ಏನಾಗುತ್ತಿದೆ ಬಿಬಿಎಂಪಿಯಲ್ಲಿ ?

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಅತಂತ್ರ ಪಾಲಿಕೆ ಸೃಷ್ಟಿಯಾದಾಗಿಂದಲೂ ಪ್ರತಿ ಬಾರಿಯ ಮೇಯರ್​, ಉಪ ಮೇಯರ್​ ಚುನಾವಣೆ ಸಂದರ್ಭದಲ್ಲಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು ರಾಜ್ಯದ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇದೆ. ಕ್ಷಿಪ್ರ ರಾಜಕೀಯ ಕಾರ್ಯಚಟುವಟಿಕೆಯ ಕೇಂದ್ರ ಬಿಂದುವಾಗುತ್ತಲೇ ಇದೆ. ಈ ಬಾರಿಯ ಚುನಾವಣೆಯೂ ಅದಕ್ಕೆ ಭಿನ್ನವಾಗಿಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಕೂಟ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆದಿದ್ದು, ಪಕ್ಷೇತರರು ಕೀಲಿ ಕೈಗಳಾಗಿದ್ದಾರೆ.

ಕಾಂಗ್ರೆಸ್​ನ ಮೇಯರ್​ ಅಭ್ಯರ್ಥಿ ಗಂಗಾಬಿಕೆ

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಕೂಟ ಈಗಾಗಲೇ ಜಯನಗರ ವಾರ್ಡ್​ನ ಕಾಂಗ್ರೆಸ್​ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ್​ ಅವರನ್ನು ಮೇಯರ್​ ಅಭ್ಯರ್ಥಿ ಎಂದು ಘೋಷಿಸಿದೆ. ಗಂಗಾಬಿಕೆ ಅವರು ಶುಕ್ರವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಉಪ ಮೇಯರ್​ ಸ್ಥಾನಕ್ಕೆ ಜೆಡಿಎಸ್​ನಿಂದ ಕಾವೇರಿ ನಗರ ವಾರ್ಡ್​ನ ರಮಿಳಾ ಉಮಾಶಂಕರ್​ ನಾಮಪತ್ರ ಸಲ್ಲಿಸಿದ್ದಾರೆ.

ಇತ್ತ ಪಾಲಿಕೆಯಲ್ಲಿ ಹೆಚ್ಚು ಸಂಖ್ಯೆಗಳನ್ನು ಹೊಂದಿದ್ದರೂ, ನಾಲ್ಕು ವರ್ಷಗಳಿಂದಲೂ ಅಧಿಕಾರ ಪಡೆಯಲಾಗದೆ ಪರಿತಪಿಸಿರುವ ಬಿಜೆಪಿ, ಈ ಬಾರಿಯ ಮೇಯರ್​, ಉಪ ಮೇಯರ್​ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪದ್ಮನಾಭನಗರ ವಾರ್ಡ್​ನ ಶೋಭಾ ಆಂಜನಪ್ಪ ಅವರನ್ನು ಮೇಯರ್​ ಸ್ಥಾನಕ್ಕೆ ಮತ್ತು ಧರ್ಮರಾಯಸ್ವಾಮಿ ದೇವಾಲಯ ವಾರ್ಡ್​ನ ಪ್ರತಿಭಾ ಧನರಾಜ್​ ಅವರನ್ನು ಉಪ ಮೇಯರ್​ ಸ್ಥಾನದ ಚುನಾವಣೆಗೆ ಕಣಕ್ಕಿಳಿಸಿದೆ.

ಪಕ್ಷೇತರ 7 ಸದಸ್ಯರು ಮತ್ತು ಎಸ್​ಡಿಪಿಐನ ಓರ್ವ ಸದಸ್ಯನ ಪೈಕಿ, ಗಾಯಿತ್ರಿ, ಏಳುಮಲೈ, ಲಕ್ಷ್ಮೀನಾರಾಯಣ, ಗುಂಡಣ್ಣ, ಚಂದ್ರಪ್ಪ ರೆಡ್ಡಿ ಸೇರಿ ಐವರು ಕಾಂಗ್ರೆಸ್​ ಜತೆಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್​ ಶಾಸಕರಾದ ಎಸ್​.ಟಿ ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜು ನೇತೃತ್ವದಲ್ಲಿ ಇವರು ರಾಮನಗರದ ಈಗಲ್ಟನ್​ ರೆಸಾರ್ಟ್​ನಲ್ಲಿ ಗುರುವಾರ ವಾಸ್ತವ್ಯ ಹೂಡಿದ್ದರು. ಇವರೆಲ್ಲರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲು ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ಇನ್ನಿಬ್ಬರು ಪಕ್ಷೇತರ ಸದಸ್ಯರು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಜೆಡಿಎಸ್​ ನಡೆಸಿದ ಸಭೆಗೆ ಪಾದರಾಯನಪುರ ವಾರ್ಡ್​ನ ಇಮ್ರಾನ್​ ಪಾಷಾ, ಲಗ್ಗೆರೆ ವಾರ್ಡ್​ನ ಮಂಜುಳಾ ನಾರಾಯಣ ಸ್ವಾಮಿ, ಬಿಟಿಎಂ ಲೇಔಟ್​ನ ದೇವಾದಸ್​, ಕೆ.ಆರ್​ ಮಾರುಟ್ಟೆ ವಾರ್ಡ್​ನ ನಜೀಂ ಖಾನ್​ ಸಭೆಗೆ ಗೈರಾಗಿದ್ದರು. ಹೀಗಾಗಿ ಈ ನಾಲ್ವರ ನಡೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನು ಪಾಲಿಕೆಯಲ್ಲಿ 123 ಮತಗಳನ್ನು ಹೊಂದಿರುವ ಬಿಜೆಪಿಗೆ ಎರಡು ಮತಗಳು ಕಡಿತಗೊಳ್ಳುವ ಸಾಧ್ಯತೆಗಳಿವೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಅನಂತ್​ ಕುಮಾರ್​ ವಿದೇಶದಲ್ಲಿದ್ದು, ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಅನುಮಾನ ಎನ್ನಲಾಗಿದೆ.

ಬಿಜೆಪಿಯ ಮೇಯರ್​ ಅಭ್ಯರ್ಥಿ ಶೋಭಾ ಆಂಜನಪ್ಪ ಮತ್ತು ಉಪ ಮೇಯರ್​ ಅಭ್ಯರ್ಥಿ ಪ್ರತಿಭಾ ಧನರಾಜ್​

ಬಿಜೆಪಿಯಿಂದ ಉಪಮೇಯರ್​ ಸ್ಥಾನದ ಚುನಾವಣೆಗೆ ನಿಯೋಜನೆಗೊಂಡಿದ್ದ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಬದಲಾಗಿದ್ದಾರೆ. ಈ ಮೊದಲು ಮೋಹನ್ ಎಂಬವರನ್ನು ಬಿಜೆಪಿ ತನ್ನ ಉಪ ಮೇಯರ್​ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಆದರೆ, ಅವರ ಸೋದರಿಗೆ ಅಪಘಾತವಾದ ಹಿನ್ನೆಲೆಯಲ್ಲಿ ಮೋಹನ್​ ಅವರ ಬದಲಿಗೆ ಧರ್ಮರಾಯಸ್ವಾಮಿ ವಾರ್ಡ್​ನ ಪ್ರತಿಭಾ ಧನರಾಜ್​ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ 11.30ಕ್ಕೆ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾವಣೆ ಮಾಡಲಿದ್ದಾರೆ.

ಚುನಾವಣೆವರೆಗೂ ಮಾತ್ರ ನಾನು ಕಾಂಗ್ರೆಸ್​ನ ವ್ಯಕ್ತಿ. ಮೇಯರ್​ ಆಗಿ ಆಯ್ಕೆಯಾದ ನಂತರ ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಕೋರ್ಟ್​ನಿಂದ ಹೇಳಿಸಿಕೊಂಡು ಕೆಲಸ ಮಾಡುವುದಿಲ್ಲ. ಮೇಯರ್ ಚುನಾವಣೆ ಎಂಬುದು ನಂಬರ್ ಗೇಮ್ ಅಷ್ಟೆ.

|ಗಂಗಾಂಬಿಕೆ, ಕಾಂಗ್ರೆಸ್​ನ ಮೇಯರ್​ ಅಭ್ಯರ್ಥಿ

ನಾವು ಐದು ಜನ ಪಕ್ಷೇತರರು ಒಟ್ಟಾಗಿದ್ದೇವೆ. ನಾವೆಲ್ಲ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತೇವೆ.

|ಚಂದ್ರಪ್ಪ ರೆಡ್ಡಿ, ಪಾಲಿಕೆಯ ಪಕ್ಷೇತರ ಸದಸ್ಯ

ಕಾಂಗ್ರೆಸ್​ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಈ ಬಾರಿಯ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಪಕ್ಷೇತರರಿಗೆ ಕಾಂಗ್ರೆಸ್ ಕೊಡಬಾರದ ಕಾಟ ಕೊಟ್ಟಿದೆ. ಹೀಗಾಗಿ ಪಕ್ಷೇತರರು ನಮಗೆ ಬೆಂಬಲ ಕೊಡಲಿದ್ದಾರೆ. ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಚುನಾವಣೆಯಲ್ಲಿ ಸಂಖ್ಯಾಬಲ ಬರುವ ವಿಶ್ವಾಸವಿದೆ. ಕಾಂಗ್ರೆಸ್​ನಲ್ಲಿನ ಭಿನ್ನಮತವೇ ನಮಗೆ ಲಾಭವಾಗಲಿದೆ.

|ಪದ್ಮನಾಭ ರೆಡ್ಡಿ , ಪಾಲಿಕೆ ವಿಪಕ್ಷ ನಾಯಕ

 

***

Note from Kannada.Club : This story has been auto-generated from a syndicated feed from http://vijayavani.net/mayor-deputy-mayor-elections-bjp-congress-jds-gangambike-ramila-umashankar-shobha-anjanappa-bbmp-bruhat-bangalore-mahanagara-palike-corporation/