಾಸಕರನ್ನು ಟಚ್ ಮಾಡಲು ಸಾಧ್ಯವಿಲ್ಲ…! appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/ex-dcm-ashok-hits-state-govt/