ಅರಕಲಗೂಡು ದಸರಾ ಉತ್ಸವಕ್ಕೆ ಚಾಲನೆ

ಅರಕಲಗೂಡು: ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಬುಧವಾರ ರಾತ್ರಿ 2018ರ  ದಸರಾ ಕಾರ್ಯಕ್ರಮಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಕಾರ್ಯಕ್ರಮಗಳ ಆಯೋಜನೆಗೆ ಸರ್ಕಾರ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು.

ಇಲ್ಲಿನ ದಸರಾ ಉತ್ಸವಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ರಾಜರು, ಪಾಳೆಗಾರರ ಕಾಲದ ಆಳ್ವಿಕೆಯಲ್ಲೂ ಇಲ್ಲಿ ಉತ್ಸವ ನಡೆಯತ್ತಿದ್ದ ಕುರಿತು ಮಾಹಿತಿ ಇದೆ. ಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ಕಾರ್ಯಕ್ರಮಕ್ಕೆ 21ವರ್ಷಗಳ ಹಿಂದೆ ಮರು ಚಾಲನೆ ದೊರೆತಿದ್ದು, ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಅರೇ ಮಾದನಹಳ್ಳಿ ವಿಶ್ವ ಕರ್ಮ ಮೂಲ ಮಠದ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಪಪಂ ಅಧ್ಯಕ್ಷ ಕೆ.ಸಿ.ಲೊಕೇಶ್, ಉಪಾಧ್ಯಕ್ಷೆ ಸಾಕಮ್ಮ, ಜಿಪಂ ಸದಸ್ಯೆ ರತ್ನಮ್ಮ ಲೋಕೇಶ್, ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ಪಪಂ ಸದಸ್ಯರು, ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮ್ಯಾರಾಥಾನ್ ಸ್ಪರ್ಧೆಯಲ್ಲಿ ಶ್ರೀಧರ್ ಪ್ರಥಮ : ಯುವ ದಸರಾ ಅಂಗವಾಗಿ ಗುರುವಾರ ಆಯೋಜಿಸಿದ್ದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ತಾಲೂಕಿನ ಸರಗೂರು ಗ್ರಾಮದ ಶ್ರೀಧರ್ ಮೊದಲ ಸ್ಥಾನ ಹಾಗೂ ರಾಗಿಮರೂರು ಗ್ರಾಮದ ಸುಮಂತ್ ಎರಡನೆ ಸ್ಥಾನ ಗಳಿಸಿದರು. ರಾಮನಾಥಪುರದಿಂದ ಅರಕಲಗೂಡಿನವರೆಗೆ (20 ಕಿ.ಮೀ) ನಡೆದ ಓಟದ ಸ್ಪರ್ಧೆಯಲ್ಲಿ 12 ಸ್ಪರ್ಧಿಗಳು ಭಾಗವಹಿಸಿದ್ದರು. ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಾತರಾಷ್ಟ್ರೀಯ ಕುಬ್ಜ ಕ್ರೀಡಾಪಟು ಶಾಂತಕುಮಾರ್ ಬಹುಮಾನಗಳನ್ನು ವಿತರಿಸಿದರು. ಶಾಸಕ ಎ.ಟಿ. ರಾಮಸ್ವಾಮಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬರಾವ್ ಉಪಸ್ಥಿತರಿದ್ದರು.

***

Note from Kannada.Club : This story has been auto-generated from a syndicated feed from http://vijayavani.net/arakalagudu-dasara-marathan/