ಕಲ್ಯಾಣ ಪರ್ವಕ್ಕೆ ಭರ್ಜರಿ ಸಿದ್ಧತೆ

ಬೀದರ್: ಜಿಲ್ಲೆಯ ಬಸವಕಲ್ಯಾಣದ ಬಸವ ಮಹಾ ಮನೆ ಆವರಣದಲ್ಲಿ ಅಕ್ಟೋಬರ್ 27 ರಿಂದ ಮೂರು ದಿನ 17ನೇ ಕಲ್ಯಾಣ ಪರ್ವ ಆಯೋಜಿಸಲಾಗಿದೆ. ಉತ್ಸವ ಅದ್ದೂರಿ ಜತೆಗೆ ಅರ್ಥಪೂರ್ಣ ಆಚರಿಸಲು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಉತ್ಸವ ಸಮಿತಿ ಪ್ರಧಾನ ಸಂಘಟಕ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಮಹಾದೇವಿ ಸಾನ್ನಿಧ್ಯದಲ್ಲಿ ಮೂರು ದಿನ ವಿವಿಧ ಕಾರ್ಯಕ್ರಮ ನಡೆಯಲಿವೆ. ಎಲ್ಲ ಕಾರ್ಯಕ್ರಮ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ನಡೆಯಲಿ ಸ್ವಾಗತ ಸೇರಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಗೌರವಾಧ್ಯಕ್ಷರಾಗಿ ಗಣಿ ಸಚಿವ ರಾಜಶೇಖರ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಾಸಕ ಬಿ.ನಾರಾಯಣರಾವ್ ಅವರನ್ನು ಕಾರ್ಯಾಧ್ಯಕ್ಷ,  ಅಶೋಕ ಪಾಟೀಲ್ ಸಂಗೊಳಗಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮಾಡಲು ಉತ್ಸವ ಸಮಿತಿ ನಿರ್ಧರಿಸಿದೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ  ಮಹಾರಾಷ್ಟ್ರ, ತೆಲಂಗಾಣ, ಆಂಧ್ರದ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಯಾ ಪ್ರದೇಶದ ಜಿಲ್ಲಾ ಹಾಗೂ ತಾಲ್ಲೂಕುವಾರು ರಾಷ್ಟ್ರೀಯ ಬಸವ ದಳದ ಪ್ರಮುಖರಿಗೆ, ಪದಾಧಿಕಾರಿಗಳಿಗೆ ನಾನಾ ಸಮಿತಿಗಳ ಹೊಣೆಗಾರಿಕೆ ವಹಿಸಲಾಗಿದೆ. ಪರ್ವಕ್ಕೆ ಬರುವ ಎಲ್ಲ ಬಸವ ಭಕ್ತರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಮಾತೆ ಸತ್ಯಾದೇವಿ ಅವರು ಉತ್ಸವದ ಪ್ರಚಾರ ತಂಡದ ನೇತೃತ್ವ ವಹಿಸಿದ್ದಾರೆ ಎಂದರು.
ಉತ್ಸವ ಸಮಿತಿ ಸಹ-ಆಯೋಜಕರಾದ ಬಸವ ಮಹಾಮನೆ ಮುಖ್ಯಸ್ಥ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಉತ್ಸವದ ಎಲ್ಲ ತಯಾರಿ ಭರದಿಂದ ಸಾಗಿವೆ. ಉತ್ಸವದಲ್ಲಿ ಹೆಚ್ಚಿನ ಬಸವಭಕ್ತರು ಪಾಲ್ಗೊಳ್ಳಬೇಕೆಂದು ಕೋರಿದರು. ಮಾತೆ ಸತ್ಯಾದೇವಿ, ರಾಜೇಂದ್ರಕುಮಾರ ಜೊನ್ನಿಕೇರಿ, ಶಿವರಾಜ ಪಾಟೀಲ್ ಅತಿವಾಳ, ಬಸವಂತರಾವ ಬಿರಾದಾರ, ಸಂಜೀವಕುಮಾರ ಬುಕ್ಕಾ ಇದ್ದರು.

***

Note from Kannada.Club : This story has been auto-generated from a syndicated feed from http://vijayavani.net/kalayanparvaprepration/