ಅಪಾರ ಮಹಿಮೆಯ ಸ್ವರ್ಣಗೌರಿ ವ್ರತ

ಶ್ರುತಿ ಪಂಡಿತ್

ಹೆಣ್ಣುಮಕ್ಕಳ ಪಾಲಿಗೆ ಭಾದ್ರಪದಮಾಸದ ಶುಕ್ಲ ತದಿಗೆ ಎಂದರೆ ಸಂಭ್ರಮ. ಈ ದಿನ ಆಚರಿಸಲ್ಪಡುವ ವ್ರತಕ್ಕೆ ದೊಡ್ಡಗೌರಿ, ಸ್ವರ್ಣಗೌರಿ ಮುಂತಾದ ಹೆಸರುಗಳಿವೆ. ಬಂಗಾರದಂತೆ ಹೊಳೆಯುವ ಗೌರಿಯ ಮೂರ್ತಿಯನ್ನು ಷೋಡಶೋಪಚಾರಗಳ ಮೂಲಕ ಈ ದಿನ ಪೂಜೆ ಮಾಡಲಾಗುತ್ತದೆ. ನಂತರ ವ್ರತಕಥೆಯನ್ನು ಕೇಳಿ ಸುಮಂಗಲಿಯರಿಗೆ ಮೊರದ ಬಾಗಿನ ಕೊಡುತ್ತಾರೆ. ಶಿವನನ್ನು ವರಿಸಿ ಕೈಲಾಸದಲ್ಲಿರುವ ಗೌರಿಯು ವರ್ಷಕ್ಕೊಮ್ಮೆ ತವರೂರಾದ ಭೂಮಿಗೆ ಬಂದು ಪೂಜೆ, ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹಿಂದಿರುಗುತ್ತಾಳೆ. ಈ ವ್ರತ ಆಚರಿಸಿದರೆ ಸಂತಾನ, ಅವಿವಾಹಿತರಿಗೆ ವಿವಾಹಭಾಗ್ಯ ದೊರೆಯುವುದೆಂಬ ನಂಬುಗೆಯಿದೆ.

ವ್ರತದ ಮಹಿಮೆ: ಚಂದ್ರಪ್ರಭ ಎನ್ನುವ ರಾಜನು ಬೇಟೆಗೆಂದು ಅರಣ್ಯಕ್ಕೆ ಹೋಗಿದ್ದ. ಅಲ್ಲಿನ ಒಂದು ಸುಂದರ ಸರೋವರದ ಬಳಿ ಅನೇಕ ಅಪ್ಸರೆಯರು ಪೂಜೆಯಲ್ಲಿ ನಿರತರಾಗಿದ್ದನ್ನು ಕಂಡ. ಪೂಜೆಯ ಬಳಿಕ ಅದರ ಮಹತ್ವದ ಬಗ್ಗೆ ಪ್ರಶ್ನಿಸಿದ. ಆಗ ಅವರು ವ್ರತದ ಬಗ್ಗೆ ತಿಳಿಸಿದರು. ಭಾದ್ರಪದ ಶುದ್ಧ ತದಿಗೆಯ ದಿನ ಈ ವ್ರತಾಚರಣೆಯಿಂದ ಸಂತಾನ ಲಭಿಸುತ್ತದೆ ಎಂದು ಹೇಳಿ 16 ಗಂಟು ಹಾಕಿದ ದಾರವನ್ನು ಕೊಟ್ಟರು. ಅರಮನೆಗೆ ಬಂದ ರಾಜನು ಆ ದಾರವನ್ನು ತನ್ನ ಪತ್ನಿಯರಿಬ್ಬರಿಗೆ ಕೊಟ್ಟ. ಮೊದಲ ಪತ್ನಿ ಆ ದಾರವನ್ನು ಒಣಗಿದ ಗಿಡದ ಮೇಲೆಸೆದಳು. ದಾರದ ಪ್ರಭಾವದಿಂದ ಆ ಗಿಡವು ತಕ್ಷಣವೇ ಚಿಗುರತೊಡಗಿತು. ಅದನ್ನು ಕಂಡ ಕಿರಿಯ ಪತ್ನಿ ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು. ನಂತರ ಅವರಿಗೆ ಪುತ್ರಸಂತಾನವಾಯಿತು. ಅವರು ಪ್ರತಿ ವರ್ಷವೂ ಆ ವ್ರತವನ್ನು ಆಚರಿಸಿ ಶಿವಸಾಯುಜ್ಯ ಪಡೆದರೆಂಬ ಪೌರಾಣಿಕ ಕಥೆಯಿದೆ.

ವ್ರತ ಆಚರಿಸುವ ಪದ್ಧತಿ

ಬ್ರಾಹ್ಮಿಮುಹೂರ್ತದಲ್ಲಿ ಸ್ನಾನ ಮಾಡಿ ಮನೆ, ದೇವಸ್ಥಾನ ಅಥವಾ ಮರದ ಕೆಳಗೆ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂರ್ವಾಭಿಮುಖವಾಗಿ ಕುಳಿತು ಪೂಜೆಯ ಸಂಕಲ್ಪ ಮಾಡಬೇಕು. 16 ಗಂಟುಗಳನ್ನು ಹಾಕಿದ ಹಸಿದಾರ ಇಟ್ಟು ಶಾಸ್ತ್ರೋಕ್ತವಾಗಿ ಪೂಜಿಸಿ ಸುಮಂಗಲಿಯರಿಗೆ ಬಾಗಿನ ಕೊಡಬೇಕು. ಸಂಜೆಯೂ ವಿಧಿಪೂರ್ವಕವಾಗಿ ಪೂಜೆ ಮಾಡಿ ಸ್ವರ್ಣಗೌರಿಯ ವಿಸರ್ಜನೆ ಮಾಡಬೇಕು. ತದಿಗೆಯಂದು ಕೂರಿಸಿದ ಗೌರಿಯನ್ನು ಚೌತಿಯಂದು ಕೂರಿಸಿದ ಗಣೇಶನ ಜತೆಗೆ ವಿಸರ್ಜಿಸುವ ರೂಢಿಯೂ ಇದೆ.

***

Note from Kannada.Club : This story has been auto-generated from a syndicated feed from http://vijayavani.net/special-write-up-on-swarna-gouri-fest/